ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Assembly Elections 2022: ಗೋವಾ, ಉತ್ತರಾಖಂಡ: ಇಂದು ಮತದಾನ

ಉತ್ತರ ಪ್ರದೇಶದ 55 ಕ್ಷೇತ್ರಗಳಲ್ಲಿ ಎರಡನೇ ಹಂತ:
Last Updated 13 ಫೆಬ್ರುವರಿ 2022, 20:30 IST
ಅಕ್ಷರ ಗಾತ್ರ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಸೋಮವಾರ ನಡೆಯಲಿದೆ. ಈ ಹಂತದಲ್ಲಿ ಉತ್ತರ ಪ್ರದೇಶದ 55 ಕ್ಷೇತ್ರಗಳಲ್ಲಿ ಮತದಾನ ಆಗಲಿದೆ. ಉತ್ತರಾಖಂಡ ಮತ್ತು ಗೋವಾ ವಿಧಾನಸಭೆಗೂ ಸೋಮವಾರ ಮತದಾನ ಆಗಲಿದೆ. ಈ ಎರಡೂ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ಪೂರ್ಣಗೊಳ್ಳಲಿದೆ. ಉತ್ತರಾಖಂಡದಲ್ಲಿ 70 ಕ್ಷೇತ್ರಗಳಿದ್ದರೆ, ಗೋವಾದಲ್ಲಿ 40 ಕ್ಷೇತ್ರಗಳಿವೆ. ಈ ಮೂರೂ ರಾಜ್ಯಗಳಲ್ಲಿ ಈಗ ಬಿಜೆಪಿ ನೇತೃತ್ವದ ಸರ್ಕಾರಗಳು ಇವೆ

ಉತ್ತರ ಪ್ರದೇಶದಲ್ಲಿಬಿಜೆಪಿ–ಎಸ್‌ಪಿ ನೇರ ಹಣಾಹಣಿ?
ಉತ್ತರ ಪ್ರದೇಶದ ಪಶ್ಚಿಮ ಭಾಗ ಮತ್ತು ರೋಹಿಲ್‌ಖಂಡ ‍ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಮತದಾನ ಆಗಲಿದೆ. ಸಹರನ್‌ಪುರ, ಮೊರಾದಾಬಾದ್‌, ಸಂಭಾಲ್‌, ರಾಂಪುರ, ಅಮ್ರೋಹ, ಬದೌನ್‌, ಬರೇಲಿ ಮತ್ತು ಶಾಜಹಾನ್‌ಪುರ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಎಸ್‌ಪಿ ನಡುವೆ ನೇರ ಹಣಾಹಣಿ ಇದ್ದಂತೆ ಕಾಣಿಸುತ್ತಿದೆ.

ಒಟ್ಟು 586 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಸಮಾಜವಾದಿ ಪಕ್ಷದ ಮುಖಂಡ ಮೊಹಮ್ಮದ್‌ ಆಜಂ ಖಾನ್‌ ಮತ್ತು ಹಣಕಾಸು ಸಚಿವ ಸುರೇಶ್‌ ಖನ್ನಾ ಕಣದಲ್ಲಿ ಇರುವ ಪ್ರಮುಖರು.

ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಮುಸ್ಲಿಮರು ಮತ್ತು ದಲಿತರು ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಕಳೆದ ಬಾರಿ ಈ ಪ್ರದೇಶದಲ್ಲಿ ಎಸ್‌ಪಿಯಿಂದ 10 ಮುಸ್ಲಿಮರು ಗೆದ್ದಿದ್ದರು. ಬರೇಲ್ವಿ ಮತ್ತು ದೇವಬಂದ್‌ ಪಂಗಡದ ಧಾರ್ಮಿಕ ನಾಯಕರ ಪ್ರಭಾವ ಇಲ್ಲಿ ವ್ಯಾಪಕವಾಗಿದೆ. ಇದು ಸಮಾಜವಾದಿ ಪಕ್ಷವು ಪ್ರಾಬಲ್ಯ ಹೊಂದಿರುವ ಪ್ರದೇಶ ಎಂದು ಪರಿಗಣಿತವಾಗಿದೆ.

ಯೋಗಿ ಆದಿತ್ಯನಾಥ ಸಂಪುಟದಲ್ಲಿ ಸಚಿವರಾಗಿದ್ದ ಧರಂ ಸಿಂಗ್‌ ಸೈನಿ ಅವರ ಭವಿಷ್ಯವೂ ಈ ಹಂತದಲ್ಲಿ ನಿರ್ಧಾರ ಆಗಲಿದೆ. ಚುನಾವಣೆ ಘೋಷಣೆಯಾದ ಬಳಿಕ ಅವರು ಬಿಜೆಪಿಗೆ ರಾಜೀನಾಮೆ ನೀಡಿ ಎಸ್‌ಪಿ ಸೇರಿದ್ದಾರೆ. ಖನ್ನಾ ಅವರು ಶಾಜಹಾನ್‌ಪುರ, ಸೈನಿ ಅವರು ನಾಕುಡ್‌, ಆಜಂ ಖಾನ್‌ ಅವರು ರಾಂಪುರದಿಂದ ಸ್ಪರ್ಧಿಸಿದ್ದಾರೆ. ಆಜಂ ಖಾನ್‌ ಅವರ ಮಗ ಅಬ್ದುಲ್ಲಾ ಆಜಂ ಅವರು ಸ್ವರ್‌ ಕ್ಷೇತ್ರದಿಂದ ಕಣದಲ್ಲಿದ್ದಾರೆ.

ಅಬ್ದುಲ್ಲಾ ವಿರುದ್ಧ ಹೈದರ್‌ ಅಲಿ ಖಾನ್‌ ಸ್ಪರ್ಧಿಸಿದ್ದಾರೆ. ಇವರು ರಾಂಪುರ ನವಾಬ್‌ ಕುಟುಂಬದವರು. ಬಿಜೆಪಿಯ ಮಿತ್ರ ಪಕ್ಷ ಅಪ್ನಾದಳ ಇವರಿಗೆ ಟಿಕೆಟ್‌ ನೀಡಿದೆ.

ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಮುಖ ಪ್ರಚಾರಕರಾಗಿದ್ದರು. ಮುಖ್ಯ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷವನ್ನೇ ಗುರಿಯಾಗಿಸಿಕೊಂಡು ಅವರು ಪ್ರಚಾರ ನಡೆಸಿದ್ದಾರೆ. ರಾಜ್ಯವನ್ನು ಗಲಭೆಮುಕ್ತವಾಗಿ ಇರಿಸಬೇಕಿದ್ದರೆ ಬಿಜೆಪಿ ಅಧಿಕಾರದಲ್ಲಿ ಇರಬೇಕು ಎಂದು ಅವರು ಪ್ರತಿಪಾಸಿದ್ದಾರೆ. ತ್ರಿವಳಿ ತಲಾಖ್‌ ವಿರುದ್ಧದ ಕಾಯ್ದೆಯನ್ನೂ ಅವರು ಉಲ್ಲೇಖಿಸಿದ್ದಾರೆ.

ಸಮಾಜವಾದಿ ಪಕ್ಷದ ಪರವಾಗಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಪ್ರಮುಖ ಪ್ರಚಾರಕ. ‘ವಿಶ್ವವಿದ್ಯಾಲಯ ಕಟ್ಟಿದ ಆಜಂ ಖಾನ್‌ ಅವರು ಜೈಲಲ್ಲಿ ಇದ್ದಾರೆ. ಆದರೆ, ರೈತರ ಮೇಲೆ ವಾಹನ ಹರಿಸಿ ಹತ್ಯೆ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿ ಜಾಮೀನಿನಲ್ಲಿ ಹೊರಗೆ ಬಂದಿದ್ದಾರೆ’ ಎಂದು ಅಖಿಲೇಶ್‌ ಹೇಳಿದ್ದಾರೆ.

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ಚುನಾವಣಾ ಪ್ರಚಾರದಲ್ಲಿ ಈ ಬಾರಿ ಬಿರುಸು ಇರಲಿಲ್ಲ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಿಳೆಯರನ್ನು ಕೇಂದ್ರವಾಗಿರಿಸಿ ಪ್ರಚಾರ ನಡೆಸಿದ್ದಾರೆ.

ಗೋವಾ: ಬಹುಕೋನ ಸ್ಪರ್ಧೆ ಸಾಧ್ಯತೆ
ಗೋವಾದ 40 ವಿಧಾನಸಭಾ ಕ್ಷೇತ್ರಗಳಲ್ಲಿ 301 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈವರೆಗೆ, ಇಲ್ಲಿ ಎರಡು ಪಕ್ಷಗಳ ನಡುವೆ ನೇರ ಸ್ಪರ್ಧೆ ಇತ್ತು. ಈ ಬಾರಿ ಆಮ್‌ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್‌ ಪಕ್ಷಗಳು ಸ್ಪರ್ಧೆಗೆ ಇಳಿದಿವೆ. ಹಾಗಾಗಿ, ಬಹುಕೋನ ಸ್ಪರ್ಧೆ ಕಾಣಿಸುತ್ತಿದೆ.

ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ (ಬಿಜೆಪಿ), ವಿರೋಧ ಪಕ್ಷದ ನಾಯಕ ದಿಗಂಬರ ಕಾಮತ್‌ (ಕಾಂಗ್ರೆಸ್‌), ಮಾಜಿ ಮುಖ್ಯಮಂತ್ರಿಗಳಾದ ಚರ್ಚಿಲ್‌ ಅಲೆಮಾವೊ (ಟಿಎಂಸಿ), ರವಿ ನಾಯಕ್‌ (ಬಿಜೆಪಿ) ಲಕ್ಷ್ಮಿಕಾಂತ್‌ ಪರ್ಸೇಕರ್‌ (ಪಕ್ಷೇತರ) ಕಣದಲ್ಲಿರುವ ಪ್ರಮುಖರು. ಗೋವಾ ಫಾರ್ವರ್ಡ್‌ ಪಾರ್ಟಿಯ (ಜಿಎಫ್‌ಪಿ) ವಿಜಯ್‌ ಸರ್ದೇಸಾಯಿ, ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ (ಎಂಜಿಪಿ) ಸುದಿನ್‌ ಧವಳೀಕರ್‌, ಮಾಜಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಮಗ ಉತ್ಪಲ್‌ ಪರಿಕ್ಕರ್‌ (ಪಕ್ಷೇತರ) ಅವರೂ ಸ್ಪರ್ಧೆಯಲ್ಲಿ ಇದ್ದಾರೆ.

ಕಾಂಗ್ರೆಸ್‌ ಮತ್ತು ಗೋವಾ ಫಾರ್ವರ್ಡ್‌ ಪಾರ್ಟಿ ಮೈತ್ರಿ ಮಾಡಿಕೊಂಡಿವೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ನಡುವೆ ಮೈತ್ರಿ ಇದೆ. ಶಿವಸೇನಾ ಮತ್ತು ಎನ್‌ಸಿಪಿ ಜತೆಯಾಗಿ ಸ್ಪರ್ಧಿಸುತ್ತಿವೆ. ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಏಕಾಂಗಿಯಾಗಿಯೇ ಸ್ಪರ್ಧಿಸಿದೆ. ದಿ ರೆವಲ್ಯೂಷನರಿ ಗೋವನ್ಸ್‌, ಗೋವೆಂಚೊ ಸ್ವಾಭಿಮಾನ್‌ ಪಾರ್ಟಿ, ಜೈ ಮಹಾಭಾರತ್‌ ಪಾರ್ಟಿ, ಸಂಭಾಜಿ ಬ್ರಿಗೇಡ್‌ ಮುಂತಾದ ಪಕ್ಷಗಳೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. 68 ಮಂದಿ ಪಕ್ಷೇತರರೂ ಸ್ಪರ್ಧೆಯಲ್ಲಿ ಇದ್ದಾರೆ. 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ 82.56ರಷ್ಟು ಮತದಾನ ಆಗಿತ್ತು. 17 ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, 13 ಕ್ಷೇತ್ರಗಳಲ್ಲಿ ಗೆದ್ದ ಬಿಜೆಪಿ ಪ್ರಾದೇಶಿಕ ಪಕ್ಷಗಳು ಮತ್ತು ಪಕ್ಷೇತರರ ನೆರವಿನೊಂದಿಗೆ ಸರ್ಕಾರ ರಚಿಸಿತ್ತು. ಈ ಬಾರಿ, ಬಿಜೆಪಿ ಯಾವ ಪಕ್ಷದ ಜತೆಗೂ ಮೈತ್ರಿ ಮಾಡಿಕೊಂಡಿಲ್ಲ.

ಉತ್ತರಾಖಂಡ: ಪರ್ಯಾಯ ಆಳ್ವಿಕೆಗೆ ಎಎಪಿ ಸವಾಲು
ಉತ್ತರಾಖಂಡದಲ್ಲಿ 632 ಅಭ್ಯರ್ಥಿಗಳಿದ್ದಾರೆ. ಅವರಲ್ಲಿ 152 ಮಂದಿ ಪಕ್ಷೇತರರು.ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ಇಲ್ಲಿ ಅಬ್ಬರದ ಪ್ರಚಾರ ನಡೆಸಿವೆ. ವರ್ಚುವಲ್‌ ಮತ್ತು ಭೌತಿಕ ರ‍್ಯಾಲಿಗಳು ನಡೆದಿವೆ. ಅಭ್ಯರ್ಥಿಗಳು ಮತ್ತು ಮುಖಂಡರು ಮನೆ ಮನೆ ಪ್ರಚಾರವನ್ನೂ ಮಾಡಿದ್ದಾರೆ.

2000ನೇ ಇಸವಿಯಲ್ಲಿ ಉತ್ತರಾಖಂಡ ರಾಜ್ಯ ರಚನೆಯಾದ ಬಳಿಕ ಇಲ್ಲಿ ನಡೆಯುತ್ತಿರುವ ಐದನೇ ಚುನಾವಣೆ ಇದು. ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ, ಸಚಿವರಾದ ಸತ್ಪಾಲ್‌ ಮಹಾರಾಜ್‌, ಸುಬೋಧ್‌ ಉನಿಯಾಲ್‌, ಅರವಿಂದ ಪಾಂಡೆ, ಧನ್‌ ಸಿಂಗ್‌ ರಾವತ್‌, ರೇಖಾ ಆರ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮದನ್‌ ಕೌಶಿಕ್‌ ಕಣದಲ್ಲಿರುವ ಪ್ರಮುಖರು. ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌, ಮಾಜಿ ಸಚಿವರಾದ ಯಶಪಾಲ್‌ ಆರ್ಯ, ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಗಣೇಶ್‌ ಗೊಡಿಯಾಲ್‌, ವಿರೋಧ ಪಕ್ಷದ ನಾಯಕ ಪ್ರೀತಮ್‌ ಸಿಂಗ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಪ್ರಮುಖರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮುಂತಾದವರು ಪ್ರಚಾರ ನಡೆಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ 57 ಕ್ಷೇತ್ರಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್‌ಗೆ 11 ಸ್ಥಾನಗಳು ಮಾತ್ರ ಸಿಕ್ಕಿದ್ದವು. ಎರಡು ಕ್ಷೇತ್ರಗಳಲ್ಲಿ ಪಕ್ಷೇತರರು ಗೆದ್ದಿದ್ದರು.

ಈವರೆಗೆ, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇತ್ತು. ಕಾಂಗ್ರೆಸ್‌ ಮತ್ತು ಬಿಜೆಪಿ ಇಲ್ಲಿ ಪರ್ಯಾಯವಾಗಿ ಸರ್ಕಾರ ರಚನೆ ಮಾಡಿವೆ. ಈ ಬಾರಿ ಎಎಪಿ ಎಲ್ಲ 70 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನೇತೃತ್ವದ ಸರ್ಕಾರಗಳು ಜನರ ಆಶೋತ್ತರಗಳನ್ನು ಈಡೇರಿಸಿಲ್ಲ ಎಂಬುದು ಎಎಪಿಯ ಆರೋಪವಾಗಿದೆ.

ಪ್ರತಿ ಮನೆಗೆ 300 ಯೂನಿಟ್‌ ಉಚಿತ ವಿದ್ಯುತ್‌, 18 ವರ್ಷ ದಾಟಿದ ಎಲ್ಲ ಮಹಿಳೆಯರಿಗೆ ತಿಂಗಳಿಗೆ ₹1,000, ಪ್ರತಿ ಮನೆಗೆ ಒಂದು ಉದ್ಯೋಗ, ನಿರುದ್ಯೋಗಿಗಳಿಗೆ ತಿಂಗಳಿಗೆ ₹5,000 ಭತ್ಯೆ ನೀಡುವ ಭರವಸೆಯನ್ನು ಎಎಪಿ ನೀಡಿದೆ.

ಕಾಂಗ್ರೆಸ್‌ ‘ಓಲೈಕೆ ರಾಜಕಾರಣ’ ಮಾಡುತ್ತಿದೆ ಎಂಬುದು ಬಿಜೆಪಿಯ ಪ್ರಮುಖ ಆರೋಪವಾಗಿದೆ. ರಸ್ತೆ, ರೈಲು ಮತ್ತು ವಿಮಾನ ಸಂಪರ್ಕದ ಹಲವು ಯೋಜನೆಗಳು ಪ್ರಗತಿಯಲ್ಲಿವೆ. ಹಲವು ಯೋಜನಾ ಹಂತದಲ್ಲಿವೆ. ಇವುಗಳ ಈಡೇರಿಕೆಗೆ ತನಗೆ ಮತ ಹಾಕಿ ಎಂಬುದು ಬಿಜೆಪಿಯ ಕೋರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT