ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಮುಚ್ಚುವುದು ಅಪಾಯಕಾರಿ: ಅರವಿಂದ ಕೇಜ್ರಿವಾಲ್

‘ಮೇಕ್ ಇಂಡಿಯಾ ನಂ.1’ ಅಭಿಯಾನ
Last Updated 7 ಸೆಪ್ಟೆಂಬರ್ 2022, 14:23 IST
ಅಕ್ಷರ ಗಾತ್ರ

ಚಂಡೀಗಡ: ‘ಸ್ವಾತಂತ್ರ್ಯ ನಂತರ ದೇಶದಲ್ಲಿ ಶಿಕ್ಷಣಕ್ಕೆ ಮಹತ್ವ ನೀಡದೇ ತಪ್ಪು ಮಾಡಲಾಗಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ಹೇಳಿದ್ದಾರೆ.

ತಮ್ಮ ತವರು ಜಿಲ್ಲೆ ಹಿಸ್ಸಾರ್‌ನಲ್ಲಿ ಬುಧವಾರಆಮ್ ಆದ್ಮಿ ಪಕ್ಷದ (ಎಎಪಿ) ‘ಮೇಕ್ ಇಂಡಿಯಾ ನಂ.1’ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿವೆ’ ಎಂದು ಆರೋಪಿಸಿದರು.

‘1947ರ ನಂತರ ಭಾರತವು ದೇಶದ ಮೂಲೆಮೂಲೆಯಲ್ಲಿ ಉತ್ತಮ ಸರ್ಕಾರಿ ಶಾಲೆಗಳನ್ನು ನಿರ್ಮಿಸುವ ಮೂಲಕ ಶಿಕ್ಷಣದತ್ತ ಗಮನ ಕೇಂದ್ರೀಕರಿಸಬೇಕಾಗಿತ್ತು. ಹರಿಯಾಣದಲ್ಲಿರುವ ಈಗಿನ ಸರ್ಕಾರವು ಸುಮಾರು 190 ಸರ್ಕಾರಿ ಶಾಲೆಗಳನ್ನು ಮುಚ್ಚಿದೆ. ಹಿಂದಿನ ಸರ್ಕಾರವು 500 ಶಾಲೆಗಳನ್ನು ಮುಚ್ಚಿತ್ತು. ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವ ಬದಲು ಮುಚ್ಚುತ್ತಿರುವುದು ಪ್ರಸ್ತುತ ದಿನಗಳಲ್ಲಿ ಅಪಾಯಕಾರಿಯಾದ ಪ್ರವೃತ್ತಿಯಾಗಿದೆ. ಆದರೆ, ದೆಹಲಿಯಲ್ಲಿ ಎಎಪಿ ಸರ್ಕಾರವು ಶಾಲೆಗಳನ್ನು ಉನ್ನತೀಕರಿಸಿದ್ದು, ಇದೇ ಮಾದರಿಯಲ್ಲಿ ಪಂಜಾಬ್‌ನಲ್ಲಿನ ಎಎಪಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಅತ್ಯಂತ ಅಪಾಯಕಾರಿಯಾದ ಪ್ರವೃತ್ತಿಯಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ದೇಶದಲ್ಲಿ ಪ್ರತಿನಿತ್ಯ ಸುಮಾರು 27ಕೋಟಿ ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಅದರಲ್ಲಿ 18 ಕೋಟಿ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ನಾವು ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಆ 18 ಕೋಟಿ ಬಡ ಮಕ್ಕಳು ಎಲ್ಲಿಗೆ ಹೋಗಬೇಕು. ಅವರು ಅನಕ್ಷರಸ್ಥರಾಗಿ ಉಳಿದರೆ ದೇಶವು ಹೇಗೆ ಅಭಿವೃದ್ಧಿಯಾಗಲು ಸಾಧ್ಯ’ ಎಂದು ಕೇಜ್ರಿವಾಲ್ ಪ್ರಶ್ನಿಸಿದರು.

‘ದೇಶದಲ್ಲಿ ಸಮರೋಪಾದಿಯಲ್ಲಿ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದನ್ನು ಖಾತ್ರಿಪಡಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 14,500 ಶಾಲೆಗಳನ್ನು ಉನ್ನತೀಕರಿಸುತ್ತಿರುವುದು ಅಭಿನಂದನೀಯ. ಆದರೆ, ಕೆಲವೇ ಶಾಲೆಗಳ ಬದಲು ಎಲ್ಲಾ ಶಾಲೆಗಳನ್ನೂ ಉನ್ನತೀಕರಿಸಬೇಕು. ಈ ಕುರಿತು ಪ್ರಧಾನಿ ಅವರಿಗೆ ನಾನು ಪತ್ರ ಬರೆದಿದ್ದೇನೆ. ಮುಂದಿನ ಐದು ವರ್ಷಗಳಲ್ಲಿ 10.50 ಲಕ್ಷ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದೇನೆ’ ಎಂದರು.

‘ಸ್ವಾತಂತ್ರ್ಯ ಪಡೆದು 75 ವರ್ಷಗಳಾದರೂಭಾರತವು ವಿಶ್ವದಲ್ಲಿ ಏಕೆ ನಂಬರ್ ಒನ್ ಆಗಿಲ್ಲ ಎಂದು ಪ್ರಶ್ನಿಸಿದ ಕೇಜ್ರಿವಾಲ್, ‘ಇಷ್ಟು ವರ್ಷಗಳ ಅವಧಿಯಲ್ಲಿ ರಾಜಕಾರಣಿಗಳು ಬರೀ ರಾಜಕಾರಣದಲ್ಲಿ ತೊಡಗಿದ್ದಾರೆ’ ಎಂದು ದೂರಿದರು.

‘130 ಕೋಟಿ ಜನರು ಒಂದಾದರೆ ಭಾರತವು ನಂಬರ್ ಒನ್ ರಾಷ್ಟ್ರವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ನಾವು ದೇಶದ ಪ್ರತಿ ಮೂಲೆಮೂಲೆಯನ್ನು ತಲುಪುತ್ತೇವೆ. ಎಲ್ಲ ರಾಜ್ಯಗಳ ಜನರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT