ಮಂಗಳವಾರ, ಮಾರ್ಚ್ 28, 2023
33 °C

‘ಬಾಬರಿ’ ಧ್ವಂಸ | 30ಕ್ಕೆ ತೀರ್ಪು: 32 ಆರೋಪಿಗಳ ಉಪಸ್ಥಿತಿಗೆ ನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಹುಕಾಲದಿಂದ ಬಾಕಿ ಇರುವ ತೀರ್ಪನ್ನು ಇದೇ 30ರಂದು ಇಲ್ಲಿನ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ. ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ್‌ ಸಿಂಗ್‌ ಮತ್ತು ಇತರರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. 

ಎಲ್ಲ 32 ಆರೋಪಿಗಳು ತೀರ್ಪು ಪ್ರಕಟವಾಗುವ ದಿನ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಕೆ. ಯಾದವ್‌ ನಿರ್ದೇಶನ ನೀಡಿದ್ದಾರೆ. ಪ್ರಕರಣದ ವಿಚಾರಣೆ ಆರಂಭವಾದಾಗ ಆರೋಪಿಗಳ ಸಂಖ್ಯೆ 49 ಆಗಿತ್ತು. ಆದರೆ, ವಿಚಾರಣೆಯ ಸುದೀರ್ಘ ಅವಧಿಯಲ್ಲಿ ಉಳಿದವರು ಮೃತಪಟ್ಟಿದ್ದಾರೆ. 

ವಿಶ್ವ ಹಿಂದೂ ಪರಿಷತ್‌ ಅಂತರರಾಷ್ಟ್ರೀಯ ಅಧ್ಯಕ್ಷ ಅಶೋಕ್‌ ಸಿಂಘಾಲ್‌, ಗಿರಿರಾಜ್ ಕಿಶೋರ್‌, ವಿಷ್ಣು ಹರಿ ದಾಲ್ಮಿಯಾ, ಮಹಾಂತ ಅವೈದ್ಯನಾಥ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ತಂದೆ ಬಾಳಾ ಠಾಕ್ರೆ ಮೃತ ಆರೋಪಿಗಳಲ್ಲಿ ಸೇರಿದ್ದಾರೆ. 

ಸೆಪ್ಟೆಂಬರ್ 30ರೊಳಗೆ ತೀರ್ಪು ಪ್ರಕಟಿಸಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. 

ನಿತ್ಯ ವಿಚಾರಣೆ: ಅಯೋಧ್ಯೆಯ ವಿವಾದಾತ್ಮಕ ನಿವೇಶನದಲ್ಲಿದ್ದ ಬಾಬರಿ ಮಸೀದಿಯನ್ನು 1992ರ ಡಿಸೆಂಬರ್‌ 6ರಂದು ಸಾವಿರಾರು ‘ಕರಸೇವಕರು’ ಧ್ವಂಸ ಮಾಡಿದ್ದರು. ಈ ಪ್ರಕರಣದ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಧೀಶರು ನಿತ್ಯವೂ ನಡೆಸಿದ್ದಾರೆ.

ಮಸೀದಿ ಧ್ವಂಸದ ಬಳಿಕ ಅಯೋಧ್ಯೆಯಲ್ಲಿರುವ ರಾಮಜನ್ಮಭೂಮಿ ಪೊಲೀಸ್‌ ಠಾಣೆಯಲ್ಲಿ ಎರಡು ಎಫ್‌ಐಆರ್‌ ದಾಖಲಾಗಿದ್ದವು. ಕರಸೇವಕರು, ವಿಶ್ವ ಹಿಂದೂ ಪರಿಷತ್‌ ಮತ್ತು ಬಿಜೆಪಿ ಮುಖಂಡರ ವಿರುದ್ಧ ಈ ದೂರುಗಳನ್ನು ನೀಡಲಾಗಿತ್ತು. ಬಳಿಕ, 47 ದೂರುಗಳು ದಾಖಲಾಗಿದ್ದವು.

‘ಕರಸೇವಕರು ಮಸೀದಿ ಧ್ವಂಸ ಮಾಡಲು ಪಿತೂರಿ ನಡೆಸಿದ್ದರು ಮತ್ತು ನಾಯಕರು ಧ್ವಂಸಕ್ಕೆ ಕುಮ್ಮಕ್ಕು ನೀಡಿದ್ದರು’ ಎಂಬುದು ಸಿಬಿಐ ವಾದವಾಗಿತ್ತು. ಆದರೆ, ‘ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರವು ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಿದೆ, ತಾವು ತಪ್ಪಿತಸ್ಥರು ಎಂದು ಸಾಬೀತು ಮಾಡಲು ಯಾವುದೇ ಪುರಾವೆ ಇಲ್ಲ’ ಎಂದು ಆರೋಪಿಗಳು ಪ್ರತಿಪಾದಿಸಿದ್ದರು.  

ವಿಚಾರಣೆ ವಿಳಂಬಕ್ಕೆ ಕಾರಣವೇನು?

ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಲಾಗಿತ್ತು. ಎಲ್ಲ ದೂರುಗಳಿಗೆ ಸಂಬಂಧಿಸಿ ಸಿಬಿಐ ಒಂದೇ ಆರೋಪಪಟ್ಟಿ ದಾಖಲಿಸಿತ್ತು. ಎಫ್‌ಐಆರ್‌ ಸಂಖ್ಯೆ 198ರ ತನಿಖೆಯನ್ನು ವರ್ಗಾಯಿಸುವುದಕ್ಕೆ ಸಂಬಂಧಿಸಿ ಹೊಸ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿಲ್ಲ. ಹಾಗಾಗಿ, ತಮ್ಮ ವಿರುದ್ಧದ ಆರೋಪ ಕೈಬಿಡಬೇಕು ಎಂದು ಬಿಜೆಪಿ ನಾಯಕರು ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಕೋರ್ಟ್‌, ಬಿಜೆಪಿ ನಾಯಕರ ವಿರುದ್ಧದ ಆರೋಪ ಕೈಬಿಡಲು ಸೂಚಿಸಿತ್ತು. ಈ ಪ್ರಕ್ರಿಯೆಯಿಂದಾಗಿ ವಿಚಾರಣೆ ವಿಳಂಬವಾಯಿತು. ರಾಯಬರೇಲಿ ಮತ್ತು ಲಖನೌನ ನ್ಯಾಯಾಲಯಗಳಲ್ಲಿ ಪ್ರತ್ಯೇಕ ವಿಚಾರಣೆ ನಡೆಸಿದ್ದು ವಿಳಂಬಕ್ಕೆ ಇನ್ನೊಂದು ಕಾರಣ. ಬಳಿಕ, ಸುಪ್ರೀಂ ಕೋರ್ಟ್‌ ಎಲ್ಲ ಪ್ರಕರಣಗಳನ್ನು ಒಂದುಗೂಡಿಸಿ ಲಖನೌ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸಬೇಕು ಎಂದು ನಿರ್ದೇಶನ ನೀಡಿತು. ಬಿಜೆಪಿ ನಾಯಕರ ವಿರುದ್ಧದ ಆರೋಪ ಕೈಬಿಡುವಂತೆ ಹೈಕೋರ್ಟ್‌ ನೀಡಿದ್ದ ಆದೇಶವನ್ನೂ ಸುಪ್ರೀಂ ಕೋರ್ಟ್‌ ರದ್ದುಪಡಿಸಿತು. 

ರಾಜಕೀಯ ಮಹತ್ವ

ಬಿಹಾರ ವಿಧಾನಸಭೆಗೆ ಚುನಾವಣೆ ಹತ್ತಿರ ಬರುತ್ತಿದೆ. ಹಾಗಾಗಿ, ಪ್ರಕರಣದ ತೀರ್ಪು ಈಗ ಪ್ರಕಟವಾಗುವುದಕ್ಕೆ ರಾಜಕೀಯ ಮಹತ್ವ ಲಭಿಸಿದೆ. ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಅಡ್ವಾಣಿ ನಡೆಸಿದ ರಥಯಾತ್ರೆಯನ್ನು ಆಗ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್‌ ತಡೆದಿದ್ದರು. ಅಡ್ವಾಣಿಯವರ ಬಂಧನವೂ ಬಿಹಾರದಲ್ಲಿಯೇ ಆಗಿತ್ತು. 

ಈಗ, ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆಯೂ ಆಗಿದೆ. ಅದಾಗಿ ಕೆಲವೇ ದಿನಗಳಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟವಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು