ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾವಿಗೆ ಕಾರಣರಾದವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ: ವರುಣ್ ಗಾಂಧಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪತ್ರ, ಸಂತ್ರಸ್ತ ರೈತ ಕುಟುಂಬಕ್ಕೆ ₹1 ಕೋಟಿ ಪರಿಹಾರಕ್ಕೆ ಆಗ್ರಹ
Last Updated 4 ಅಕ್ಟೋಬರ್ 2021, 6:15 IST
ಅಕ್ಷರ ಗಾತ್ರ

ನವದೆಹಲಿ:ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಘಟನೆಯಲ್ಲಿ ರೈತರ ಸಾವಿಗೆ ಕಾರಣದವರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಬಿಜೆಪಿ ಸಂಸದ ವರುಣ್ ಗಾಂಧಿ ಆಗ್ರಹಿಸಿದ್ದಾರೆ.

ಈ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿರುವ ಅವರು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳ್ಳಬೇಕು. ಮೃತ ರೈತರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

‘ಇದೊಂದು ಹೃದಯವಿದ್ರಾವಕ ಘಟನೆ‘ ಎಂದು ಬಣ್ಣಿಸಿರುವ ಅವರು, ಈ ಘಟನೆ ದೇಶದ ಜನರಲ್ಲಿ ನೋವುಂಟು ಮಾಡುವ ಜೊತೆಗೆ ಆಕ್ರೋಶಗೊಳ್ಳುವಂತೆ ಮಾಡಿದೆ ಎಂದು ಹೇಳಿದ್ದಾರೆ.

ರೈತರು ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಪ್ರಜಾಪ್ರಭುತ್ವ ನೀಡಿರುವ ಹಕ್ಕುಗಳ ಅಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟದಲ್ಲಿ ಪಾಲ್ಗೊಂಡಿರುವವರೆಲ್ಲ ನಮ್ಮ ರೈತ ಸಹೋದರರು, ನಮ್ಮ ದೇಶದ ಪ್ರಜೆಗಳು‘ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಪ್ರತಿಭಟನಾ ನಿರತ ರೈತರೊಂದಿಗೆ ಸಂಯಮ ಮತ್ತು ತಾಳ್ಮೆಯಿಂದ ವ್ಯವಹರಿಸಬೇಕು. ಎಂಥದ್ದೇ ಸಂದರ್ಭದಲ್ಲಾದರೂ ರೈತರೊಂದಿಗೆ ಸಂವೇದನೆಯಿಂದ ವರ್ತಿಸಬೇಕು. ಹಾಗೆಯೇ, ಗಾಂಧಿ ತತ್ವ ಮತ್ತು ಪ್ರಜಾಪ್ರಭುತ್ವದ ಮಾರ್ಗವನ್ನೇ ಅನುಸರಿಸಬೇಕು‘ ಎಂದು ವರುಣ್ ಗಾಂಧಿ ಹೇಳಿದ್ದಾರೆ.

ಈ ಘಟನೆಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಮಾಡಬೇಕು. ಶಂಕಿತರನ್ನು ಗುರುತಿಸಿ ವಿಚಾರಣೆ ನಡೆಸಬೇಕು. ಆರೋಪಿಗಳ ವಿರುದ್ಧ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು‘ ಎಂದು ಅವರು ಮನವಿ ಮಾಡಿದ್ದಾರೆ.

‘ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಸಿಬಿಐ ಮೂಲಕ ಕಾಲಮಿತಿಯಲ್ಲಿ ಈ ಪ್ರಕರಣದ ತನಿಖೆ ನಡೆಸುವುದು ಹೆಚ್ಚು ಸೂಕ್ತ‘ ಎಂದು ವರುಣ್‌ ಗಾಂಧಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT