ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ| ಮೈತ್ರಿ ತೊರೆದು ಮಹಾಘಟಬಂಧನಕ್ಕೆ ಆಘಾತ ನೀಡಿದ ಮಾಂಝಿ

Last Updated 20 ಆಗಸ್ಟ್ 2020, 13:36 IST
ಅಕ್ಷರ ಗಾತ್ರ

ಪಟಣ: ಬಿಹಾರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿರುವಾಗಲೇ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ ಅವರ ಹಿಂದೂಸ್ತಾನಿ ಅವಾಮ್‌ ಮೋರ್ಚಾ (ಎಚ್‌ಎಎಮ್‌) ಮಹಾಘಟಬಂಧನ ತೊರೆದಿದೆ. ಈ ಮೂಲಕ ಬಿಹಾರದಲ್ಲಿ ವಿರೋಧ ಪಕ್ಷಗಳ ಕೂಟಕ್ಕೆ ಆರಂಭಿಕ ಆಘಾತ ಎದುರಾಗಿದೆ.

ಜಿತನ್‌ ರಾಮ್‌ ಮಾಂಝಿ ಅವರ ಪಕ್ಷ ಮೈತ್ರಿಕೂಟ ತೊರೆದಿದೆಯಾದರೂ, ಮುಂದೆ ಯಾವ ಕೂಟಕ್ಕೆ ಸೇರಲಿದೆ, ಯಾವುದಾದರೂ ಪಕ್ಷದೊಂದಿಗೆ ವಿಲೀನವಾಗಲಿದೆಯೇ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ನಿತೀಶ್‌ ಕುಮಾರ್‌ ಅವರ ಜೆಡಿಯುನಿಂದ ಟಿಸಿಲೊಡೆದು ಹುಟ್ಟಿಕೊಂಡ ಮಾಂಝಿ ಅವರ ಎಚ್‌ಎಎಮ್‌ ಸದ್ಯಕ್ಕೆ ಮೌನವಾಗಿದೆ. ಆದರೆ, ರಾಜಕಾಣವು ಅವಕಾಶಗಳ ಆಗರ ಎನ್ನುವ ಮೂಲಕ ಪಕ್ಷದ ವಕ್ತಾರ ಡ್ಯಾನಿ ರಿಜ್ವಾನ್‌ ಅವರು, ಎನ್‌ಡಿಎ ಮೈತ್ರಿ ಕೂಟ ಸೇರುವ ಮುನ್ಸೂಚನೆ ನೀಡಿದ್ದಾರೆ. ಸ್ಥಳೀಯ ಮಾಧ್ಯಮಗಳೂ ಇದೇ ವಿಚಾರವನ್ನೇ ಪ್ರಸಾರ ಮಾಡಿವೆ.

‘ಎಚ್‌ಎಎಮ್‌ ಇನ್ನು ಮುಂದೆ ಮಹಾಘಟಬಂಧನದಲ್ಲಿ ಮುಂದುವರಿಯುವುದಿಲ್ಲ. ಕೂಟದಿಂದ ಹೊರಬರಲು ಪಕ್ಷ ನಿರ್ಧಾರ ಮಾಡಿದೆ. ಈ ತೀರ್ಮಾನವನ್ನು ಜಿತನ್‌ ರಾಮ್‌ ಅವರ ನಿವಾಸದಲ್ಲಿ ನಡೆದ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಕೈಗೊಳ್ಳಲಾಯಿತು. ಮುಂದಿನ ನಡೆಯನ್ನು ನಿರ್ಧರಿಸುವ ಅಧಿಕಾರವನ್ನು ಪಕ್ಷವು ಅಧ್ಯಕ್ಷರಿಗೆ ನೀಡಿದೆ. ಅವರು ಕೈಗೊಳ್ಳುವ ನಿರ್ಧಾರವನ್ನು ಅನುಸರಿಸಲಾಗುತ್ತದೆ,’ ಎಂದು ಪಕ್ಷದ ವಕ್ತಾರ ಡ್ಯಾನಿಶ್‌ ರಿಜ್ವಾನ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸದ್ಯ ಎಚ್‌ಎಎಮ್‌ನ ನಿರ್ಗಮನದೊಂದಿಗೆ ಬಿಹಾರದ ಘಟಬಂಧನದಲ್ಲಿ ಆರ್‌ಜೆಡಿ, ಕಾಂಗ್ರೆಸ್‌, ಉಪೇಂದ್ರ ಖುಷ್ವಾಹ ಅವರ ಆರ್‌ಎಲ್‌ಎಸ್‌ಪಿ, ಬಾಲಿವುಡ್‌ನ ಚಿತ್ರೀಕರಣ ಸೆಟ್‌ ಸಂಯೋಜಕ ಮುಖೇಶ್‌ ಶಾನಿ ನೇತೃತ್ವದ ವಿಕಾಸಶೀಲ ಇಸಾನ್‌ ಪಕ್ಷಗಳು ಉಳಿದುಕೊಂಡಿವೆ.

ಎಚ್‌ಎಎಮ್‌ ಭವಿಷ್ಯದಲ್ಲಿ ನಿತೀಶ್‌ ಅವರ ಜೆಡಿಯುನಲ್ಲಿ ವಿಲೀನಗೊಳ್ಳುವುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ರಿಜ್ವಾನ್‌, ‘ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವ ಯಾವುದೇ ಚಿಂತನೆ ಪಕ್ಷದ ಎದುರು ಇಲ್ಲ,’ ಎಂದು ಅವರು ಸ್ಪಷ್ಟಪಡಿಸಿದ್ದರು.

‘ಉತ್ತಮ ಕಾರ್ಯಕ್ಕಾಗಿ ಮಹಾ ಮೈತ್ರಿಕೂಟದಲ್ಲಿ ಸಮನ್ವಯ ಸಮಿತಿ ರಚಿಸುವಲ್ಲಿ ವಿಫಲವಾಗಿರುವುದಕ್ಕೆ ನಾವು ಆರ್‌ಜೆಡಿಯನ್ನು ಹೊಣೆಗಾರರನ್ನಾಗಿಸುತ್ತೇವೆ. ಮೈತ್ರಿಕೂಟದ ಒಳಗಿನ ಪಕ್ಷಗಳ ಮಾತುಗಳನ್ನೇ ಕೇಳದ ನಾಯಕ ಅಧಿಕಾರಕ್ಕೆ ಬಂದರೆ ಜನರ ಸಮಸ್ಯೆಗಳನ್ನು ಕೇಳುತ್ತಾನೆಯೇ’ ಎಂದು ಅವರು ಆರ್‌ಜೆಡಿ ನಾಯಕ, ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಅವರ ವಿರುದ್ಧ ರಿಜ್ವಾನ್‌ ಆಕ್ರೋಶ ವ್ಯಕ್ತಪಡಿಸಿದರು.

‘ಮೈತ್ರಿಕೂಟದಲ್ಲಿ ಪ್ರಮುಖ ಪಕ್ಷವಾಗಿರುವ ರಾಹುಲ್‌ ಗಾಂಧಿ ಅವರೂ ಇತ್ತೀಚೆಗೆ ಆನ್‌ಲೈನ್‌ ಸಮಾಲೋಚನೆ ನಡೆಸುವಾಗ, ಕೂಡಲೇ ಸಮನ್ವಯ ಸಮಿತಿ ರಚನೆ ಮಾಡಬೇಕು ಎಂದು ಹೇಳಿದ್ದರು. ಕುಷ್ವಾಹ, ವಿಕಾಸಶೀಲ ಇಸಾನ್‌ ಪಕ್ಷವೂ ಸಮನ್ವಯ ಸಮಿತಿ ರಚನೆ ಮಾಡುವಂತೆ ತಿಳಿಸಿತ್ತು. ಆದರೂ, ಆರ್‌ಜೆಡಿಯು ಸಮತಿ ರಚನೆ ಮಾಡಿಲ್ಲ,’ ಎಂದು ಅವರು ಆರೋಪಿಸಿದರು.

2014ರ ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ತೊರೆದಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಮ್ಮ ಆಪ್ತ, ಬಿಹಾರದ ದಲಿತ ಸಮುದಾಯದ ಪ್ರಬಲ ನಾಯಕ ಜಿತನ್‌ ರಾಮ್‌ ಮಾಂಝಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದರು. ಒಂದು ವರ್ಷದ ಬಳಿಕ ನಿತೀಶ್‌ ಮುಖ್ಯಮಂತ್ರಿಯಾಗುವ ಇಚ್ಚೆ ವ್ಯಕ್ತಪಡಿಸಿದಾಗ ಸ್ಥಾನ ಬಿಟ್ಟುಕೊಡಲು ಮಾಂಝಿ ನಿರಾಕರಿಸಿದ್ದರು. ಹೀಗಾಗಿ ಅವರನ್ನು ಬಲವಂತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈ ಅಪಮಾನದ ಕಾರಣಕ್ಕೆ 2015ರಲ್ಲಿ ಜೆಡಿಯು ತೊರೆದ ಮಾಂಝಿ ಎಚ್‌ಎಎಮ್‌ ಹುಟ್ಟು ಹಾಕಿ ಎನ್‌ಡಿಎ ಮೈತ್ರಿ ಕೂಟ ಸೇರಿದ್ದರು. ಎನ್‌ಡಿಎ ಮೈತ್ರಿಕೂಟದಲ್ಲಿದ್ದುಕೊಂಡೇ 2015ರ ವಿಧಾನಸಭೆ ಚುನಾವಣೆ ಎದುರಿಸಿದ್ದರು. ಚುನಾವಣೆಯಲ್ಲಿ ಎಚ್‌ಎಎಮ್‌ ಕೇವಲ ಒಂದು ಸ್ಥಾನ ಗಳಿಸಿತ್ತು. ಚುನಾವಣೆ ನಂತರ ಜೆಡಿಯು ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದ್ದರಿಂದ ಅಸಮಾಧಾನಗೊಂಡ ಮಾಂಝಿ ಘಟಬಂಧನ ಸೇರಿದ್ದರು. 2019ರ ಲೋಕಸಭೆಗೆ ಮಹಾಘಟಬಂಧನದ ಮೂಲಕ ಸ್ಪರ್ಧಿಸಿದ್ದ ಮಾಂಝಿ ಪಕ್ಷ ಸ್ಥಾನ ಗಳಿಸುವಲ್ಲಿ ವಿಫಲವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT