ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಅಧಿವೇಶನಕ್ಕೆ ಪೆಗಾಸಸ್‌ ಪ್ರಕರಣ ಅಡ್ಡಿ: ಪ್ರತಿಭಟನೆಗೆ ಕಲಾಪ ಅಸ್ತವ್ಯಸ್ತ

Last Updated 28 ಜುಲೈ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಉಭಯ ಸದನಗಳ ಕಲಾಪವು ಪ್ರತಿಪಕ್ಷಗಳ ಸದಸ್ಯರ ಪ್ರತಿಭಟನೆಗೆಬುಧವಾರವೂ ಸಾಕ್ಷಿಯಾಗಿ, ದಿನದ ಮಟ್ಟಿಗೆ ಮುಂದೂಡಿಕೆ ಆಯಿತು.

ಪೆಗಾಸಸ್ ಗೂಢಚರ್ಯೆ ಬಗ್ಗೆ ತನಿಖೆ ಹಾಗೂ ಕೇಂದ್ರದ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ವಿಪಕ್ಷಗಳ ಸಂಸದರು ಮುಂಗಾರು ಅಧಿವೇಶನದ ಮೊದಲ ದಿನ ಆರಂಭಿಸಿದ್ದ ಪ್ರತಿಭಟನೆ ಬುಧವಾರವೂ ಮುಂದುವರಿಯಿತು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣಾಪತ್ರಗಳನ್ನು ಹಿಡಿದು ಪ್ರತಿಭಟನೆ ಆರಂಭಿಸಿದ ಕಾಂಗ್ರೆಸ್‌ ಸಂಸದರು, ಲೋಕಸಭೆಯ ಸ್ಪೀಕರ್‌ ಆಸನದ ಮುಂಭಾಗಕ್ಕೆ ನುಗ್ಗಿ ಕಾಗದ ಪತ್ರಗಳನ್ನು ತೂರಿದರು. ಘೋಷಣಾಪತ್ರಗಳನ್ನು ಹರಿದುಹಾಕಿದರು.

ಸಭಾಧ್ಯಕ್ಷ ಸ್ಥಾನದಲ್ಲಿದ್ದ ರಾಜೇಂದ್ರ ಅಗರವಾಲ್‌ ಅವರುಪ್ರತಿಭಟನೆ ತೀವ್ರಗೊಂಡಾಗ ಕಲಾಪವನ್ನು ಮುಂದೂಡಿದರು. ದಿನವಿಡೀ ಹಲವು ಬಾರಿ ಮುಂದೂಡಿಕೆಯಾದ ಕಲಾಪವು ಸಂಜೆ 4 ಗಂಟೆಗೆ ಮತ್ತೆ ಆರಂಭವಾದಾಗಲೂ ಅದೇ ಸನ್ನಿವೇಶ ಇತ್ತು. ಸ್ಪೀಕರ್‌ ಸ್ಥಾನದಲ್ಲಿದ್ದ ರಮಾ ದೇವಿ, ‘ಸದನವನ್ನು ಮುಂದೂಡಿದಾಗ ನಿಮಗೆ ಸಂತೋಷವಾಗುತ್ತದೆ’ ಎಂದು ಹೇಳಿ, ಗುರುವಾರಕ್ಕೆ ಮುಂದೂಡಿದರು.

ಆದರೆ, ಮುಂಗಾರು ಅಧಿವೇಶನ ಆರಂಭವಾದ 19ರಿಂದ ಇದೇ ಮೊದಲ ಬಾರಿಗೆ, ವಿಪಕ್ಷಗಳ ಸದಸ್ಯರ ಪ್ರತಿಭಟನೆಯ ನಡುವೆಯೇ ಲೋಕಸಭೆಯ ಪ್ರಶ್ನೋತ್ತರ ಅವಧಿಯು ನಡೆಯಿತು.

ತಮ್ಮ ಆಸನದ ಎದುರಿನಲ್ಲೇ ಪ್ರತಿಭಟನೆ ನಡೆಯುತ್ತಿದ್ದರೂ ಸಭಾಧ್ಯಕ್ಷ ಓಂ ಬಿರ್ಲಾ ಕಲಾಪವನ್ನು ಮುಂದೂಡಲಿಲ್ಲ. 10ಕ್ಕೂ ಹೆಚ್ಚು ಪ್ರಶ್ನೆಗಳು ಹಾಗೂ ಉಪಪ್ರಶ್ನೆಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಾಯಿತು.

ಹಲವು ಸಲ ಮುಂದೂಡಿಕೆ ನಂತರ ಮತ್ತೆ ಮಧ್ಯಾಹ್ನ 2.45ಕ್ಕೆ ಆರಂಭವಾದ ರಾಜ್ಯಸಭಾ ಕಲಾಪವನ್ನು, ಕೆಲವೇ ನಿಮಿಷಗಳಲ್ಲಿ ಮರುದಿನಕ್ಕೆ ಮುಂದೂಡಲಾಯಿತು.

ಆರಂಭದಲ್ಲೇ ಘೋಷಣೆ ಕೂಗುತ್ತ ಪ್ರತಿಭಟನೆಗೆ ಮುಂದಾದ ವಿರೋಧ ಪಕ್ಷದ ಸದಸ್ಯರಿಗೆ, ಘೋಷಣಾಪತ್ರಗಳನ್ನು ಪ್ರದರ್ಶಿಸದಂತೆ ರಾಜ್ಯಸಭೆ ಸಭಾಪತಿ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ತಾಕೀತು ಮಾಡಿದರು. ಗದ್ದಲ ನಿಲ್ಲದೇ ಹೋದಾಗ, ಸಂಸದರ ಹೆಸರು ಹಾಗೂ ಶೂನ್ಯವೇಳೆಯಲ್ಲಿ ಅವರು ಪ್ರಸ್ತಾಪಿಸಲು ಮುಂದಾಗಿದ್ದ ವಿಷಯವನ್ನು ಪ್ರದರ್ಶಿಸುವಂತೆ ಸಚಿವಾಲಯದ ಸಿಬ್ಬಂದಿಗೆ ಸೂಚಿಸಿದರು.

ಚರ್ಚೆ ಇಲ್ಲ: ಮಸೂದೆಗಳಿಗೆ ಅಂಗೀಕಾರ

ನವದೆಹಲಿ: ಸಂಸತ್ತಿನಲ್ಲಿ ಪ್ರತಿ‍‍‍ಪಕ್ಷಗಳ ಸದಸ್ಯರ ಪ್ರತಿಭಟನೆಯ ನಡುವೆಯೇ, ಕೇಂದ್ರ ಸರ್ಕಾರ ಮಂಡಿಸಿದ ಮೂರು ಮಸೂದೆಗಳು ಬುಧವಾರ ಅಂಗೀಕಾರಗೊಂಡಿವೆ.

ಲೋಕಸಭೆಯಲ್ಲಿ, ದಿವಾಳಿತನ ಹಾಗೂ ದಿವಾಳಿ ಸಂಹಿತೆ ತಿದ್ದುಪಡಿ (ಐಬಿಸಿ) ತಿದ್ದುಪಡಿ ಮಸೂದೆಗೆ ಆರು ನಿಮಿಷಗಳಲ್ಲಿ ಅನುಮೋದನೆ ಸಿಕ್ಕರೆ; ಆರೋಗ್ಯ ಇಲಾಖೆಗೆ ₹ 17 ಸಾವಿರ ಕೋಟಿ ಸೇರಿದಂತೆ ಒಟ್ಟು ₹ 23,675 ಕೋಟಿ ಮೊತ್ತವನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೆಚ್ಚುವರಿಯಾಗಿ ವಿನಿಯೋಗಿಸಲು ಅನುಮತಿ ನೀಡುವ, ಧನ ವಿನಿಯೋಗ ಮಸೂದೆಯು ಚರ್ಚೆ ಇಲ್ಲದೇ ಒಂಬತ್ತು ನಿಮಿಷಗಳಲ್ಲಿ ಅಂಗೀಕಾರಗೊಂಡಿತು.

ಬಾಲ ನ್ಯಾಯ ಕಾಯ್ದೆ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ತಿದ್ದುಪಡಿ ಮಸೂದೆಯು ರಾಜ್ಯಸಭೆಯಲ್ಲಿ, ಚರ್ಚೆಯಿಲ್ಲದೇ ಅಂಗೀಕೃತಗೊಂಡಿತು.

ಅಧಿಕಾರಿಗಳ ವಿಚಾರಣೆ ಸಭೆಗೆ ಕೋರಂ ಕೊರತೆ

ನವದೆಹಲಿ (ಪಿಟಿಐ): ಪೆಗಾಸಸ್‌ ಕುತಂತ್ರಾಂಶದ ಮೂಲಕ ಗೂಢಚರ್ಯೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕಿದ್ದ ಸಂಸತ್‌ ಸಮಿತಿಯ ಸಭೆಯು ಕೋರಂ ಅಭಾವದಿಂದಾಗಿ ಬುಧವಾರ ನಡೆಯಲಿಲ್ಲ.

ಕಾಂಗ್ರೆಸ್ ಸಂಸದ ಶಶಿ ತರೂರ್‌ ನೇತೃತ್ವದ ಸಮಿತಿಯು ‘ಪೌರರ ಸುರಕ್ಷತೆ ಮತ್ತು ದತ್ತಾಂಶ ರಕ್ಷಣೆ’ ವಿಷಯದ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ, ಸಮಿತಿಯ ಸದಸ್ಯರಾಗಿರುವ ಬಿಜೆಪಿ ಸಂಸದರು ಸಭಾಂಗಣದಲ್ಲಿ ಹಾಜರಿದ್ದರೂ ಹಾಜರಾತಿ ಪು‌ಸ್ತಕಕ್ಕೆ ಸಹಿ ಮಾಡಲಿಲ್ಲ. ಹಾಗಾಗಿ, ಕೋರಂ ಭರ್ತಿ ಆಗಲಿಲ್ಲ.

ಮಾಹಿತಿ ತಂತ್ರಜ್ಞಾನ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳು ಪೆಗಾಸಸ್‌ ಪ್ರಕರಣಕ್ಕೆ ಸಂಬಂಧಿಸಿ ಸಮಿತಿಗೆ ಮಾಹಿತಿ ನೀಡಲಿದ್ದಾರೆ ಎಂದು ತರೂರ್‌ ಸಭೆಯಲ್ಲಿ ಪ್ರಕಟಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

‘ಈ ವಿಚಾರವಾಗಿ ಸದನದಲ್ಲಿ ಚರ್ಚಿಸುವುದಕ್ಕೆ ಕಾಂಗ್ರೆಸ್‌ ಅಡ್ಡಿ ಮಾಡುವುದಾದರೆ, ಸಮಿತಿಯ ಸಭೆಯಲ್ಲೂ ಅದರ ಚರ್ಚೆ ಬೇಡ’ ಎಂದು ಹೇಳಿ, ಪ್ರತಿಭಟನಾರ್ಥವಾಗಿ ಸಭೆಯ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಲಿಲ್ಲ. 32 ಸದಸ್ಯರ ಈ ಸಮಿತಿಯಲ್ಲಿ ಬಿಜೆಪಿ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

‘ತರೂರ್‌ ನೇತೃತ್ವಕ್ಕೆ ವಿರೋಧ’

ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಮುಖ್ಯಸ್ಥ ಸ್ಥಾನದಿಂದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರನ್ನು ವಜಾ ಮಾಡಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಬುಧವಾರ ಆಗ್ರಹಿಸಿದ್ದಾರೆ.

ತರೂರ್‌ ಅವರು ಆ ಸ್ಥಾನದಲ್ಲಿದ್ದುಕೊಂಡು ತಾರತಮ್ಯ ಮಾಡುತ್ತಿದ್ದಾರೆ. ಈ ವಿಷಯವಾಗಿ ಈಗಾಗಲೇ ಸ್ಪೀಕರ್‌ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಸದಸ್ಯರು ಸಂಸದೀಯ ಸ್ಥಾಯಿ ಸಮಿತಿ ಸಭೆಗೆ ಬಂದು, ಸಹಿ ಮಾಡದೇ ಕೋರಂ ಕೊರತೆಯಾಗುವಂತೆ ಮಾಡಿದ್ದನ್ನು ನೋಡಿದರೆ, ಪೆಗಾಸಸ್‌ ಎಂಬುದು ಈ ಸರ್ಕಾರಕ್ಕೆ ‘ಅಪಾಯಕಾರಿ ವಲಯ’ ಎಂಬುದು ವೇದ್ಯವಾಗುತ್ತದೆ ಎಂದು ಕಾಂಗ್ರೆಸ್‌ ಸದಸ್ಯ ಕಾರ್ತಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.

***

ಸಭಾಧ್ಯಕ್ಷರತ್ತ ಕಾಗದ ಎಸೆಯುವಂಥ ಅಶಿಸ್ತಿನ ವರ್ತನೆ ಮೂಲಕ, ಪ್ರತಿಪಕ್ಷಗಳು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಅವಮಾನಿಸಿವೆ. ಸದನದ ಘನತೆಗೆ ಚ್ಯುತಿ ತಂದಿವೆ

- ಅನುರಾಗ್‌ ಠಾಕೂರ್‌, ವಾರ್ತಾ ಮತ್ತು ಪ್ರಸಾರ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT