ಮಂಗಳವಾರ, ಡಿಸೆಂಬರ್ 1, 2020
23 °C

ಬಿಹಾರ: ನಿತೀಶ್‌ಗೆ ‘ಕುರ್ಚಿ’ ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ನಿತೀಶ್‌ ಕುಮಾರ್‌

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವು ಮತಗಟ್ಟೆ ಸಮೀಕ್ಷೆಯ ಎಲ್ಲ ಅಂದಾಜುಗಳನ್ನು ಸುಳ್ಳಾಗಿಸಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸತತ ನಾಲ್ಕನೇ ಅವಧಿಗೆ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ ಸರಳ ಬಹುಮತ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಈ ಮೈತ್ರಿಕೂಟವು 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಅಥವಾ ಮುನ್ನಡೆ ಹೊಂದಿದೆ. ಅಂತಿಮ ಫಲಿತಾಂಶ ಬುಧವಾರ ಬೆಳಗ್ಗಿನ ಹೊತ್ತಿಗಷ್ಟೇ ಲಭ್ಯವಾಗಬಹುದು ಎನ್ನಲಾಗಿದೆ. ಆರ್‌ಜೆಡಿ ನೇತೃತ್ವದ ಮಹಾಘಟಬಂಧನವು 113 ಕ್ಷೇತ್ರಗಳಲ್ಲಿ ಗೆಲುವು/ಮುನ್ನಡೆ ಪಡೆದು ಎನ್‌ಡಿಎಯ ಬೆನ್ನ ಹಿಂದೆಯೇ ಇದೆ. 

72 ಕ್ಷೇತ್ರಗಳ ಗೆಲುವು/ಮುನ್ನಡೆಯೊಂದಿಗೆ ಎನ್‌ಡಿಎಯಲ್ಲಿನ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಬಿಜೆಪಿಯ ಮಿತ್ರಪಕ್ಷ ಜೆಡಿಯು 43 ಕ್ಷೇತ್ರಗಳಲ್ಲಿ ಪಾರಮ್ಯ ಹೊಂದಿದೆ. 2015ರ ಚುನಾವಣೆಯಲ್ಲಿ ಈ ಪಕ್ಷವು 71 ಕ್ಷೇತ್ರಗಳಲ್ಲಿ ಗೆದ್ದಿತ್ತು. ಎನ್‌ಡಿಎಯ ಇತರ ಮಿತ್ರಪಕ್ಷಗಳಾದ ಎಚ್‌ಎಎಂ ಮತ್ತು ವಿಐಪಿ ತಲಾ ನಾಲ್ಕು ಕ್ಷೇತ್ರಗಳನ್ನು ಗೆದ್ದಿವೆ. 

ಐದು ಪಕ್ಷಗಳ ಮಹಾಮೈತ್ರಿಕೂಟವನ್ನು ಮುನ್ನಡೆಸಿದ ಆರ್‌ಜೆಡಿ, ತೀವ್ರ ಹಣಾಹಣಿಯ ಚುನಾವಣೆಯಲ್ಲಿ 77 ಕ್ಷೇತ್ರಗಳಲ್ಲಿ ಗೆಲುವು/ಮುನ್ನಡೆ ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದಿದೆ. ಆದರೆ, 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಾಗಿರುವುದು 19 ಕಡೆ ಮಾತ್ರ. ಎಡಪಕ್ಷಗಳಾದ ಸಿಪಿಐ, ಸಿಪಿಎಂ ಮತ್ತು ಸಿಪಿಐ–ಎಂಎಲ್‌ ಒಟ್ಟಾಗಿ 17 ಕ್ಷೇತ್ರಗಳನ್ನು ಗೆದ್ದು ಅಚ್ಚರಿ ಮೂಡಿಸಿವೆ. ಈ ಪಕ್ಷಗಳು 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. 19 ಕ್ಷೇತ್ರಗಳಲ್ಲಿ ಕಣದಲ್ಲಿದ್ದ ಸಿಪಿಐ–ಎಂಎಲ್‌ 11ರಲ್ಲಿ ಗೆಲುವಿನ ನಗೆ ಬೀರಿದೆ. ಸಿಪಿಐ ಮತ್ತು ಸಿಪಿಎಂ ತಲಾ ಮೂರು ಕ್ಷೇತ್ರಗಳಲ್ಲಿ ಗೆದ್ದಿವೆ. ಇದರಿಂದಾಗಿ ಮಹಾಘಟಬಂಧನದ ಒಟ್ಟು ಬಲವು 113ಕ್ಕೆ ಏರಿದೆ. ಅಸಾದುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ ಸೀಮಾಂಚಲ ಪ್ರದೇಶದ ಐದು ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ.

ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ ಒಂದು ಕ್ಷೇತ್ರ ಗೆಲ್ಲಲಷ್ಟೇ ಶಕ್ತವಾಗಿದೆ.

ಪ್ರಮಾಣಪತ್ರ ವಿವಾದ

119 ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ತಡರಾತ್ರಿ ಬಿಡುಗಡೆ ಮಾಡಿರುವ ಆರ್‌ಜೆಡಿ, ಇವರೆಲ್ಲರೂ ಗೆದ್ದಿದ್ದಾರೆ ಎಂದಿದೆ. ಆದರೆ, ಚುನಾವಣಾ ಆಯೋಗವು  ಇವರಿಗೆ ಗೆಲುವಿನ ಪ್ರಮಾಣಪತ್ರವನ್ನು ನೀಡಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದೆ. ನಿಕಟ ಸ್ಪರ್ಧೆ ಇದ್ದ ಕೆಲವು ಕ್ಷೇತ್ರಗಳ ಫಲಿತಾಂಶ ತಿರುಚಲಾಗಿದೆ ಎಂದೂ ಆಪಾದಿಸಿದೆ. ಹಾಗಾಗಿ, ಕೆಲವು ಕ್ಷೇತ್ರಗಳಲ್ಲಿ ಮರುಎಣಿಕೆ ನಡೆಯುವ ಸಾಧ್ಯತೆಯೂ ಇದೆ. 

ನಿತೀಶ್‌ಗೆ ಮುಖ್ಯಮಂತ್ರಿ ಸ್ಥಾನ: ಜೆಡಿಯುಗಿಂತ ಬಿಜೆಪಿ ಗೆದ್ದ ಕ್ಷೇತ್ರಗಳ ಸಂಖ್ಯೆ ಹೆಚ್ಚು. ಹಾಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೀಡಿದ್ದ ಭರವಸೆಯಂತೆ ನಿತೀಶ್‌ ಕುಮಾರ್‌ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. 

‘ನಮಗೆ ಕಡಿಮೆ ಸಂಖ್ಯೆಯ ಕ್ಷೇತ್ರಗಳು ಸಿಕ್ಕಿವೆ ಎಂಬುದು ನಿಜ. ಆದರೆ, ನಿತೀಶ್‌ ಅವರೇ ಮುಂದಿನ ಮುಖ್ಯಮಂತ್ರಿ ಎಂಬುದೂ ನಿಜ’ ಎಂದು ಜೆಡಿಯು ಮುಖ್ಯ ವಕ್ತಾರ ಸಂಜಯ್‌ ಸಿಂಗ್‌ ಹೇಳಿದ್ದಾರೆ. ಚುನಾವಣಾ ಆಯೋಗವನ್ನು ದೂರುವ ಬದಲು ಆರ್‌ಜೆಡಿ ಸೋಲು ಒಪ್ಪಿಕೊಳ್ಳಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. 

ಗೆದ್ದವರು ಸೋತವರು

ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ರಾಘೋಪುರ ಕ್ಷೇತ್ರದಿಂದ, ಅವರ ಅಣ್ಣ ತೇಜ್‌ ಪ್ರತಾಪ್‌ ಅವರು ಹಸನ್‌ಪುರ ಕ್ಷೇತ್ರದಿಂದ ಗೆದ್ದಿದ್ದಾರೆ. ಮಾಜಿ ಕೇಂದ್ರ ಸಚಿವ ದಿಗ್ವಿಜಯ್‌ ಸಿಂಗ್‌ ಅವರ ಪುತ್ರಿ, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಶೂಟರ್‌ ಶ್ರೇಯಸಿ ಸಿಂಗ್‌ ಅವರು ಜಮುಯಿ ಕ್ಷೇತ್ರದಿಂದ ಗೆದ್ದಿದ್ದಾರೆ. ಇವರು ಬಿಜೆಪಿಯಿಂದ ಸ್ಪರ್ಧಿಸಿದ್ದರು. ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಅವರು ಶ್ರೇಯಸಿ ಪರವಾಗಿ ಕೆಲಸ ಮಾಡಿದ್ದರು. 

ಶತ್ರುಘ್ನ ಸಿನ್ಹಾ ಮಗ, ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಲವ ಸಿನ್ಹಾ ಅವರು ಪಟ್ನಾದ ಬಂಕಿಪುರ ಕ್ಷೇತ್ರದಲ್ಲಿ ಸೋತಿದ್ದಾರೆ. ಶರದ್‌ ಯಾದವ್‌ ಅವರ ಪುತ್ರಿ ಸುಭಾಷಿಣಿ ಯಾದವ್‌ ಅವರು ಮಾಧೇಪುರದ ಬಿಹಾರಿಗಂಜ್‌ ಕ್ಷೇತ್ರದಲ್ಲಿ ಸೋತಿದ್ದಾರೆ. ಮಾಧೇಪುರವನ್ನು ಶರದ್‌ ಯಾದವ್‌ ಅವರು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. 

ಎನ್‌ಡಿಎಯ ಪ್ರಮುಖ ನಾಯಕರಾದ ನಿತೀಶ್‌ ಕುಮಾರ್‌ ಮತ್ತು ಉಪಮುಖ್ಯಮಂತ್ರಿ ಸುಶೀಲ್‌ ಮೋದಿ ಅವರು ವಿಧಾನ ಪರಿಷತ್‌ ಸದಸ್ಯರು. ಹಾಗಾಗಿ, ಅವರಿಬ್ಬರೂ ವಿಧಾನಸಭೆಗೆ ಸ್ಪರ್ಧಿಸಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು