ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರದಾ ಲಂಚ ಹಗರಣ: ಸುವೇಂದು ತನಿಖೆಗೆ ಅನುಮತಿ ಸಿಕ್ಕಿಲ್ಲ ಎಂದ ಸಿಬಿಐ

Last Updated 18 ಮೇ 2021, 19:30 IST
ಅಕ್ಷರ ಗಾತ್ರ

ನವದೆಹಲಿ: ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರ ಮಾಡಿರುವ ಮುಕುಲ್‌ ರಾಯ್‌ ಮತ್ತು ಟಿಎಂಸಿ ಸಂಸದ ಅಪರೂಪ ಪೊದ್ದಾರ್‌ ಅವರ ವಿರುದ್ಧ ನಾರದಾ ಹಗರಣದಲ್ಲಿ ಯಾವುದೇ‍‍ಪುರಾವೆ ಸಿಕ್ಕಿಲ್ಲ. ಸುವೇಂದು ಅಧಿಕಾರಿ ಅವರ ವಿರುದ್ಧ ತನಿಖೆಗೆ ಅನುಮತಿ ಕೋರಿ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆಯಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

2019ರ ಏಪ್ರಿಲ್‌ 6ರಂದು ಈ ಪತ್ರ ಬರೆಯಲಾಗಿದೆ. ಅನುಮತಿ ಕೋರಿ ಎರಡು ವರ್ಷಗಳಾದರೂ ಸ್ಪೀಕರ್‌ ಅವರು ಇನ್ನೂ ಅನುಮತಿ ಕೊಟ್ಟಿಲ್ಲ.

ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಒಂದು ಕಾಲದಲ್ಲಿ ಆಪ್ತರಾಗಿದ್ದ ಸುವೇಂದು ಅವರು 2020ರ ಡಿಸೆಂಬರ್‌ನಲ್ಲಿ ಬಿಜೆಪಿ ಸೇರಿದ್ದಾರೆ. ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರು ಮಮತಾ ವಿರುದ್ಧ ನಂದಿಗ್ರಾಮ ಕ್ಷೇತ್ರದಲ್ಲಿ ಅಲ್ಪ ಅಂತರದ ಗೆಲುವು ಪಡೆದಿದ್ದಾರೆ.

2014ರಲ್ಲಿ ‘ನಾರದಾ ನ್ಯೂಸ್‌’ ನಡೆಸಿದ್ದ ಮಾರುವೇಷದ ಕಾರ್ಯಾಚರಣೆಯಲ್ಲಿ ಟಿಎಂಸಿಯ ಕೆಲವು ಮುಖಂಡರು ಲಂಚ ಪಡೆಯುವುದನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿತ್ತು. ಈ ವಿಡಿಯೊವನ್ನು 2016ರ ಪ‍ಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುನ್ನ ಬಹಿರಂಗಪಡಿಸಲಾಗಿತ್ತು. ವಿಡಿಯೊ ಬಹಿರಂಗವಾದಾಗ ಸುವೇಂದು ಅವರು ಲೋಕಸಭೆಯ ಸದಸ್ಯರಾಗಿದ್ದರು. ಹಾಗಾಗಿ, ಸ್ಪೀಕರ್‌ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸುವೇಂದು ಅವರಲ್ಲದೆ, ಟಿಎಂಸಿ ಮುಖಂಡರಾದ ಪ್ರಶೂನ್‌ ಬ್ಯಾನರ್ಜಿ, ಸೌಗತಾ ರಾಯ್‌ ಮತ್ತು ಕಕಲಿ ಘೋಷ್‌ ದಸ್ತಿದಾರ್‌ ಅವರ ವಿರುದ್ಧ ತನಿಖೆಗೆ ಸ್ಪೀಕರ್‌ ಅನುಮತಿ ಕೋರಲಾಗಿದೆ. 2016ರಲ್ಲಿ ಇವರೆಲ್ಲರೂ ಸಂಸದರಾಗಿದ್ದರು.

ಬಿಜೆಪಿ ಮುಖಂಡ ಮುಕುಲ್‌ ರಾಯ್‌ ಅವರ ಹೆಸರೂ ಎಫ್‌ಐಆರ್‌ನಲ್ಲಿ ಇದೆ. ಮುಕುಲ್‌ ಮತ್ತು ಸುವೇಂದು ಅವರು ಬಿಜೆಪಿಯಲ್ಲಿ ಇದ್ದಾರೆ. ಹಾಗಾಗಿ, ಅವರನ್ನು ಬಂಧಿಸಲಾಗಿಲ್ಲ ಎಂದು ಟಿಎಂಸಿ ಆರೋಪಿಸಿದೆ.

ಸುವೇಂದು ವಿರುದ್ಧ ಯಾವುದೇ ಕ್ರಮವನ್ನು ಯಾಕೆ ಕೈಗೊಂಡಿಲ್ಲ ಎಂದು ಮಾರುವೇಷದ ಕಾರ್ಯಾಚರಣೆ ನಡೆಸಿದ್ದ ಹಿರಿಯ ಪತ್ರಕರ್ತ ಮ್ಯಾಥ್ಯೂ ಸ್ಯಾಮುವೆಲ್‌ ಪ್ರಶ್ನಿಸಿದ್ದಾರೆ.

ಬಂಧಿತರು ಆಸ್ಪತ್ರೆಗೆ

ನಾರದಾ ಹಗರಣದಲ್ಲಿ ಸಿಬಿಐ ಬಂಧಿಸಿರುವ ಪಶ್ಚಿಮ ಬಂಗಾಳದ ಸಚಿವ ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್‌ ಮಿತ್ರಾ ಮತ್ತು ಪಕ್ಷದ ಮಾಜಿ ಮುಖಂಡ ಸೋವನ್‌ ಚಟರ್ಜಿ ಅವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಧನಕ್ಕೆ ಒಳಗಾಗಿರುವ ಇನ್ನೊಬ್ಬ ಸಚಿವ ಫಿರ್ಹಾದ್‌ ಹಕೀಮ್ ಅವರಿಗೆ ಮಂಗಳವಾರ ಬೆಳಿಗ್ಗೆ ಜ್ವರ ಕಾಣಿಸಿಕೊಂಡಿತ್ತು. ಹಾಗಾಗಿ, ಅವರನ್ನು ಬಂಧಿಸಿ ಇರಿಸಲಾಗಿರುವ ಪ್ರೆಸಿಡೆನ್ಶಿ ಕರೆಕ್ಷನಲ್‌ ಹೋಮ್‌ನ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಮಿತ್ರಾ ಮತ್ತು ಚಟರ್ಜಿ ಅವರು ಉಸಿರಾಟದ ಸಮಸ್ಯೆಯಾಗುತ್ತಿದೆ ಎಂದು ಹೇಳಿಕೊಂಡ ಕಾರಣ ಅವರಿಬ್ಬರನ್ನು ಎಸ್‌ಎಸ್‌ಕೆಎಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮುಖರ್ಜಿ ಅವರೂ ಇದೇ ಆಸ್ಪತ್ರೆಯಲ್ಲಿ ಇದ್ದಾರೆ.

ಈಗ ಬಂಧಿತರಾಗಿರುವ ನಾಲ್ವರು, ಐಪಿಎಸ್‌ ಅಧಿಕಾರಿ ಎಸ್‌.ಎಂ.ಎಚ್‌ ಮೀರ್ಜಾ ಸೇರಿ 13 ಆರೋಪಿಗಳ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT