ತಂತ್ರಜ್ಞಾನ ಕಂಪನಿಗಳು ಡಿಜಿಟಲ್ ಸುದ್ದಿ ಪೋರ್ಟಲ್‌ಗಳಿಗೆ ಆದಾಯ ಹಂಚುವಂತೆ ಒತ್ತಾಯ

ನವದೆಹಲಿ: ‘ಗೂಗಲ್, ಫೇಸ್‌ಬುಕ್‌ನಂತಹ ದೈತ್ಯ ತಂತ್ರಜ್ಞಾನ ಕಂಪನಿಗಳು ತಮ್ಮ ಆದಾಯವನ್ನು ಡಿಜಿಟಲ್ ಸುದ್ದಿ ಪ್ರಕಾಶಕರೊಂದಿಗೆ ಹಂಚಿಕೊಳ್ಳಬೇಕು’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಶನಿವಾರ ತಿಳಿಸಿದ್ದಾರೆ.
‘ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ಮತ್ತು ಯುರೋಪಿಯನ್ ಒಕ್ಕೂಟ ಈ ಸಂಬಂಧ ಶಾಸಕಾಂಗದ ಮೂಲಕ ಈಗಾಗಲೇ ಉಪಕ್ರಮ ಕೈಗೊಂಡಿವೆ. ವಿಷಯ ಮತ್ತು ವಸ್ತು ಸೃಷ್ಟಿಸುವ ಪ್ರಕಾಶಕರು ಹಾಗೂ ತಂತ್ರಜ್ಞಾನ ಕಂಪನಿಗಳ ನಡುವೆ ಆದಾಯದ ನ್ಯಾಯಯೋಚಿತ ವಿಭಜನೆಯನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಸ್ಪರ್ಧಾ ಆಯೋಗವನ್ನೂ ಬಲಪಡಿಸಿವೆ’ ಎಂದು ಡಿಜಿಟಲ್ ಸುದ್ದಿ ಪ್ರಕಾಶಕರ ಸಂಘಕ್ಕೆ (ಡಿಎನ್‌ಪಿಎ) ಶುಕ್ರವಾರ ರವಾನಿಸಿರುವ ಸಂದೇಶದಲ್ಲಿ ಅವರು ಹೇಳಿದ್ದಾರೆ.
‘ಮೂಲ ವಿಷಯ ಮತ್ತು ವಸ್ತು ಸೃಷ್ಟಿಸುವ ಪ್ರಕಾಶಕರಿಗೆ ಆದಾಯದಲ್ಲಿ ನ್ಯಾಯಯೋಚಿತ ಪಾಲು ದೊರೆಯಬೇಕು. ಸುದ್ದಿ ಉದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಇದು ತುಂಬಾ ಮುಖ್ಯವಾದುದು’ ಎಂದಿದ್ದಾರೆ.
‘ಕೋವಿಡ್ ನಂತರದ ಕಾಲಘಟ್ಟದಲ್ಲಿ ಡಿಜಿಟಲ್ ಸುದ್ದಿ ಉದ್ಯಮವಷ್ಟೇ ಅಲ್ಲದೆ ಮುದ್ರಣ ಮಾಧ್ಯಮಗಳೂ ಅರ್ಥಿಕ ಸಮಸ್ಯೆಯನ್ನು ಎದುರಿಸಿವೆ. ಮುದ್ರಣ ಮಾಧ್ಯಮಗಳ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಿದ್ದೇ ಆದಲ್ಲಿ ಪತ್ರಿಕೋದ್ಯಮದ ಭವಿಷ್ಯ ಮಸುಕಾಗುವುದಂತೂ ಸ್ಪಷ್ಟ’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.