ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ, ಹಣದುಬ್ಬರದಂತಹ ಚರ್ಚೆ ತಡೆಗೆ ಬಿಜೆಪಿ ಸದಸ್ಯರ ಗದ್ದಲ: ಖರ್ಗೆ

ಅಕ್ಷರ ಗಾತ್ರ

ನವದೆಹಲಿ: ಬೆಲೆ ಏರಿಕೆ, ಹಣದುಬ್ಬರದಂತಹ ವಿಷಯಗಳ ಬಗ್ಗೆ ಚರ್ಚೆ ನಡೆಸುವುದು ಬೇಡ ಎಂದು ಉದ್ದೇಶಪೂರ್ವಕವಾಗಿಯೇ ಆಡಳಿತ ಪಕ್ಷದ ಸಂಸದರು ಲೋಕಸಭೆಯಲ್ಲಿ ಗದ್ದಲ ಮಾಡುತ್ತಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ ಎಂದು ಎಎನ್‌ಐ ಟ್ವೀಟಿಸಿದೆ.

ರಾಷ್ಟ್ರಪತ್ನಿ ಹೇಳಿಕೆ ಕುರಿತಂತೆ ಅಧಿರ್ ಚೌಧರಿ ಕ್ಷಮೆಯಾಚಿಸಿದ್ದಾರೆ. ಆದರೂ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕ್ಷಮೆಯಾಚಿಸುವಂತೆ ಒತ್ತಾಯಿಸಿ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಸಂಭೋದಿಸಿದ್ದ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಹೇಳಿಕೆಗೆ ಶುಕ್ರವಾರವೂ ಸಹ ಲೋಕಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಹೀಗಾಗಿ, ಸದನದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಕ್ಷಮೆ ಕೇಳಿದ್ದ ಕಾಂಗ್ರೆಸ್ ನಾಯಕ

ವಿವಿಧ ವಿಚಾರಗಳ ಕುರಿತು ಸಂಸತ್ತಿನ ಹೊರಗೆ ಮಾಧ್ಯಮ ಪ್ರತಿನಿಧಿಗಳ ಜತೆಗೆ ಬುಧವಾರ ಮಾತನಾಡಿದ್ದ ಅಧಿರ್‌ ರಂಜನ್ ಅವರು ಮುರ್ಮು ಅವರನ್ನು ‘ರಾಷ್ಟ್ರ‍ಪತ್ನಿ’ ಎಂದಿದ್ದರು. ಬಳಿಕ, ಬಾಯ್ತಪ್ಪಿನಿಂದಾಗಿ ಹಾಗೆ ಹೇಳಿರುವುದಾಗಿ ಗುರುರ ಸ್ಪಷ್ಟನೆ ನೀಡಿದರು.

‘ಬುಧವಾರ ನಾವು ವಿಜಯ ಚೌಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ್ದೆ. ಎಲ್ಲಿಗೆ ಹೋಗುವಿರಿ ಎಂದು ಅವರು ಕೇಳಿದ್ದಕ್ಕೆ ‘ರಾಷ್ಟ್ರಪತ್ನಿ’ ಬಳಿಗೆ ಎಂದಿದ್ದೆ. ಬಾಯ್ತಪ್ಪಿನಿಂದ ಒಂದು ಬಾರಿ ಹಾಗೆ ಹೇಳಿದ್ದೆ. ತಪ್ಪು ಮಾಡಿದೆ ಎಂಬುದು ನನಗೆ ಅರಿವಾಗಿತ್ತು. ಆ ವಿಡಿಯೊವನ್ನು ಪ್ರಸಾರ ಮಾಡಬೇಡಿ ಎಂದು ನಾನು ಕೋರಿದ್ದೆ. ಆದರೆ ಬಿಜೆಪಿ ಅದನ್ನು ವಿವಾದ ಮಾಡಿದೆ’ ಎಂದು ಅವರು ಹೇಳಿದ್ದರು.

‘ನಾನು ಏನು ಮಾಡಲಿ? ತಪ್ಪು ಪದ ಹೇಳಿದ್ದು ಅರ್ಥವಾಗಿದೆ. ವಿಡಿಯೊವನ್ನು ಪ್ರಸಾರ ಮಾಡಬೇಡಿ ಎಂದು ಹೇಳುವುದಕ್ಕಾಗಿ ನಾನು ಹೇಳಿಕೆ ಕೊಟ್ಟ ಮಾಧ್ಯಮ ಪ್ರತಿನಿಧಿಗಳನ್ನು ‌ಭೇಟಿಯಾಗುವ ಪ್ರಯತ್ನವನ್ನೂ ಮಾಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ’ ಎಂದಿದ್ದಾರೆ.

‘ಶುಕ್ರವಾರ ಭೇಟಿಗೆ ಅವಕಾಶ ಕೊಡುವಂತೆ ರಾಷ್ಟ್ರಪತಿಯವರನ್ನು ಕೋರಿದ್ದೇನೆ. ನನ್ನ ಹೇಳಿಕೆಯಿಂದ ನೊಂದಿದ್ದರೆ ರಾಷ್ಟ್ರಪತಿಯವರ ಕ್ಷಮೆ ಕೇಳುತ್ತೇನೆ’ ಎಂದು ಅಧಿರ್ ರಂಜನ್‌ ಹೇಳಿದ್ದಾರೆ.

ಇದನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT