ಸೋಮವಾರ, ನವೆಂಬರ್ 28, 2022
20 °C

ಹಿಮಾಚಲ ಪ್ರದೇಶ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಕಾರ್ಯ ಗುರುವಾರ ಅಂತ್ಯಗೊಂಡಿದೆ.

ಜೈರಾಮ್‌ ಠಾಕೂರ್ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರುವ ನಿರೀಕ್ಷೆ ಇಟ್ಟುಕೊಂಡಿರುವ ಬಿಜೆಪಿಯು, ಮರಳಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸುವ ಭರವಸೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭಾರತ್‌ ಜೊಡೊ ಯಾತ್ರೆಯಲ್ಲಿ ನಿರತರಾಗಿರುವುದರಿಂದ ಹಿಮಾಚಲ ಪ್ರದೇಶದಲ್ಲಿ ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿಲ್ಲ. ಆದರೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಲ್ಲಿ ಪ್ರಚಾರ ಕಾರ್ಯವನ್ನು ಮುನ್ನಡೆಸಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೂಡ ಬಹಿರಂಗ ಪ್ರಚಾರ ಕೊನೆಗೊಳ್ಳುವುದಕ್ಕೂ ಮುನ್ನ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ.

ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಇದೇ 12ರಂದು ಮತದಾನ ನಡೆಯಲಿದೆ. ಡಿಸೆಂಬರ್‌ 8ರಂದು ಮತ ಎಣಿಕೆ ನಡೆಯಲಿದೆ.

ಹಲವು ಸಿ.ಎಂ ಅಭ್ಯರ್ಥಿಗಳ ಉಪಸ್ಥಿತಿ ನಮ್ಮ ಬಲ: ಖರ್ಗೆ
‘ಹಿಮಾಚಲ ಪ್ರದೇಶದಲ್ಲಿ ಹಲವಾರು ಮುಖ್ಯಮಂತ್ರಿ ಅಭ್ಯರ್ಥಿಗಳ ಉಪಸ್ಥಿತಿಯು ನಮ್ಮ ಬಲವೇ ಹೊರತು ದೌರ್ಬಲ್ಯವಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದರು.

‘ಇದಕ್ಕೆ ತದ್ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಂಬಿ ಆಡಳಿತರೂಢ ಸರ್ಕಾರವಾದ ಬಿಜೆಪಿ ಚುನಾವಣಾ ಕಣಕ್ಕೆ ಇಳಿಯುತ್ತಿದೆ. ಏಕೆಂದರೆ, ಇಲ್ಲಿನ (ಹಿಮಾಚಲ ಪ್ರದೇಶ) ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಹಾಗೂ ಅವರ ಸರ್ಕಾರದ ವೈಫಲ್ಯತೆಯ ಬಗ್ಗೆ ಬಿಜೆಪಿಗೆ ತಿಳಿದಿದೆ’ ಎಂದರು. ‘ಮೋದಿಯವರು, ಅಭ್ಯರ್ಥಿಯನ್ನು ನೋಡಬೇಡಿ. ತಮ್ಮನ್ನು ನೋಡಿ ಮತ ಹಾಕುವಂತೆ ಹೇಳುತ್ತಿದ್ದಾರೆ. ಹಿಮಾಚಲ ಪ್ರದೇಶದ ಜನರನ್ನು ಕೀಳಾಗಿ ಕಾಣುವಂತೆ ಮೋದಿಯವರ ವರ್ತನೆ ಇದೆ. ಚುನಾವಣೆ ಮುಗಿದ ನಂತರ ಪ್ರಧಾನಿ ಇಲ್ಲಿರುವುದಿಲ್ಲ ಎಂದು ಈ ರಾಜ್ಯದ ಜನರಿಗೆ ಗೊತ್ತಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು