ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ: ವಿದೇಶಿಯರ ಭೇಟಿಗೆ ಅನುಮತಿ

Last Updated 22 ಅಕ್ಟೋಬರ್ 2020, 21:03 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿಯರು ಭಾರತಕ್ಕೆ ಭೇಟಿ ನೀಡಲು ಇದ್ದ ನಿರ್ಬಂಧಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗುರುವಾರ ಸಡಿಲಿಸಿದೆ. ಈ ಕ್ರಮವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಚಿವಾಲಯವು ತಿಳಿಸಿದೆ. ಆದರೆ, ಇ–ವೀಸಾ, ಪ್ರವಾಸಿ ವೀಸಾ ಮತ್ತು ಎಲೆಕ್ಟ್ರಾನಿಕ್-ಅಲ್ಪಾವಧಿ ವೈದ್ಯಕೀಯ ವೀಸಾ ಮೇಲಿನ ನಿರ್ಬಂಧ ಮುಂದುವರಿಯಲಿದೆ.

ಸಾಗರೋತ್ತರ ಭಾರತೀಯ ನಾಗರಿಕ (ಒಐಸಿ) ಮತ್ತು ಭಾರತೀಯ ಮೂಲದ ವ್ಯಕ್ತಿ (ಪಿಐಒ) ಕಾರ್ಡ್‌ ಹೊಂದಿರುವವರು ಮತ್ತು ವಿದೇಶಿಯರು ಭಾರತಕ್ಕೆ ಭೇಟಿ ನೀಡಬಹುದು. ಆದರೆ, ಪ್ರವಾಸಿಗರು ಮತ್ತು ಅಲ್ಪಾವಧಿ ವೈದ್ಯಕೀಯ ಉದ್ದೇಶದ ವೀಸಾ (60 ದಿನಗಳ ವೀಸಾ) ಇರುವವರು ಭಾರತಕ್ಕೆ ಭೇಟಿ ನೀಡಲು ಅನುಮತಿ ಇಲ್ಲ ಎಂದು ಸಚಿವಾಲಯವು ತಿಳಿಸಿದೆ.

‘ಉದ್ಯಮ, ಸಭೆ, ವಿಚಾರ ಸಂಕಿರಣ, ಅಧ್ಯಯನ, ವಿದ್ಯಾಭ್ಯಾಸ, ಸಂಶೋಧನೆ ಉದ್ದೇಶಗಳಿಗಾಗಿ ಭೇಟಿ ನೀಡಬೇಕಿರುವವರು ಭಾರತಕ್ಕೆ ಬರಬಹುದು. ವೀಸಾ ಚಾಲ್ತಿಯಲ್ಲಿ ಇರುವವರು ನೇರವಾಗಿ ಬರಬಹುದು. ವೀಸಾ ಅವಧಿ ಮುಗಿದಿರುವವರು ಸಂಬಂಧಿತ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ವೀಸಾ ಪಡೆಯಬಹುದು’ ಎಂದು ಸಚಿವಾಲಯವು ಮಾಹಿತಿ ನೀಡಿದೆ.

‘ಚಿಕಿತ್ಸೆಗಾಗಿ ಬರುವ ವಿದೇಶಿಯರಿಗೂ ವೀಸಾ ನೀಡಲಾಗುತ್ತದೆ. ಅಂತಹವರು ಸಂಬಂಧಿತ ಕಚೇರಿಯಲ್ಲಿ ವೀಸಾಕ್ಕೆ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ವೈದ್ಯಕೀಯ ವೀಸಾಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಚಿಕಿತ್ಸೆಗೆ ಬರುವವರ ಸಹಾಯಕರೂ ಅರ್ಜಿ ಸಲ್ಲಿಸಬಹುದು.ವಿದೇಶಿ ಪ್ರಯಾಣಿಕರು ವಾಣಿಜ್ಯ ವಿಮಾನ, ವಿಶೇಷ ವಿಮಾನಗಳಲ್ಲಿ ಭಾರತಕ್ಕೆ ಬರಬಹುದು. ಹಡಗುಗಳ ಮೂಲಕವೂ ಬರಬಹುದು. ದೇಶದ ಎಲ್ಲಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಂದರುಗಳ ಮೂಲಕ ಭಾರತವನ್ನು ಪ್ರವೇಶಿಸಬಹುದು’ ಎಂದು ಸಚಿವಾಲಯವು ತಿಳಿಸಿದೆ.

ಮಾರ್ಗಸೂಚಿ ಪಾಲಿಸಬೇಕು:ವಿದೇಶಗಳಿಂದ ಭಾರತಕ್ಕೆ ಬರುವವರು, ಭಾರತದಲ್ಲಿ ಜಾರಿಯಲ್ಲಿರುವ ಕೋವಿಡ್‌-19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕ್ವಾರಂಟೈನ್ ಮತ್ತು ತಪಾಸಣೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸಬೇಕು ಎಂದು ಸಚಿವಾಲಯವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT