ಗುರುವಾರ , ಮೇ 26, 2022
31 °C

ಬಿರ್‌ಭೂಮ್‌ ಹತ್ಯಾಕಾಂಡಕ್ಕೆ ಸಂಬಂಧಿಸಿದ ಸಿಬಿಐ ವರದಿಯಲ್ಲೇನಿದೆ?

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿರ್‌ಭೂಮ್‌ ಹತ್ಯಾಕಾಂಡವು ಸ್ಥಳೀಯ ಟಿಎಂಸಿ ನಾಯಕ ಭದು ಶೇಖ್ ಎಂಬುವವರ ಹತ್ಯೆಯ ‘ನೇರ ಪರಿಣಾಮ’ವಾಗಿದ್ದು, ‘ಯೋಜಿತ ಮತ್ತು ಸಂಘಟಿತ’ವಾಗಿ ನಡೆದಿತ್ತು ಎಂದು ಕೇಂದ್ರೀಯ ತನಿಖಾ ದಳವು (ಸಿಬಿಐ) ತನ್ನ ಪ್ರಾಥಮಿಕ ವರದಿಯಲ್ಲಿ ಹೇಳಿದೆ.

ಬೊಗ್‌ತುಯಿ ಗ್ರಾಮದ ಮನೆಯೊಂದರಲ್ಲಿ ಏಳು ಜನರ ಮೃತದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದ್ದವು. ಅವರನ್ನು ಹಾಗೆ ಕೊಲ್ಲುವುದಕ್ಕೂ ಮೊದಲು ತೀವ್ರವಾಗಿ ಹಲ್ಲೆ ಮಾಡಲಾಗಿತ್ತು ಎಂದು ‌ಗುರುವಾರ ಹೈಕೋರ್ಟ್‌ಗೆ ಸಲ್ಲಿಸಲಾದ 20 ಪುಟಗಳ ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಇದಕ್ಕೂ ಮುನ್ನ ಅದೇ ದಿನ ಬೆಳಗ್ಗೆ, ಬೊಗ್‌ತುಯ್‌ನಲ್ಲಿ ಟಿಎಂಸಿ ಮುಖಂಡ ಭದು ಶೇಖ್‌ನ ಹತ್ಯೆ ನಡೆದಿತ್ತು. ಅದರ ನೇರ ಪರಿಣಾಮವೇ ಈ ಹತ್ಯಾಕಾಂಡ. ಶೇಖ್‌ನ ಹತ್ಯೆಯ ನಂತರ, ಆತನ ಆಪ್ತರು ಗುಂಪು ಗೂಡಿ ದಾಳಿ ನಡೆಸಲು ತೀರ್ಮಾನಿಸಿದ್ದರು. ವಿರೋಧಿಗಳ ಮನೆಗಳನ್ನು ಸುಡಲಾರಂಭಿಸಿದರು. ಅವರ ಕುಟುಂಬ ಸದಸ್ಯರನ್ನು ಅತ್ಯಂತ ಯೋಜಿತ ಮತ್ತು ಸಂಘಟಿತವಾಗಿ ಕೊಲ್ಲಲಾರಂಭಿಸಿದರು’ ಎಂದು ಸಿಬಿಐ ವರದಿಯಲ್ಲಿ ಹೇಳಲಾಗಿದೆ.

ಬೋಗ್‌ತುಯಿಯಲ್ಲಿ ಮೃತ ಭದು ಶೇಖ್‌ ಹಾಗೂ ಪಾಲಾಶ್‌ ಶೇಖ್‌, ಸೋನಾ ಶೇಖ್‌ ಎಂಬುವವರ ಎರಡು ಗುಂಪುಗಳ ನಡುವೆ ದೀರ್ಘಕಾಲದ ವೈರತ್ವವಿತ್ತು. ಸ್ಥಳೀಯ ಪ್ರಾಬಲ್ಯ, ವಾಣಿಜ್ಯ ವಾಹನಗಳಿಂದ ಸಂಗ್ರಹಿಸಲಾಗುವ ಅಕ್ರಮ ಹಣ, ಇತರ ಕಾನೂನುಬಾಹಿರ ಚಟುವಟಿಕೆಗಳಿಂದ ಬರುವ ಆದಾಯದ ಮೇಲಿನ ನಿಯಂತ್ರಣಕ್ಕಾಗಿ ಈ ಗುಂಪುಗಳ ನಡುವೆ ವೈರತ್ವ ಮನೆ ಮಾಡಿತ್ತು ಎಂದು ಸಿಬಿಐ ಹೇಳಿದೆ.

ಬೋಗ್‌ತುಯಿ ಗ್ರಾಮದಲ್ಲಿ ಮಾರ್ಚ್‌ 22ರಂದು 9 ಮಂದಿಯನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು. ಈ ಪ್ರಕರಣದ ತನಿಖೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ಎಸ್‌ಐಟಿ ರಚಿಸಿತ್ತು. ಆದರೆ, ಕೋಲ್ಕತ್ತ ಹೈಕೋರ್ಟ್‌ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು