ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ತವರಿಗೆ ಅಚ್ಚರಿಯ ಆಯ್ಕೆ: ಗುಜರಾತ್‌ ಚುಕ್ಕಾಣಿ ಭೂಪೇಂದ್ರಗೆ

ಭೂಪೇಂದ್ರಗೆ ಗುಜರಾತ್‌ ಚುಕ್ಕಾಣಿ
Last Updated 12 ಸೆಪ್ಟೆಂಬರ್ 2021, 19:27 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಶಾಸಕಾಂಗ ಪಕ್ಷವು ಸರ್ವಾನಮತದಿಂದ ಆಯ್ಕೆ ಮಾಡಿರುವ ಭೂಪೇಂದ್ರ ಪಟೇಲ್‌ ಅವರು ತಳಮಟ್ಟದಿಂದ ಹಂತ ಹಂತವಾಗಿ ಬೆಳೆದವರು. ನಗರಸಭೆಯಿಂದ ತಮ್ಮ ರಾಜಕೀಯ ಆರಂಭಿಸಿದವರು. ಅವರು ಮಿದುಭಾಷಿ.

2017ರಲ್ಲಿ ಅವರು ಘಟ್ಲೋಡಿಯಾ ಕ್ಷೇತ್ರದಿಂದ ಮೊದಲ ಬಾರಿ ವಿಧಾನಸಭಾ ಚುನಾವಣೆ ಎದುರಿಸಿದರು. ಆದರೆ, ಆ ಚುನಾವಣೆಯಲ್ಲಿ ಗರಿಷ್ಠ ಅಂತರದಲ್ಲಿ ಗೆದ್ದರು. ಅವರ ಗೆಲುವಿನ ಅಂತರ 1.17 ಲಕ್ಷ ಮತಗಳು.

ಹತ್ತಿರದವರು ಅವರನ್ನು ‘ದಾದಾ’ ಎಂದು ಕರೆಯುತ್ತಾರೆ. ಗುಜರಾತಿನ ಮಾಜಿ ಮುಖ್ಯಮಂತ್ರಿ ಮತ್ತು ಉತ್ತರ ಪ್ರದೇಶ ರಾಜ್ಯಪಾಲೆ ಆಗಿರುವ ಆನಂದಿಬೆನ್‌ ಪಟೇಲ್‌ ಅವರಿಗೆ ಭೂಪೇಂದ್ರ ಅವರು ನಿಕಟವರ್ತಿ. ಹಿಂದೆ ಆನಂದಿಬೆನ್‌ ಅವರು ಪ್ರತಿನಿಧಿಸಿದ್ದ ವಿಧಾನಸಭಾ ಕ್ಷೇತ್ರದಿಂದಲೇ ಭೂಪೇಂದ್ರ ಅವರೂ ಗೆದ್ದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪ್ರತಿನಿಧಿಸುವ ಗಾಂಧಿನಗರ ಲೋಕಸಭಾ ಕ್ಷೇತ್ರದ ಭಾಗವಾಗಿದೆ ಈ ಕ್ಷೇತ್ರ.

ಭೂಪೇಂದ್ರ ಅವರು ಅಹಮದಾಬಾದ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ 2015–17ರ ಅವಧಿಯಲ್ಲಿ ಕೆಲಸ ಮಾಡಿದ್ದರು. ಅದಕ್ಕೂ ಮೊದಲು ಅಹಮದಾಬಾದ್‌ ನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. 2010ರಿಂದ 2015ರವರೆಗೆ ಈ ಹುದ್ದೆಯಲ್ಲಿ ಅವರು ಇದ್ದರು.

ಭೂಪೇಂದ್ರ ಅವರು ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸದಾ ಹಸನ್ಮುಖಿ ಮತ್ತು ತಳಮಟ್ಟದ ಕಾರ್ಯಕರ್ತರ ಜತೆಗೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ಅವರ ಆಪ್ತರು ಹೇಳುತ್ತಾರೆ. ಸ್ಥಳೀಯ ರಾಜಕಾರಣದಲ್ಲಿ ಹೆಚ್ಚು ಸಕ್ರಿಯವಾಗಿ ಇದ್ದದ್ದು ಇದಕ್ಕೆ ಕಾರಣ. ಅಹಮದಾಬಾದ್‌ ಜಿಲ್ಲೆಯಲ್ಲಿರುವ ಮೇಮ್‌ನಗರ ನಗರಸಭೆಯ ಸದಸ್ಯರಾಗಿದ್ದರು. ಎರಡು ಬಾರಿ ಅಧ್ಯಕ್ಷರೂ ಆಗಿದ್ದರು. ಪಟೇಲ್‌ ಸಮುದಾಯದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಉದ್ದೇಶಕ್ಕೆ ಸ್ಥಾಪಿತವಾದ ಸರ್ದಾರ್‌ಧಾಮ್‌ ವಿಶ್ವ ಪಾಟೀದಾರ್‌ ಕೇಂದ್ರದ ಟ್ರಸ್ಟಿಯಾಗಿಯೂ ಅವರು ಇದ್ದಾರೆ.

ವಿಜಯ ರೂಪಾಣಿ ಅವರು ಗುಜರಾತ್‌ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಈ ಸ್ಥಾನಕ್ಕೆ ಬೇರೆ ಬೇರೆಯವರ ಹೆಸರುಗಳು ಕೇಳಿ ಬಂದಿದ್ದವು. ಲಕ್ಷದ್ವೀಪ, ದಾದ್ರಾ–ನಗರ್‌ಹವೇಲಿಯ ಆಡಳಿತಾಧಿಕಾರಿ ಪ್ರಫುಲ್‌ ಖೋಡಾ, ಕೇಂದ್ರ ಸಚಿವ ಮನಸುಖ್‌ ಮಾಂಡವೀಯ ಮುಂತಾದವರ ಹೆಸರು ಜೋರಾಗಿ ಕೇಳಿ ಬಂದಿತ್ತು. ಭೂಪೇಂದ್ರ ಪಟೇಲ್‌ ಅವರ ಹೆಸರು ಎಲ್ಲಿಯೂ ಇರಲಿಲ್ಲ.

ಮೊದಲ ಬಾರಿಗೆ ಶಾಸಕರಾಗಿರುವ ಭೂಪೇಂದ್ರ ಅವರು ರಾಜ್ಯದ ಅತ್ಯಂತ ಪ್ರಭಾವಿ ಪಟೇಲ್‌ ಸಮುದಾಯದವರು ಎನ್ನುವುದೇ ಅವರ ಆಯ್ಕೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಮುಖ್ಯಮಂತ್ರಿಯನ್ನು ದಿಢೀರ್‌ ಬದಲಾಯಿಸಲು ಕಾರಣ ಏನೆಂಬುದು ಬಹಿರಂಗವಾಗಿಲ್ಲ. ಗುಜರಾತ್‌ ವಿಧಾನಸಭೆಗೆ 2022ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT