ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ, ಯೋಜನೆ ಫಲಾನುಭವಿಗಳೇ ಬಿಜೆಪಿಯ 2024ರ ಚುನಾವಣೆಯ ಗುರಿ

ಬಿಜೆ‍ಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಹೈದರಾಬಾದ್‌
Last Updated 2 ಜುಲೈ 2022, 18:45 IST
ಅಕ್ಷರ ಗಾತ್ರ

ಹೈದರಾಬಾದ್‌: ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮತಗಟ್ಟೆಗಳು ಮತ್ತು ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಕೇಂದ್ರ ಬಿಂದುವಾಗಿಸುವ ಕಾರ್ಯತಂತ್ರವನ್ನು ಬಿಜೆಪಿ ಅನುಸರಿಸಲಿದೆ. ಈ ಎರಡು ವಿಚಾರಗಳ ಬಗ್ಗೆ ಗಮನ ಕೇಂದ್ರೀಕರಿಸಬೇಕು ಎಂದು ಬಿಜೆಪಿ ನಿರ್ಧರಿಸಿದೆ. ಬಿಜೆ‍ಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಹೈದರಾಬಾದ್‌ನಲ್ಲಿ ಶನಿವಾರ ಆರಂಭವಾಗಿದೆ. ಇದು ಎರಡು ದಿನ ನಡೆಯಲಿದೆ.

‘ಮತಗಟ್ಟೆ ಮಟ್ಟದ ಸಂಘಟನೆಯನ್ನು ಬಲಪಡಿಸಬೇಕು ಮತ್ತು ಮತಗಟ್ಟೆ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯಕರ್ತರ ಜತೆಗೆ ಮುಖಂಡರು ಸದಾ ಸಂಪರ್ಕದಲ್ಲಿ ಇರಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಸುಂಧರಾ ರಾಜೆ ಹೇಳಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳ 34 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಸಂಪರ್ಕಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ರಾಜೆ ತಿಳಿಸಿದ್ದಾರೆ.

ಕಾರ್ಯಕಾರಿಣಿ ಆರಂಭಕ್ಕೂ ಮುನ್ನ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ವಿಚಾರಗಳನ್ನು ಚರ್ಚಿಸಲಾಗಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕಾರ್ಯಕಾರಿಣಿಯಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮೋದಿ ಅವರು ಭಾನುವಾರ ಮಾತನಾಡಲಿದ್ದಾರೆ.

ಪಕ್ಷದ ‘ಪ್ರವಾಸ್‌’ ಕಾರ್ಯತಂತ್ರಕ್ಕೆ ವಿಶೇಷ ಗಮನ ನೀಡಲು ನಿರ್ಧರಿಸಲಾಗಿದೆ. ಅದರ ಪ್ರಕಾರ, ಮುಖಂಡರು ಗ್ರಾಮಗಳಿಗೆ ಹೋಗಿ, ಕನಿಷ್ಠ ಒಂದು ರಾತ್ರಿ ಆ ಗ್ರಾಮದ ಜನರ ಜತೆ ಸಂವಾದ ನಡೆಸಲು ಸೂಚಿಸಲಾಗಿದೆ.

ಮತಗಟ್ಟೆ ಮಟ್ಟದ ಸಂಘಟನೆಯನ್ನು ಬಲಪಡಿಸಲು ಯೋಜನೆ ರೂಪಿಸಲಾಗಿದೆ.

ಮೊದಲನೆಯದಾಗಿ, ಪ್ರತಿ ಮತಗಟ್ಟೆಯಲ್ಲಿ 200 ಕಾರ್ಯಕರ್ತರನ್ನು ಗುರುತಿಸುವುದು ಮತ್ತು ಮತದಾರರ ಜತೆ ಸಂಪರ್ಕದಲ್ಲಿ ಇರಲು ವಾಟ್ಸ್ಆ್ಯಪ್‌ ಗುಂಪುಗಳನ್ನು ರಚಿಸುವುದು. ಲೋಕಸಭೆಗೆ 2019ರಲ್ಲಿ ಚುನಾವಣೆ ನಡೆದಾಗ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳಿದ್ದವು.

ಎರಡನೆಯದಾಗಿ, ಪ್ರಧಾನಿಯವರ ತಿಂಗಳ ರೇಡಿಯೊ ಕಾರ್ಯಕ್ರಮ ‘ಮನದ ಮಾತು’ ಅನ್ನು ಜನರಿಗೆ ತಲುಪಿಸಲು ಕಾರ್ಯಕರ್ತರು ದಾರಿಗಳನ್ನು ಕಂಡುಕೊಳ್ಳಬೇಕು. ಮೂರನೆಯದಾಗಿ, ರಾಜ್ಯ ಘಟಕದ ಅಧ್ಯಕ್ಷರು ಮತ್ತು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯು ಪ್ರತಿ ತಿಂಗಳು ಏಳರಿಂದ 10 ದಿನಗಳನ್ನು ಮತಗಟ್ಟೆ ಮಟ್ಟದ ಸಂಘಟನೆ ಬಲಪಡಿಸಲು ಮೀಸಲಿಡಬೇಕು.

‘ಹರ್‌ ಘರ್ ತಿರಂಗ’
ಅಭಿಯಾನ ಆರಂಭಕ್ಕೂ ನಿರ್ಧರಿಸಲಾಗಿದೆ. 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವುದಕ್ಕಾಗಿ ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವಂತೆ ಮಾಡುವುದೇ ಈ ಅಭಿಯಾನದ ಉದ್ದೇಶ. 20 ಕೋಟಿ ಮನೆಗಳ ಮೇಲೆ ಧ್ವಜ ಹಾರಿಸುವಂತೆ ಮಾಡುವ ಗುರಿ ಇದೆ ಎಂದು ರಾಜೆ ತಿಳಿಸಿದ್ದಾರೆ.

ಪ್ರಧಾನಿ ಮೋದಿಗೆ ಕೆಸಿಆರ್‌ ಸ್ವಾಗತ ಇಲ್ಲ

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ಅವರು ಸ್ವಾಗತಿಸಿಲ್ಲ.

ಪ್ರಧಾನಿಯನ್ನು ಸ್ವಾಗತಿಸುವ ಕರ್ತವ್ಯವನ್ನು ಪಶುಸಂಗೋಪನಾ ಸಚಿವ ಶ್ರೀನಿವಾಸ ಯಾದವ್‌ ಅವರಿಗೆ ವಹಿಸಲಾಗಿತ್ತು. ಆದರೆ, ಪ್ರಧಾನಿ ಬರುವುದಕ್ಕೆ ಕೆಲವೇ ತಾಸು ಮೊದಲು ಅದೇ ವಿಮಾನ ನಿಲ್ದಾಣಕ್ಕೆ ಬಂದ, ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಸಹಮತದ ಅಭ್ಯರ್ಥಿಯಾಗಿರುವ ಯಶವಂತ ಸಿನ್ಹಾ ಅವರಿಗೆ ಕೆಸಿಆರ್ ಅವರು ಭವ್ಯ ಸ್ವಾಗತ ಕೋರಿದ್ದಾರೆ.

ರಾಷ್ಟ್ರಪತಿ ಹುದ್ದೆಗೆ ಕಳೆದ ಬಾರಿ ಚುನಾವಣೆ ನಡೆದಾಗ ಕೆಸಿಆರ್‌ ಅವರು ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಪರ ಗಟ್ಟಿಯಾಗಿ ನಿಂತಿದ್ದರು. ಆದರೆ, ಐದು ವರ್ಷಗಳಲ್ಲಿ ರಾವ್‌ ಅವರು ಬಿಜೆಪಿಯ ಬದ್ಧ ಪ್ರತಿಸ್ಪರ್ಧಿ ಆಗಿದ್ದಾರೆ ಎಂಬುದನ್ನು ಶನಿವಾರದ ಬೆಳವಣಿಗೆಯು ತೋರಿಸಿಕೊಟ್ಟಿದೆ.

ಸಿನ್ಹಾ ಪರವಾಗಿ ಬೃಹತ್ ಸಾರ್ವಜನಿಕ ಸಮಾರಂಭವನ್ನೂ ಕೆಸಿಆರ್ ಏರ್ಪಡಿಸಿದ್ದಾರೆ.

ಪ್ರಧಾನಿಯನ್ನು ಸ್ವಾಗತಿಸಲು ಕೆಸಿಆರ್ ಅವರು ಹೋಗದೇ ಇರುವುದು ಐದು ತಿಂಗಳಲ್ಲಿ ಇದು ಮೂರನೇ ಬಾರಿ. ಮೋದಿ ಅವರು ಮೇಯಲ್ಲಿ ಹೈದರಾಬಾದ್‌ಗೆ ಭೇಟಿ ಕೊಟ್ಟಾಗ, ಕೆಸಿಆರ್ ಅವರು ಬೆಂಗಳೂರಿಗೆ ಹೋಗಿದ್ದರು. ಫೆಬ್ರುವರಿಯಲ್ಲಿ ಭೇಟಿ ಕೊಟ್ಟಾಗಲೂ ಸಣ್ಣದಾಗಿ ಜ್ವರ ಬರುತ್ತಿದೆ ಎಂಬ ಕಾರಣ ಕೊಟ್ಟುಕೆಸಿಆರ್ ಅವರು ಮೋದಿ ಭೇಟಿಯನ್ನು ತಪ್ಪಿಸಿಕೊಂಡಿದ್ದರು.

ಮೋದಿಗೆ ಕಾರ್ಯಕಾರಿಣಿ ಅಭಿನಂದನೆ

ಇಡೀ ಜಗತ್ತನ್ನು ಕೋವಿಡ್‌ ಸಾಂಕ್ರಾಮಿಕ ಆವರಿಸಿಕೊಂಡಿದ್ದರೂ ಭಾರತವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸುವ ನಿರ್ಣಯವನ್ನು ಕಾರ್ಯಕಾರಿಣಿಯಲ್ಲಿ ಶನಿವಾರ ಅಂಗೀಕರಿಸಲಾಗಿದೆ.

ಉಚಿತ ಪಡಿತರ ವಿತರಿಸುವುದಕ್ಕಾಗಿ ಕಳೆದ 25 ತಿಂಗಳಲ್ಲಿ ₹2.60 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. 80 ಕೋಟಿ ಜನರು ಪ್ರಯೋಜನ ಪಡೆದಿದ್ದಾರೆ ಎಂದು ನಿರ್ಣಯದಲ್ಲಿ ಹೊಗಳಲಾಗಿದೆ. ಸೇನೆಗಳಿಗೆ ಅಲ್ಪಾವಧಿ ನೇಮಕಾತಿಯ ‘ಅಗ್ನಿವೀರ್‌’ ಯೋಜನೆಯ ಬಗ್ಗೆಯೂ ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗಿದೆ. ಪ್ರತಿ ವರ್ಷ 10 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು ಎಂದು ಕಾರ್ಯಕಾರಿಣಿ ಹೇಳಿದೆ.

ಉದ್ಘಾಟನಾ ಭಾಷಣ ಮಾಡಿದ ಜೆ.ಪಿ.ನಡ್ಡಾ ಅವರು, ಮೋದಿ ಅವರ ಎಂಟು ವರ್ಷಗಳ ಆಳ್ವಿಕೆಯನ್ನು ಹೊಗಳಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಕೀಯ ನಿರ್ಣಯವೊಂದನ್ನುಕಾರ್ಯಕಾರಿಣಿಯ ಎರಡನೇ ದಿನವಾದ ಭಾನುವಾರ ಮಂಡಿಸಲಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಅದನ್ನು ಅನುಮೋದಿಸಲಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT