ಶುಕ್ರವಾರ, ಮೇ 20, 2022
22 °C
ಗಣರಾಜ್ಯೋತ್ಸವದಂದು ಸಂಭವನೀಯ ದಾಳಿ ಸಾಧ್ಯತೆ ಹಿನ್ನೆಲೆ

ಗಣರಾಜ್ಯೋತ್ಸವ: ಪಾಕ್‌ ಗಡಿಯಲ್ಲಿ ತೀವ್ರ ಕಟ್ಟೆಚ್ಚರ- ಬಿಎಸ್‌ಎಫ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು/ಶ್ರೀನಗರ: ‘ಗಣರಾಜ್ಯೋತ್ಸವ ದಿನದಂದು ದೇಶವಿರೋಧಿ ಚಟುವಟಿಕೆ ಸಾಧ್ಯತೆ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಾರತ– ಪಾಕಿಸ್ತಾನದ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಅಂತರರಾಷ್ಟ್ರೀಯ ಗಡಿಯಲ್ಲಿ ಹೆಚ್ಚುವರಿ ಗಡಿ ಭದ್ರತಾ ಪಡೆ (ಬಿಎಸ್ ಎಫ್)ಯನ್ನು ನಿಯೋಜಿಸಲಾಗಿದೆ’ ಎಂದು ಬಿಎಸ್ಎಫ್‌ನ ಜಮ್ಮು ಪ್ರಾಂತ್ಯ ಐಜಿ ಡಿ.ಕೆ.ಬೂರಾ ತಿಳಿಸಿದರು.

‘ಈ ಸಂಬಂಧ ಅಂತರರಾಷ್ಟ್ರೀಯ ಗಡಿಯಲ್ಲಿ ಡ್ರೋನ್‌ ಹಾರಾಟದ ಮೇಲೆ ನಿಗಾ ಸೇರಿದಂತೆ ವಿವಿಧ ಕಾರ್ಯಾಚರಣೆಯನ್ನು ಬಿಎಸ್‌ಎಫ್‌ ಆರಂಭಿಸಿದ್ದು, ಭಯೋತ್ಪಾದಕರ ದುಷ್ಕೃತ್ಯಗಳನ್ನು ವಿಫಲಗೊಳಿಸಲು ಸೇನೆ, ಸಿಆರ್‌ಪಿಎಫ್‌, ಸ್ಥಳೀಯ ಪೊಲೀಸರ ಸಹಯೋಗದಲ್ಲಿ ಜಂಟಿ ಗಸ್ತು ಆರಂಭಿಸಲಾಗಿದೆ’ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಗಡಿಯಾಚೆಯಿಂದ ಒಳನುಸುಳುವಿಕೆ, ಶಸ್ತ್ರಾಸ್ತ್ರ ಸಾಗಣೆ, ಸ್ಫೋಟ ಸಂಚು ಹಾಗೂ ಮಾದಕವಸ್ತು ಕಳ್ಳಸಾಗಣೆಯ ಸಾಧ್ಯತೆಯ ಬಗ್ಗೆ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಗಡಿನಿಯಂತ್ರಣ ರೇಖೆ(ಎಲ್‌ಒಸಿ) ಹಾಗೂ ಅಂತರರಾಷ್ಟ್ರೀಯ ಗಡಿ ತೀವ್ರ ಹಾಗೂ ವ್ಯಾಪಕ ಕಟ್ಟೆಚ್ಚರ ವಹಿಸಿದ್ದೇವೆ. ಜನರ ಸುರಕ್ಷತೆ ಹಾಗೂ ಭದ್ರತೆಯನ್ನು ಬಿಎಸ್‌ಎಫ್‌ ಖಚಿತಪಡಿಸಲಿದ್ದು, ಗಡಿ ಪ್ರದೇಶದಲ್ಲಿನ ಜನರು ಯಾವುದೇ ಭಯ ಪಡಬೇಕಿಲ್ಲ’ ಎಂದು ಹೇಳಿದರು.

ದೇಶ ನುಸುಳಲು 135 ಉಗ್ರರು ಸಂಚು

‘ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಯ ಪ್ರದೇಶಗಳಲ್ಲಿ ಸುಮಾರು 135 ಉಗ್ರರು ದೇಶದೊಳಗೆ ನುಸುಳಲು ಯತ್ನ ನಡೆಸುತ್ತಿದ್ದಾರೆ’ ಎಂದು ಬಿಎಸ್‌ಎಫ್‌ ಕಾಶ್ಮೀರ ಪ್ರಾಂತ್ಯದ ಐಜಿ ರಾಜಾ ಬಾಬು ಸಿಂಗ್‌ ತಿಳಿಸಿದರು.

ಶ್ರೀನಗರದ ಬಿಎಸ್‌ಎಫ್‌ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಒಳನುಸುಳುವ ಪ್ರಕರಣ ಕಡಿಮೆಯಾಗಿದ್ದು, ಸದ್ಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಯುದ್ಧಕ್ಕೂ ಪರಿಸ್ಥಿತಿ ಶಾಂತಿಯುತವಾಗಿದೆ. ‘2021ರಲ್ಲಿ 58 ಒಳನುಸುಳುವ ಯತ್ನ ನಡೆದಿದ್ದು, ಐವರನ್ನು ಹತ್ಯೆ ಮಾಡಲಾಗಿದೆ. 21 ಉಗ್ರರು ವಾಪಸ್‌ ತೆರಳಿದ್ದು, ಒಬ್ಬನನ್ನು ಸೆರೆ ಹಿಡಿಯಲಾಗಿದೆ’  ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು