ಭಾನುವಾರ, ಮೇ 29, 2022
29 °C

ಬಿಜೆಪಿ ಸೇರಿದ್ದೇಕೆ? ಉತ್ತರ ನೀಡಿದ್ದಾರೆ ಮುಲಾಯಂ ಸೊಸೆ ಅಪರ್ಣಾ ಯಾದವ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಮಾಜಿ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ತಾವು ಬಿಜೆಪಿ ಸೇರಿದ್ದು ಯಾಕೆ ಎಂಬುದನ್ನು ವಿವರಿಸಿದ್ದಾರೆ. ವಿಧಾನಸಭಾ ಚುನಾವಣೆ ಸ್ಪರ್ಧೆಗೆ ಟಿಕೆಟ್‌ ಪಡೆಯುವ ಸಲುವಾಗಿ ಅಪರ್ಣಾ ಬಿಜೆಪಿ ಸೇರಿದ್ದಾರೆ ಎಂಬ ವಾದಗಳನ್ನು ಅವರು ಇದೇ ವೇಳೆ ಅಲ್ಲಗೆಳೆದಿದ್ದಾರೆ.

‘ನಾನು ಟಿಕೆಟ್‌ಗಾಗಿ ಬಿಜೆಪಿಗೆ ಬಂದಿದ್ದೇನೆ ಎಂದು ಜನರು ಹೇಳುತ್ತಿದ್ದಾರೆ. ಎಸ್‌ಪಿಯಲ್ಲಿ ನನಗೆ ಟಿಕೆಟ್‌ ನಿರಾಕರಿಸಿರಲಿಲ್ಲ. ನಾನು ರಾಷ್ಟ್ರೀಯವಾದ ನಂಬಿ ಬಿಜೆಪಿಗೆ ಬಂದಿದ್ದೇನೆ’ ಎಂದು ಅವರು ಸುದ್ದಿ ವಾಹಿನಿ ‘ಎನ್‌ಡಿಟಿವಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ (ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್) ಅವರ ನೀತಿಗಳಿಂದ ನಾನು ಪ್ರಭಾವಿತಳಾಗಿದ್ದೇನೆ’ ಎಂದು ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಪ್ರತೀಕ್ ಯಾದವ್ ಅವರ ಪತ್ನಿ, 32 ವರ್ಷದ ಅಪರ್ಣಾ ತಿಳಿಸಿದ್ದಾರೆ.

ಅಪರ್ಣಾ ಪಕ್ಷಾಂತರದ ನಂತರ ಮಾತನಾಡಿದ್ದ ಎಸ್‌ಪಿ ವರಿಷ್ಠ ಅಖಿಲೇಶ್‌ ಯಾದವ್‌, ‘ನಾವು ಟಿಕೆಟ್ ನೀಡಲು ಸಾಧ್ಯವಾಗದವರಿಗೆ ಟಿಕೆಟ್ ನೀಡುತ್ತಿರುವುದಕ್ಕೆ ನಾನು ಬಿಜೆಪಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಗೇಲಿ ಮಾಡಿದ್ದರು.

2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರೀಟಾ ಬಹುಗುಣ ಜೋಶಿ ವಿರುದ್ಧ ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಪರ್ಣಾ, ಸುಮಾರು 34,000 ಮತಗಳಿಂದ ಸೋತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು