ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್ ಬಿಜೆಪಿ ಶಾಸಕನನ್ನು ಥಳಿಸಿ ಬಟ್ಟೆ ಹರಿದು ಹಾಕಿದ ರೈತ ಪ್ರತಿಭಟನೆಕಾರರು

Last Updated 28 ಮಾರ್ಚ್ 2021, 6:34 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್‌ನಲ್ಲಿ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಿರುವ ರೈತ ಪ್ರತಿಭಟನೆಕಾರರ ಗುಂಪು, ಬಟ್ಟೆಯನ್ನು ಹರಿದು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಮುಕ್ತಸರದ ಮಾಲೌಟ್‌ನಲ್ಲಿ ಈ ಘಟನೆ ನಡೆದಿದೆ. ಕೇಂದ್ರದ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆಒತ್ತಾಯಿಸಿ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಪ್ರತಿಭಟನೆ ನಡೆಸುತ್ತಿರುವ ರೈತರು, ಬಿಜೆಪಿ ನಾಯಕರ ಕಾರ್ಯಕ್ರಮಕ್ಕೆ ಅಡ್ಡಿಗೊಳಿಸುತ್ತಿದ್ದಾರೆ.

ಅಬೋಹರ್‌ನ ಬಿಜೆಪಿ ಶಾಸಕ ಅರುಣ್ ನಾರಂಗ್, ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಸ್ಥಳೀಯ ನಾಯಕರೊಂದಿಗೆ ತಲುಪಿದಾಗ ಅವರನ್ನು ಸುತ್ತುವರೆದ ರೈತ ಪ್ರತಿಭಟನಾಕಾರರ ಗುಂಪು ವಾಹನದ ಮೇಲೆ ಕಪ್ಪು ಮಸಿಯನ್ನು ಎರಚಿದ್ದಾರೆ.

ಆಕ್ರೋಶಭರಿತವಾದ ಗುಂಪು ಶಾಸಕರ ಮೇಲೆ ದಾಳಿ ನಡೆಸಿತ್ತು. ಪ್ರತಿಭಟನಕಾರರು ನಾರಂಗ್‌ರನ್ನು ಥಳಿಸಿ ಬಟ್ಟೆಗಳನ್ನು ಹರಿದು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಶಾಸಕರನ್ನು ಬೆಂಗಾವಲು ಪೊಲೀಸರ ಪಡೆಯು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ಶಾಸಕರಿಗೆ ಸುದ್ದಿಗೋಷ್ಠಿ ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದರು ಎಂದು ಮಾಲೌಟ್‌ನ ಪೊಲೀಸ್ ವರಿಷ್ಠಾಧಿಕಾರಿ ಜಸ್ಪಾಲ್ ಸಿಂಗ್ ತಿಳಿಸಿದ್ದಾರೆ.

ಬಿಜೆಪಿ ಶಾಸಕರ ಬಟ್ಟೆಯನ್ನು ಹರಿಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ.

ಬಿಜೆಪಿ ಶಾಸಕನ ಕೊಲೆ ಯತ್ನ, ಹಲ್ಲೆ, ಕ್ರಿಮಿನಲ್ ಬೆದರಿಕೆ, ಗಲಭೆ ಮತ್ತು ಸಾರ್ವಜನಿಕ ಕರ್ತವ್ಯ ಎಸಗುವುದಕ್ಕೆ ತಡೆಯೊಡ್ಡಿದ್ದು ಸೇರಿದಂತೆ ಅನೇಕ ಆರೋಪಗಳ ಮೇಲೆ ಪಂಜಾಬ್‌ನ ಮುಕ್ತರ್ ಪೊಲೀಸರು, ಶನಿವಾರ ರಾತ್ರಿ ಏಳು ಮಂದಿ ಮತ್ತು 200-250 ಅಪರಿಚಿತರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾರಂಗ್, ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಹೋದ ವೇಳೆ ಹಲವಾರು ಮಂದಿ ನನ್ನನ್ನು ಥಳಿಸಿದ್ದು, ಬಟ್ಟೆಗಳನ್ನು ಹರಿದು ಹಾಕಿದ್ದಾರೆ ಎಂದು ಹೇಳಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಶಾಂತಿಯನ್ನು ಭಂಗಗೊಳಿಸಲು ಯತ್ನಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಹಿಂಸಾಚಾರದಲ್ಲಿ ಭಾಗಿಯಾಗದಂತೆ ರೈತರಲ್ಲಿ ಮನವಿ ಮಾಡಿದ್ದು, ಕೃಷಿ ಕಾನೂನಿಗೆ ಸಂಬಂಧಪಟ್ಟಂತೆ ವಿವಾದವನ್ನು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಇತ್ಯರ್ಥಗೊಳಿಸುವಂತೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT