ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಸಿ ಸಾಕ್ಷ್ಯಚಿತ್ರ| ಜಾಮಿಯಾ ವಿವಿಯ 70 ವಿದ್ಯಾರ್ಥಿಗಳು ವಶಕ್ಕೆ?

ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ l ವಿಶ್ವವಿದ್ಯಾಲಯದ ಕ್ಯಾಂಪಸ್‌ ಬಳಿ ಭಾರಿ ಸಂಖ್ಯೆಯ ಪೊಲೀಸರ ನಿಯೋಜ
Last Updated 25 ಜನವರಿ 2023, 19:17 IST
ಅಕ್ಷರ ಗಾತ್ರ

ನವದೆಹಲಿ: ಬಿಬಿಸಿ ನಿರ್ಮಿಸಿರುವ ಗೋಧ್ರೋತ್ತರ ಹತ್ಯಾಕಾಂಡಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಆರೋಪಿಸಿದೆ.

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಬುಧವಾರ ಸಂಜೆ ಸಾಕ್ಷ್ಯಚಿತ್ರ ಪ್ರದರ್ಶಿಸಲು ಮುಂದಾಗಿದ್ದ ವಿದ್ಯಾರ್ಥಿಗಳ ಪೈಕಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದನ್ನು ಖಂಡಿಸಿ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ‘ಪ್ರತಿಭಟನೆ ನಡೆಸಿದ 13 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ‘ಪ್ರತಿಭಟನೆ ನಡೆಸುವ ಮುನ್ನವೇ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು’ ಎಂದು ಎಸ್‌ಎಫ್‌ಐ ಕಾರ್ಯದರ್ಶಿ ಪ್ರೀತೀಶ್ ಮೆನನ್ ಅವರು ಆರೋಪಿಸಿದ್ದಾರೆ.

ವಿಶ್ವವಿದ್ಯಾಲಯದ ಕ್ಯಾಂಪಸ್‌ ಬಳಿ ಭಾರಿ ಸಂಖ್ಯೆಯ ವಿದ್ಯಾರ್ಥಿಗಳು ಸೇರಿದ್ದರಿಂದ, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಭದ್ರತೆಗಾಗಿ ಶಸ್ತ್ರಸಜ್ಜಿತ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಯನ್ನೂ ಕ್ಯಾಂಪಸ್ ಹೊರಗೆ ನಿಯೋಜಿಸಲಾಗಿತ್ತು.

ವಿಶ್ವವಿದ್ಯಾಲಯದ ಎಂಸಿಆರ್‌ಸಿ ಲಾನ್‌ನಲ್ಲಿ ಬುಧವಾರ ಸಂಜೆ 6 ಗಂಟೆಗೆ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸಾಕ್ಷ್ಯಚಿತ್ರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಆಡಳಿತ ಮಂಡಳಿ ಮೊದಲೇ ಸ್ಪಷ್ಟಪಡಿಸಿತ್ತು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಬೇರಾವ ವಿದ್ಯಾರ್ಥಿಗಳಿಗೂ ಕ್ಯಾಂಪಸ್ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಇದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಕ್ಯಾಂಪಸ್ ಹೊರಗಡೆ ಪ್ರತಿಭಟನೆ ನಡೆಸಿ, ಕುಲಪತಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಚಿತ್ರ ಪ್ರದರ್ಶನಕ್ಕೆ ಯಾವುದೇ ಅನುಮತಿ ಕೋರಲಾಗಿಲ್ಲ ಹಾಗೂ ಅನುಮತಿ ಕೋರಿದರೂ ಪ್ರದರ್ಶನಕ್ಕೆ
ಅವಕಾಶ ನೀಡುವುದಿಲ್ಲ ಎಂದು ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿತ್ತು. ನಿಯಮ ಉಲ್ಲಂಘಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾದರೆ, ಅದನ್ನು ತಡೆಯಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿತ್ತು.

‘ಬೆಂಬಲಿಗರೇ ಇಲ್ಲದಂತಹ ಎಸ್‌ಎಫ್‌ಐ ರೀತಿಯ ಸಣ್ಣ ಗುಂಪುಗಳು ಪ್ರತಿಭಟನೆ ನಡೆಸಿವೆ. ಇಂತಹ ವರ್ತನೆಗಳನ್ನು ನಾವು ಒಪ್ಪುವುದಿಲ್ಲ. ಕ್ಯಾಂಪಸ್‌ನಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಹಾಳುಮಾಡಲು ಅವಕಾಶ ನೀಡುವುದಿಲ್ಲ’ ಎಂದು ಕುಲಪತಿ ನಜ್ಮಾ ಅಖ್ತರ್ ಅವರು ತಿಳಿಸಿದರು.

ದೆಹಲಿಯ ಜೆಎನ್‌ಯು ಕ್ಯಾಂಪಸ್‌ನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ವಿದ್ಯಾರ್ಥಿಗಳು ಯತ್ನಿಸಿದ ಮರುದಿನ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.

ಜೆಎನ್‌ಯು: ಕಲ್ಲು ತೂರಾಟ, ಹಲ್ಲೆ ಆರೋಪ

ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಸದಸ್ಯರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷಾ ಘೋಷ್, ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮಂಗಳವಾರ ಯತ್ನಿಸಿದ ವಿದ್ಯಾರ್ಥಿಗಳ ಗುಂಪಿನ ಮೇಲೆ ಎಬಿವಿಪಿಯ ಇಬ್ಬರು ಸದಸ್ಯರು ಕಲ್ಲುತೂರಾಟ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಕಲ್ಲುತೂರಾಟ ನಡೆಸಲು ಯತ್ನಿಸಿದ ಇಬ್ಬರನ್ನು ಸೆರೆಹಿಡಿದಿದ್ದು, ಅವರಿಗೆ ಯಾವುದೇ ಹಿಂಸೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಲ್ಲುತೂರಾಟ ಖಂಡಿಸಿ ವಸಂತ್‌ ಕುಂಜ್‌ ಪೊಲೀಸ್ ಠಾಣೆವರೆಗೆ ಮಂಗಳವಾರ ರಾತ್ರಿ ಮೆರವಣಿಗೆ ನಡೆಸಿದ ವಿದ್ಯಾರ್ಥಿ ಸಂಘಟನೆ ಸದಸ್ಯರು ದೂರು ಸಲ್ಲಿಸಿದರು. ಘಟನೆಯ ಬಗ್ಗೆ ಎಬಿವಿಪಿ ಹಾಗೂ ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳಿಂದ ದೂರು ಸ್ವೀಕರಿಸಲಾಗಿದ್ದು, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಜೆಎನ್‌ಯು ಆವರಣದಲ್ಲಿ ರಾತ್ರಿ 9 ಗಂಟೆಗೆ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ, ವಿದ್ಯುತ್ ಹಾಗೂ ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ಫೋನ್‌ನಲ್ಲೇ ಸಾಕ್ಷ್ಯಚಿತ್ರ ವೀಕ್ಷಿಸಲು ಮುಂದಾದರು. ಆಗ ಕತ್ತಲಿನಲ್ಲಿ ತಮ್ಮ ಮೇಲೆ ಕಲ್ಲುತೂರಾಟ ನಡೆಯಿತು ಎಂದು ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ. ಎಬಿವಿಪಿ ಸದಸ್ಯರು ಕಲ್ಲು ತೂರಿದರು ಎಂದು ಸಂಘಟನೆಯ ಕೆಲವು ಸದಸ್ಯರು ಆರೋಪಿಸಿದ್ದಾರೆ.

ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಗೌರವ್ ಎಂಬಾತನನ್ನು ವಿದ್ಯಾರ್ಥಿ ಸಂಘಟನೆ ಸದಸ್ಯರು ಸೆರೆ ಹಿಡಿದಿದ್ದಾರೆ. ಆದರೆ ಕಲ್ಲು ತೂರಿದ ಆರೋಪವನ್ನು ಅವರು ನಿರಾಕರಿಸಿದ್ದಾರೆ. ಸಂಘಟನೆ ಸದಸ್ಯರು ತಮ್ಮನ್ನು ಹಿಂಸಿಸಿದ್ದಾರೆ ಎಂದು ಗೌರವ್ ಆರೋಪಿಸಿದ್ದಾರೆ.

ತಾಂತ್ರಿಕ ಕಾರಣದಿಂದ ವಿದ್ಯುತ್ ಪೂರೈಕೆ ಕಡಿತವಾಗಿತ್ತು ಎಂದು ವಿಶ್ವವಿದ್ಯಾಲಯವು ಹೇಳಿದೆ. ಆದರೆ, ಇಂಟರ್‌ನೆಟ್‌ ಸಂಪರ್ಕ ಸ್ಥಗಿತಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ. ‘ವಿಶ್ವವಿದ್ಯಾಲಯಕ್ಕೆ ವಿದ್ಯುತ್
ಪೂರೈಸುವ ಘಟಕದಲ್ಲಿ ದೋಷ ಉಂಟಾಗಿದ್ದು,
ಆದಷ್ಟು ಬೇಗ ದುರಸ್ತಿ ಮಾಡಲಾಗುವುದು’ ಎಂದು ಜೆಎನ್‌ಯು ಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT