ಬುಧವಾರ, ಅಕ್ಟೋಬರ್ 21, 2020
26 °C

ಗುಜರಾತ್ ಉಪಚುನಾವಣೆ| ಕಾಂಗ್ರೆಸ್‌ನ ಐವರು ಮಾಜಿ ಶಾಸಕರಿಗೆ ಬಿಜೆಪಿ ಟಿಕೆಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ಈ ವರ್ಷದ ಆರಂಭದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಗುಜರಾತ್‌ನ ಐವರೂ ಶಾಸಕರಿಗೆ ಬಿಜೆಪಿ ಆಯಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಿದೆ.

ನವೆಂಬರ್‌ 3ರಂದು ಗುಜರಾತ್‌ನ 8 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಅಬ್ದಾಸ್‌, ಲಿಂಬ್ಡಿ, ಮೊರ್ಬಿ, ಧಾರಿ, ಗದ್ದಡ(ಎಸ್‌ಸಿ), ಕರ್ಜನ್‌, ದಂಗ್ಸ್‌ (ಎಸ್‌ಟಿ), ಕಪ್ರದಾ (ಎಸ್‌ಟಿ) ಈ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ರಾಜ್ಯಸಭೆ ಚುನಾವಣೆಗೂ ಮುನ್ನ ಈ ಎಂಟು ಕ್ಷೇತ್ರಗಳ ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.

ಈ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ಬಿಜೆಪಿ ಭಾನುವಾರ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ಪ್ರದ್ಯುಮ್ನಿಶ್‌ ಜಡೇಜಾ, ಬ್ರಿಜೇಶ್ ಮೆರ್ಜಾ, ಜೆ ವಿ ಕಾಕಾಡಿಯಾ, ಅಕ್ಷಯ್ ಪಟೇಲ್, ಮತ್ತು ಜಿತು ಚೌಧರಿ ಅವರು ಸದ್ಯ ಅವರವರ ಕ್ಷೇತ್ರಗಳಿಂದಲೇ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ಸಫಲರಾಗಿದ್ದಾರೆ. ರಾಜ್ಯಸಭೆ ಚುನಾವಣೆ ವೇಳೆ ಇವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅಬ್ದಾಸ್‌, ಮೊರ್ಬಿ, ಧಾರಿ, ಕರ್ಜನ್, ಮತ್ತು ಕಪ್ರದಾ ವಿಧಾನಸಭಾ ಕ್ಷೇತ್ರಗಳಿಂದ ಈ ಐವರೂ ಕಣಕ್ಕಿಳಿಯುತ್ತಿದ್ದಾರೆ.

ಕಾಂಗ್ರೆಸ್‌ ಶಾಸಕರ ರಾಜೀನಾಮೆಯ ನೆರವಿನೊಂದಿಗೆ ಬಿಜೆಪಿ ಜೂನ್‌ನಲ್ಲಿ ನಡೆದಿದ್ದ ನಾಲ್ಕು ರಾಜ್ಯಸಭೆ ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿತ್ತು.

ಲಿಂಬ್ಡಿ ಕ್ಷೇತ್ರದ ಸೋಮ ಪಟೇಲ್, ದಂಗ್ಸ್‌ ಕ್ಷೇತ್ರದ ಮಂಗಲ್ ಗವಿತ್ ಮತ್ತು ಗದ್ದಡ ಕ್ಷೇತ್ರದ ಪ್ರವೀಣ್ ಮಾರು ಕಾಂಗ್ರೆಸ್‌ ತೊರೆದಿದ್ದರೂ, ಆದರೆ, ಬೇರೆ ಪಕ್ಷ ಸೇರಿರಲಿಲ್ಲ. ಹೀಗಾಗಿ ಇವರಿಗೆ ಬಿಜೆಪಿಯಿಂದ ಟಿಕೆಟ್‌ ಸಿಕ್ಕಿಲ್ಲ.

ಈ ಮೂರು ಕ್ಷೇತ್ರಗಳ ಪೈಕಿ ದಂಗ್ಸ್‌ ಕ್ಷೇತ್ರದಿಂದ ಬಿಜೆಪಿಯು ಮಾಜಿ ಸಚಿವ ಆತ್ಮರಾಮ್ ಪರ್ಮಾರ್ ಅವರನ್ನೂ, ಮಾಜಿ ಶಾಸಕ ವಿಜಯ್ ಪಟೇಲ್ ಅವರನ್ನು ಗದ್ದಡ ಕ್ಷೇತ್ರದಿಂದಲೂ ಸ್ಪರ್ಧೆಗೆ ಇಳಿಸಿದೆ. ಈ ಇಬ್ಬರು ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಅಭ್ಯರ್ಥಿಗಳ ಎದುರು ಸೋಲುಂಡಿದ್ದರು. ‌ಮತ್ತೊಂದು ಕ್ಷೇತ್ರಕ್ಕೆ ಬಿಜೆಪಿ ಇನ್ನಷ್ಟೇ ಅಭ್ಯರ್ಥಿಯನ್ನು ಘೋಷಿಸಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು