ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರ ರಾಜ್ಯಗಳನ್ನು ದುರ್ಬಲಗೊಳಿಸುತ್ತಿದೆ: ಅಶೋಕ್ ಗೆಹಲೋತ್

Last Updated 1 ಡಿಸೆಂಬರ್ 2021, 3:51 IST
ಅಕ್ಷರ ಗಾತ್ರ

ಜೈಪುರ: ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ರಾಜ್ಯಗಳನ್ನು ಬಲಪಡಿಸುವ ಬದಲು ದುರ್ಬಲಗೊಳಿಸುತ್ತಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಮಂಗಳವಾರ ಆರೋಪಿಸಿದ್ದಾರೆ.

'ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದೇ ಆದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೇರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಹೇಳಿದರು.

ಡಿಸೆಂಬರ್ 12ರಂದು ನಡೆಯಲಿರುವ 'ಮಹಂಗಾಯಿ ಹಠಾವೋ ರ‍್ಯಾಲಿ' ಸಿದ್ಧತೆ ಕುರಿತಾಗಿ ರಾಜ್ಯದ ಕಾಂಗ್ರೆಸ್ ಕಚೇರಿಯಲ್ಲಿ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು,

'ಹಿಂದಿನ ಸರ್ಕಾರವಿದ್ದಾಗ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೇರುತ್ತಿದ್ದ ಅಬಕಾರಿ ಸುಂಕವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತಿದ್ದವು. ಆದರೆ ಈಗಿನ ಸರ್ಕಾರವು ಹೆಚ್ಚುವರಿ ಅಬಕಾರಿ ಸುಂಕ, ವಿಶೇಷ ಅಬಕಾರಿ ಮತ್ತು ಸೆಸ್ ಅನ್ನು ಹೇರಿ ಇಂಧನ ಬೆಲೆಯಲ್ಲಿ ಹೆಚ್ಚಳ ಮಾಡಿದ್ದರೂ ಕೂಡ ರಾಜ್ಯಗಳಿಗೆ ಯಾವುದೇ ಪಾಲನ್ನು ನೀಡದೆ ಪೂರ್ತಿ ಹಣವು ಕೇಂದ್ರದ ಬೊಕ್ಕಸ ಸೇರುತ್ತಿದೆ' ಎಂದು ದೂರಿದರು.

'ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಿದಾಗ ರಾಜ್ಯಕ್ಕೆ ಬರಬೇಕಿದ್ದ ಆದಾಯವು ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತದೆ. ಕೇಂದ್ರ ಸರ್ಕಾರವು ಪೆಟ್ರೋಲ್ ಬೆಲೆ ಮೇಲೆ ₹ 10 ಮತ್ತು ಡೀಸೆಲ್ ಬೆಲೆ ಮೇಲೆ ₹ 15 ಕಡಿಮೆ ಮಾಡಿದರೆ ಮಾತ್ರ ದೇಶದಲ್ಲಿ ಹಣದುಬ್ಬರ ತಗ್ಗಲಿದೆ. ಇದೇ ಕಾರಣದಿಂದಾಗಿಯೇ ರಾಜಸ್ಥಾನವು ₹ 3,500 ಕೋಟಿ ನಷ್ಟವನ್ನು ಅನುಭವಿಸುತ್ತಿದೆ, ಇದನ್ನು ರಾಜ್ಯ ಸರ್ಕಾರ ಭರಿಸಲು ಸಿದ್ಧವಾಗಿದೆ' ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯಗಳಿಗೆ ನೀರು, ವಿದ್ಯುತ್, ರಸ್ತೆ, ಶಿಕ್ಷಣ, ಆರೋಗ್ಯದಂತಹ ಮಹತ್ವದ ಜವಾಬ್ದಾರಿ ಇರುವಾಗ ಕೇಂದ್ರ ಸರ್ಕಾರ ರಾಜ್ಯಗಳನ್ನು ಬಲಪಡಿಸುವ ಬದಲು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. ಎಲ್ಲಾ ಕಾಂಗ್ರೆಸ್ ನಾಯಕರು, ಸಚಿವರು, ಶಾಸಕರು, ಶಾಸಕ ಅಭ್ಯರ್ಥಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿದರೆ, 2023 ರಲ್ಲಿ ಕಾಂಗ್ರೆಸ್ ಮತ್ತೆ ಸರ್ಕಾರ ರಚಿಸುವುದನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದು ಗೆಹಲೋತ್ ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನದ ಉಸ್ತುವಾರಿ ಅಜಯ್ ಮಾಕೆನ್ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರ ಕಠಿಣ ಪರಿಶ್ರಮದಿಂದ ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬಂದೇ ಬರುತ್ತದೆ. ಇದು ಕಾರ್ಯಕರ್ತರ ಕೈಯಲ್ಲಿದೆ. ಕಾರ್ಯಕರ್ತರನ್ನು ಗೌರವಿಸಿ, ಜನರ ಆಶೋತ್ತರಗಳನ್ನು ಈಡೇರಿಸುವ ಮೂಲಕ 2023ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT