ಶುಕ್ರವಾರ, ಡಿಸೆಂಬರ್ 3, 2021
26 °C
ಡ್ರಗ್ಸ್ ಪಾರ್ಟಿ ನಡೆದ ದಿನ ಆರ್ಯನ್‌ ಖಾನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಕಿರಣ್‌ ಗೋಸವಿ

ಡ್ರಗ್ಸ್‌ ಪ್ರಕರಣ: ಪೊಲೀಸರಿಗೆ ಶರಣಾಗಲು ಮುಂದಾದ ಪ್ರಮುಖ ಸಾಕ್ಷಿ ಕಿರಣ್‌ ಗೋಸವಿ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

Pallavi Paliwal

ಮುಂಬೈ: ಮುಂಬೈ ಕಡಲ ಕಿನಾರೆಯ ಸಮೀಪ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆಯುತ್ತಿದ್ದು, ಇದೀಗ ಪ್ರಮುಖ ಸಾಕ್ಷಿ ಕಿರಣ್‌ ಗೋಸವಿ ಪೊಲೀಸರಿಗೆ ಶರಣಾಗಲು ಮುಂದಾಗಿದ್ದಾರೆ.

ಬಾಲಿವುಡ್‌ ನಟ ಶಾರುಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ನನ್ನು ಮಾದಕ ಪದಾರ್ಥ ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಬಂಧಿಸಿದ ಬಳಿಕ ಖಾಸಗಿ ವಕೀಲ ಕಿರಣ್‌ ಗೋಸವಿ ಅವರು ಆರ್ಯನ್‌ ಜೊತೆ ತೆಗೆದುಕೊಂಡಿದ್ದ ಸೆಲ್ಫಿಮತ್ತು ವಿಡಿಯೋಗಳಿಂದ ಸುದ್ದಿಯ ಮುನ್ನೆಲೆಗೆ ಬಂದಿದ್ದರು.

ಡ್ರಗ್ಸ್‌ ಸೇವನೆ ಪ್ರಕರಣ ನಡೆದಾಗ ಸ್ಥಳದಲ್ಲಿ ಕಿರಣ್‌ ಗೋಸವಿ ಇರುವುದು ಸೆಲ್ಫಿ ಮತ್ತು ವಿಡಿಯೋದಿಂದ ಬಯಲಾಗಿತ್ತು. ಹೀಗಾಗಿ ಎನ್‌ಸಿಬಿ ಗೋಸವಿ ಅವರನ್ನು ಪ್ರಮುಖ ಸಾಕ್ಷಿಯಾಗಿ ಗುರುತಿಸಿ, ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಿತ್ತು.

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಕಿರಣ್‌ ಗೋಸವಿ ಎನ್‌ಸಿಬಿಯ 'ಸ್ವತಂತ್ರ ಸಾಕ್ಷಿ'. ಮಹಾರಾಷ್ಟ್ರದಲ್ಲಿ ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿರುವ ಗೋಸವಿ ಉತ್ತರ ಪ್ರದೇಶ ಪೊಲೀಸರಿಗೆ ಶರಣಾಗಲು ಬಯಸಿದ್ದಾರೆ ಎನ್ನಲಾಗಿದೆ.

'ಲಖನೌ ಪೊಲೀಸ್‌ ಠಾಣೆಯು ಪ್ರಕರಣದ ವ್ಯಾಪ್ತಿಗೆ ಬಾರದೆ ಇರುವುದರಿಂದ ಕಿರಣ್‌ ಗೋಸವಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅವರು ಇಲ್ಲಿ ಶರಣಾಗಲು ಸಾಧ್ಯವಿಲ್ಲ' ಎಂದು ಲಖನೌ ಪೊಲೀಸ್‌ ಕಮಿಷನರ್‌ ಡಿಕೆ ಠಾಕೂರ್‌ ತಿಳಿಸಿದ್ದಾರೆ.

ಗೋಸವಿ ಅವರ ಧ್ವನಿ ಎನ್ನಲಾದ ಧ್ವನಿಸುರಳಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಇದರಲ್ಲಿ ಕರೆ ಮಾಡಿದ ವ್ಯಕ್ತಿಯು ಮಢಿಯಾಂ ಪೊಲೀಸ್‌ ಚೌಕಿಯೇ ಎಂದು ಕೇಳಿ ಖಾತರಿ ಪಡಿಸಿಕೊಳ್ಳುತ್ತಾರೆ. ಬಳಿಕ 'ನಾನಿಲ್ಲಿಗೆ ಬರಬೇಕು. ನಾನು ಕಿರಣ್‌ ಗೋಸವಿ. ನಾನು ಶರಣಾಗಬೇಕು' ಎಂದು ಹೇಳಿದ್ದಾರೆ.

ಪೊಲೀಸರು ಕಾರಣ ಕೇಳಿದಾಗ, 'ಸದ್ಯದ ಪರಿಸ್ಥಿತಿಯಲ್ಲಿ ಇದುವೇ ಸಮೀಪದ ಪೊಲೀಸ್‌ ಠಾಣೆಯಾಗಿದೆ' ಎಂದು ಗೋಸವಿ ಹೇಳಿದ್ದಾರೆ. ಗೋಸವಿ ಅವರು ಶರಣಾಗಲು ಮುಂದಾಗಿರುವುದನ್ನು ಖಾತರಿ ಪಡಿಸಿಕೊಂಡ ಬಳಿಕ ಪೊಲೀಸರು 'ಇಲ್ಲ, ನೀವಿಲ್ಲಿ ಶರಣಾಗಲು ಸಾಧ್ಯವಿಲ್ಲ. ಬೇರೆ ಕಡೆ ಪ್ರಯತ್ನಿಸಿ' ಎಂದಿರುವುದು ಧ್ವನಿಸುರಳಿಯಲ್ಲಿದೆ.

ಮಢಿಯಾಂ ಪೊಲೀಸ್‌ ಠಾಣೆಯಿಂದ ಆಡಿಯೋ ತುಣುಕು ಬಯಲಾಗಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದು, ಭದ್ರತೆ ಬಗ್ಗೆ ಪ್ರಶ್ನಿಸಲಾಗುತ್ತಿದೆ. ಠಾಣೆಗೆ ಸಾಕಷ್ಟು ಅಧಿಕಾರಿಗಳು ಆಗಮಿಸಿದ್ದಾರೆ.

ಪ್ರಕರಣದ ಮತ್ತೊಬ್ಬ ಪ್ರಮುಖ ಸಾಕ್ಷಿ ಪ್ರಭಾಕರ್‌ ಸೈಲ್‌ ಅವರು ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ವಿರುದ್ಧ ಲಂಚದ ಆರೋಪ ಮಾಡಿದ್ದಾರೆ. ಪ್ರಕರಣದಿಂದ ಆರ್ಯನ್‌ ಖಾನ್‌ನನ್ನು ಕೈಬಿಡಲು ವಾಂಖೆಡೆ ಮತ್ತು ಇತರರು 25 ಕೋಟಿಗೆ ಬೇಡಿಕೆ ಇರಿಸಿದ್ದರು ಎಂದು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು