ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ | ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ: ಹಾರ್ದಿಕ್, ಜಡೇಜಾ ಪತ್ನಿಗೆ ಟಿಕೆಟ್

Last Updated 10 ನವೆಂಬರ್ 2022, 16:03 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ.38 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಇವರಲ್ಲಿ ಐವರು ಸಚಿವರು ಮತ್ತು ಸೇತುವೆ ಕುಸಿತದ ದುರಂತ ಸಂಭವಿಸಿದ ಮೊರ್ಬಿ ಶಾಸಕ ಕಿರಣ್‌ ಪಟೇಲ್‌ ಸೇರಿದ್ದಾರೆ.

2012 ಮತ್ತು 2017ರಲ್ಲಿ ಭುಜ್‌ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಗುಜರಾತ್‌ ವಿಧಾನಸಭೆ ಸ್ಪೀಕರ್‌ ನಿಂಬಾಬೆನ್‌ ಆಚಾರ್ಯ ಅವರಿಗೂ ಈ ಬಾರಿ ಟಿಕೆಟ್‌ ನಿರಾಕರಿಸಲಾಗಿದೆ.ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಮತ್ತು ಅವರ ಸಂಪುಟದಲ್ಲಿ ಶಾಸಕರಾಗಿದ್ದ ಏಳು ಶಾಸಕರಿಗೂ ಟಿಕೆಟ್‌ ನೀಡಿಲ್ಲ.

ಕಾಂಗ್ರೆಸ್‌ ತೊರೆದವರಿಗೆ ಟಿಕೆಟ್‌: ಕಳೆದ 5 ವರ್ಷದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ ಆಗಿರುವ ಹಲವು ಶಾಸಕರಿಗೆ ಬಿಜೆಪಿ ಈ ಬಾರಿ ಟಿಕೆಟ್‌ ನೀಡಿದೆ.ಇತ್ತೀಚೆಗೆ ಬಿಜೆಪಿ ಸೇರಿರುವ ಮೋಹನ್‌ ಸಿನ್ಹಾ ರಾಥ್ವಾ ಅವರ ಮಗ ರಾಜೇಂದ್ರ ಸಿನ್ಹಾ ರಾಥ್ವಾ, ಭಗವಾನ್‌ ಬಾರದ್‌, ರಿಬಾದಿಯಾ ಮತ್ತು ಅಶ್ವಿನ್‌ ಕಾತ್ವಾಲ್‌, ಹಾರ್ದಿಕ್‌ ಪಟೇಲ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ಪಾಟಿದಾರ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಅವರು ತಮ್ಮ ತವರು ಕ್ಷೇತ್ರವಾದ ವಿರಾಮಗಾಮ್‌ನಿಂದ ಸ್ಪರ್ಧಿಸಲಿದ್ದಾರೆ. ಕ್ರಿಕೆಟಿಗ ರವೀಂದ್ರ ಸಿಂಹ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಉತ್ತರ ಜಾಮ್‌ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.‌

ಹಾಲಿ ಸಿಎಂ ಭೂಪೇಂದ್ರ ಪಟೇಲ್ ಅವರು 2017ರ ಚುನಾವಣೆಯಲ್ಲಿ ಗೆದ್ದಿದ್ದ ಘಟ್ಲೋಡಿಯಾದಿಂದಲೇ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ.ಇತ್ತೀಚೆಗೆ ಸೇತುವೆ ದುರಂತ ಸಂಭವಿಸಿದ್ದ ಮೋರ್ಬಿ ವಿಧಾನಸಭಾ ಕ್ಷೇತ್ರದಿಂದ ಕಾಂತಿಲಾಲ್ ಅಮರತಿಯಾ ಅವರನ್ನು ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್‌ನಿಂದ ಬಂದಿರುವ ಬ್ರಿಜೇಶ್ ಮೆರ್ಜಾ ಅವರು ಈ ಹಿಂದೆ ಇಲ್ಲಿ ಗೆದ್ದಿದ್ದರು.

182 ಸದಸ್ಯರ ಗುಜರಾತ್‌ ವಿಧಾನಸಭೆಗೆ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಡಿಸೆಂಬರ್‌ 1ರಂದು ಮೊದಲ ಹಂತದಲ್ಲಿ ಮತದಾನ ನಡೆಯುವ 89 ಸ್ಥಾನ ಪೈಕಿ 84 ಅಭ್ಯರ್ಥಿಗಳು ಮತ್ತು ಡಿ. 5ರಂದು ಮತದಾನ ನಡೆಯಲಿರುವ 93 ಕ್ಷೇತ್ರಗಳ 76 ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಎರಡು ದಿನದಲ್ಲಿ ಕಾಂಗ್ರೆಸ್‌ ತೊರೆದ ಮೂವರು ಶಾಸಕರು
ವಿಧಾನಸಭೆ ಚುನಾವಣೆ ನಡುವೆಯೇ ಗುಜರಾತ್‌ನ ದಾಹೋದ್ ಜಿಲ್ಲೆಯ ಜಲೋದ್‌ ಕ್ಷೇತ್ರದ ಕಾಂಗ್ರೆಸ್ ಶಾಸಕ ಭವೇಶ್ ಕತಾರಾ ಅವರು ಗುರುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್‌ನ ಮೋಹನ್‌ಸಿನ್ಹ್ ರಾಥ್ವಾ ಮತ್ತು ಭಗವಾನ್ ಬರಾದ್ ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕತಾರಾ ಅವರು ಬುಧವಾರ ರಾತ್ರಿ ವಿಧಾನಸಭಾಧ್ಯಕ್ಷರ ನಿವಾಸಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ.

ಕತಾರಾ ರಾಜೀನಾಮೆಯೊಂದಿಗೆ ಎರಡು ದಿನದಲ್ಲಿ ಮೂವರು ಶಾಸಕರು ಕಾಂಗ್ರೆಸ್‌ ತೊರೆದಂತಾಗಿದೆ.

ಬಿಜೆಪಿಯು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಿರುವ ಹೊತ್ತಿನಲ್ಲೇ ಕತಾರಾ ಅವರೂ ರಾಜೀನಾಮೆ ನೀಡಿದ್ದಾರೆ. ಬಹುತೇಕ ಗುರುವಾರ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ.

ಈ ಹಿಂದೆ, ರಾಥ್ವಾ ಮತ್ತು ಬರಾದ್ ಕೂಡ ಕಾಂಗ್ರೆಸ್ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಗುಜರಾತ್‌ ವಿಧಾನಸಭೆಗೆ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಟಿಕೆಟ್‌ ನಿರಾಕರಣೆ: ಮೊರ್ಬಿ ಶಾಸಕ ಸೇರಿ 38 ಶಾಸಕರಿಗೆ ಟಿಕೆಟ್‌ ನಿರಾಕರಿಸಿದ ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT