ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಂತ್ರಣ: ರಾಜ್ಯಗಳಿಗೆ ಕೇಂದ್ರದ ತಂಡ

ಪ.ಬಂಗಾಳ, ರಾಜಸ್ಥಾನ, ಛತ್ತೀಸ್‌ಗಢ, ಕೇರಳಕ್ಕೂ ನೆರವು
Last Updated 16 ಅಕ್ಟೋಬರ್ 2020, 13:33 IST
ಅಕ್ಷರ ಗಾತ್ರ

ನವದೆಹಲಿ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್–19 ನಿಯಂತ್ರಣದ ನಿಟ್ಟಿನಲ್ಲಿ ಕರ್ನಾಟಕವೂ ಸೇರಿದಂತೆ ದೇಶದ ಐದು ರಾಜ್ಯಗಳಿಗೆ ಉನ್ನತ ಮಟ್ಟದ ತಜ್ಞರ ತಂಡವನ್ನು ಕಳುಹಿಸಲು ಕೇಂದ್ರ ಸರ್ಕಾರ ಶುಕ್ರವಾರ ನಿರ್ಧರಿಸಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕರ್ನಾಟಕದೊಂದಿಗೆ, ಕೇರಳ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳಗಳಿಗೂ ತಜ್ಞರ ತಂಡ ಕಳುಹಿಸಲಾಗುತ್ತಿದೆ.

ಜಂಟಿ ಕಾರ್ಯದರ್ಶಿ (ನೋಡಲ್ ಅಧಿಕಾರಿ), ಆರೋಗ್ಯ ತಜ್ಞ, ಚಿಕಿತ್ಸೆ ನಿರ್ವಹಣಾ ಶಿಷ್ಟಾಚಾರ ಪಾಲನೆ ವೈದ್ಯರು ಕೇಂದ್ರದ ಪ್ರತಿ ತಂಡದಲ್ಲಿ ಇರಲಿದ್ದಾರೆ. ಆಯಾ ರಾಜ್ಯಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಮಾಹಿತಿ ಪಡೆಯುವುದಲ್ಲದೆ, ಕೋವಿಡ್– 19 ನಿಯಂತ್ರಣಕ್ಕಾಗಿ ರಾಜ್ಯಗಳ ಪ್ರಯತ್ನಗಳನ್ನು ಬಲಪಡಿಸಲು ನೆರವಾಗಲಿದ್ದಾರೆ.

ಚಿಕಿತ್ಸಾ ನಿರ್ವಹಣೆಯ ಬಲಪಡಿಸುವಿಕೆ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಹಾಗೂ ರೋಗಿಗಳ ಪರೀಕ್ಷೆ ನಿಟ್ಟಿನಲ್ಲಿ ಪೂರಕವಾಗಿ ಕಾರ್ಯ ನಿರ್ವಹಿಸಲಿರುವ ಕೇಂದ್ರ ತಂಡದ ಸದಸ್ಯರು, ಸೋಂಕು ತಡೆಗೆ ಸಂಬಂಧಿಸಿದ ಸವಾಲುಗಳ ಪರಿಣಾಮಕಾರಿ ನಿರ್ವಹಣೆಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಶುಕ್ರವಾರ ಬೆಳಿಗ್ಗೆವರೆಗೆ ಕರ್ನಾಟಕದಲ್ಲಿ ಒಟ್ಟು 7,43,848 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಪ್ರತಿ ಒಂದು ದಶಲಕ್ಷ ಜನರಲ್ಲಿ 11,010 ಜನರಲ್ಲಿ ಸೋಂಕು ಕಂಡುಬಂದಿವೆ. ಈ ಪ್ರಮಾಣವು ದೇಶದಾದ್ಯಂತ ಕಂಡುಬಂದಿರುವ ಪ್ರಕರಣಗಳ ಶೇ 10.1ರಷ್ಟು. ಈಗಾಗಲೇ 6.20 ಲಕ್ಷ ಸೋಂಕಿತರು ಗುಣಮುಖರಾಗಿದ್ದು, 10,283 ಜನ ಸಾವಿಗೀಡಾಗಿದ್ದಾರೆ. 1,13,557 ಸಕ್ರಿಯ ಪ್ರಕರಣಗಳು ಇವೆ.

ಚೇತರಿಕೆ ಪ್ರಮಾಣ ಶೇ 83.35ರಷ್ಟಿದ್ದರೆ, ಸಾವಿನ ಪ್ರಮಾಣ ಶೇ 1.38ರಷ್ಟಿದೆ. ಪ್ರತಿ ಒಂದು ದಶಲಕ್ಷ ಜನರಲ್ಲಿ 95,674 ಜನರನ್ನು ಕೋವಿಡ್–19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಪಾಸಿಟಿವ್ ಪ್ರಮಾಣ ಶೇ 11.5ರಷ್ಟು. ಸಾವಿನ ಸಂಖ್ಯೆ 152 ಎಂದು ಕೇಂದ್ರ ಹೇಳಿದೆ.

**
ಇತರ ರಾಜ್ಯಗಳ ಪ್ರಕರಣಗಳ ವಿವರ

ಕೇರಳ: 3,17,929
ರಾಜಸ್ಥಾನ: 1,67,279
ಪಶ್ಚಿಮ ಬಂಗಾಳ: 3,09,417
ಛತ್ತೀಸ್‌ಗಢ: 1,53,515

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT