ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2–18 ವರ್ಷದವರಿಗೆ ಸೆಪ್ಟೆಂಬರ್‌ ವೇಳೆಗೆ ಲಸಿಕೆ: ಡಾ.ರಣದೀಪ್‌ ಗುಲ್ಹೇರಿಯಾ

ಅನುಮತಿ ಕೋರಿ ಜೈಡುಸ್‌, ಫೈಝರ್ ಅರ್ಜಿ ಸಂಭವ
Last Updated 27 ಜೂನ್ 2021, 11:27 IST
ಅಕ್ಷರ ಗಾತ್ರ

ನವದೆಹಲಿ: ಮಕ್ಕಳಿಗಾಗಿ ಕೋವಿಡ್‌ ಲಸಿಕೆಯ ಲಭ್ಯತೆಯು ಶಾಲೆಗಳ ಆರಂಭ ಹಾಗೂ ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಹಾದಿಯನ್ನು ಸುಗಮಗೊಳಿಸಲಿದೆ ಎಂದು ಏಮ್ಸ್‌ ಮುಖ್ಯಸ್ಥ ಡಾ.ರಣದೀಪ್‌ ಗುಲ್ಹೇರಿಯಾ ಅಭಿಪ್ರಾಯಪಟ್ಟಿದ್ದಾರೆ.

2ರಿಂದ 18 ವರ್ಷದ ಮಕ್ಕಳ ಮೇಲೆ ಭಾರತ್‌ ಬಯೊಟೆಕ್‌ನ ಕೊವ್ಯಾಕ್ಸಿನ್‌ ಲಸಿಕೆ ಪ್ರಯೋಗದ 2 ಮತ್ತು 3ನೇ ಹಂತದ ಅಂಕಿ ಅಂಶಗಳು ಸೆಪ್ಟೆಂಬರ್ ವೇಳೆಗೇ ಸಿಗುವ ಸಂಭವವಿದೆ. ಮಕ್ಕಳಿಗೆ ನೀಡುವ ಲಸಿಕೆ ಸಂಬಂಧ ಆ ವೇಳೆಗೆ ಔಷಧ ನಿಯಂತ್ರಕರ ಅನುಮತಿಯೂ ಸಿಗಬಹುದು ಎಂದರು.

ಸೆಪ್ಟೆಂಬರ್ ತಿಂಗಳಿಗೂ ಮೊದಲೇ ಫೈಝರ್‌ ಲಸಿಕೆಗೆ ಅನುಮೋದನೆ ದೊರೆತರೆ ದೇಶದಲ್ಲಿ ಮಕ್ಕಳಿಗೆ ಕೊಡಿಸಲು ಇನ್ನೊಂದು ಲಸಿಕೆ ಆಯ್ಕೆಯೂ ಸಿಗಲಿದೆ ಎಂದು ಡಾ.ಗುಲ್ಹೇರಿಯಾ ಅವರು ಶನಿವಾರ ತಿಳಿಸಿದರು.

ಸರ್ಕಾರದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಜೈಡುಸ್‌ ಕ್ಯಾಡಿಲಾ ಸಂಸ್ಥೆಯು ಕೂಡ ತುರ್ತು ಸಂದರ್ಭಗಳಲ್ಲಿ ಬಳಕೆಗಾಗಿ ‘ಜೈಕೋವ್‌–ಡಿ’ ಲಸಿಕೆಯ ಬಳಕೆಗೆ ಅನುಮತಿ ಕೋರಿ ಭಾರತೀಯ ಔಷಧ ಮಹಾನಿಯಂತ್ರಕರಿಗೆ (ಡಿಸಿಜಿಐ) ಪ್ರಸ್ತಾಪ ಸಲ್ಲಿಸುವ ನಿರೀಕ್ಷೆಯಿದೆ.

‘ಜೈಡುಸ್‌ ಸಂಸ್ಥೆಯ ಲಸಿಕೆಗೆ ಒಂದು ವೇಳೆ ಅನುಮತಿ ದೊರೆತಲ್ಲಿ ಅದು ಮತ್ತೊಂದು ಆಯ್ಕೆಯಾಗಲಿದೆ. ಅಲ್ಲದೆ, ಇದನ್ನು ವಯಸ್ಕರು ಮತ್ತು ಮಕ್ಕಳು ಇಬ್ಬರಿಗೂ ನೀಡಬಹುದಾಗಿದೆ ಎಂಬುದಾಗಿ ಕಂಪನಿಯು ಹೇಳಿಕೊಂಡಿದೆ’ ಎಂದು ವಿವರಿಸಿದರು.

ಬಹುತೇಕ ಮಕ್ಕಳಲ್ಲಿ ಕೋವಿಡ್‌ ಸೋಂಕಿನ ಅಲ್ಪ ಲಕ್ಷಣಗಳು ಕಾಣಿಸಿಕೊಂಡಿದ್ದರೆ, ಹೆಚ್ಚಿನವರಲ್ಲಿ ರೋಗಲಕ್ಷಣಗಳೇ ಕಾಣಿಸಿಕೊಂಡಿರಲಿಲ್ಲ.

‘ಕಳೆದ ಒಂದೂವರೆ ವರ್ಷಗಳಲ್ಲಿ ಶಿಕ್ಷಣದ ದೃಷ್ಟಿಯಿಂದ ಮಕ್ಕಳಿಗೆ ದೊಡ್ಡ ನಷ್ಟವಾಗಿದೆ. ಶಾಲೆಗಳ ಪುನರಾರಂಭವು ಲಸಿಕೆಯ ಲಭ್ಯತೆಯನ್ನೇ ಪ್ರಮುಖವಾಗಿ ಅವಲಂಬಿಸಿದೆ’ ಎಂದುಗುಲ್ಹೇರಿಯಾ ತಿಳಿಸಿದರು.

ಇದುವರೆಗೂ ಕೋವಿಡ್‌ನ ಪರಿಣಾಮ ಮಕ್ಕಳ ಮೇಲೆ ಅಷ್ಟಾಗಿ ಕಂಡುಬಂದಿಲ್ಲ. ಆದರೆ, ಸೋಂಕಿನ ಪರಿಣಾಮಗಳು ಏರುಪೇರಾದಲ್ಲಿ ನಕಾರಾತ್ಮಕ ಬೆಳವಣಿಗೆಗೂ ಆಸ್ಪದವಾಗಬಹುದು. ಅಂಥ ಸ್ಥಿತಿಯನ್ನು ಎದುರಿಸಲೂ ಸಿದ್ಧತೆ ನಡೆದಿದೆ ಎಂದು ಹೇಳಿದರು.

ಮಕ್ಕಳ ಮೇಲೆ ಕೊರೊನಾ ಸೋಂಕಿನ ಪರಿಣಾಮವನ್ನು ಅಂದಾಜು ಮಾಡಿದ್ದು, ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರಬೇಕಾದ ಮಾರ್ಗೋಪಾಯಗಳ ಸಲಹೆ ನೀಡಲು ಕೋವಿಡ್‌–19 ಕುರಿತು ರಾಷ್ಟ್ರೀಯ ಪರಿಣತರ ತಂಡವನ್ನು ರಚಿಸಿ, ಸೂಚನೆ ನೀಡಲಾಗಿದೆ.

ಮಕ್ಕಳಿಗೆ ಲಸಿಕೆ ನೀಡುವುದರ ಕುರಿತಂಥೆ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್‌ ಅವರು, 12 ರಿಂದ 18 ವರ್ಷದ ಮಕ್ಕಳ ಸಂಖ್ಯೆ ಸುಮಾರು 13 ರಿಂದ 14 ಕೋಟಿ ಇದ್ದು, ಇವರಿಗೆ ನೀಡಲು 25–26 ಕೋಟಿ ಡೋಸ್‌ ಲಸಿಕೆಯ ಅಗತ್ಯವಿದೆ ಎಂದು ತಿಳಿಸಿದ್ದರು.

ಸದ್ಯ, ಕೊವ್ಯಾಕ್ಸಿನ್‌ ಮತ್ತು ಜೈಡುಸ್‌ ಕ್ಯಾಡಿಲಾ ಸಂಸ್ಥೆಯ ಲಸಿಕೆಗಳನ್ನು ಮಾತ್ರವೇ ಮಕ್ಕಳ ಮೇಲೆ ಪ್ರಯೋಗಕ್ಕೆ ಬಳಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT