ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಾಣಿ ಅಂಗಡಿ, ಇತರೆ ವ್ಯಾಪಾರಿಗಳ ಕೋವಿಡ್‌ ಪರೀಕ್ಷೆ ನಡೆಸಿ: ಆರೋಗ್ಯ ಸಚಿವಾಲಯ

Last Updated 8 ಆಗಸ್ಟ್ 2020, 10:12 IST
ಅಕ್ಷರ ಗಾತ್ರ

ನವದೆಹಲಿ: ‘ಕಿರಾಣಿ ಅಂಗಡಿಯವರು, ತರಕಾರಿ ಹಾಗೂ ಇತರೆ ವ್ಯಾಪಾರಿಗಳಿಂದ ಕೊರೊನಾ ಸೋಂಕು ಹರಡುವ ಅಪಾಯ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಇವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಈ ಸಂಬಂಧ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ರವಾನಿಸಿದ್ದಾರೆ.

‘ಕೋವಿಡ್‌ ಪೀಡಿತರ ಜೀವ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೋವಿಡ್‌ ಮರಣ ಪ್ರಮಾಣವು ಕಡಿಮೆ ಇದೆ. ಇದು ಶೇಕಡ ಒಂದರಷ್ಟು ದಾಟದಂತೆ ಎಲ್ಲರೂ ಜಾಗ್ರತೆ ವಹಿಸಬೇಕು. ಹೊಸ ಪ್ರದೇಶಗಳಿಗೆ ಸೋಂಕು ಹರಡದಂತೆ ತಡೆಯಬೇಕು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಆರಂಭಿಕ ಹಂತದಲ್ಲೇ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು. ಹಾಗಾದಾಗ ಮಾತ್ರ ಮರಣ ಪ್ರಮಾಣ ತಗ್ಗಲಿದೆ. ಒಬ್ಬರಿಗೆ ಕೋವಿಡ್‌ ದೃಢಪಟ್ಟ ತಕ್ಷಣವೇ ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು. 72 ಗಂಟೆಗಳೊಳಗೆ ಶೇಕಡ 80 ಮಂದಿಯನ್ನು ಪತ್ತೆ ಹಚ್ಚಿ ಅವರನ್ನು ಕ್ವಾರಂಟೈನ್‌ ಮಾಡಬೇಕು. ಆಮ್ಲಜನಕದ ವ್ಯವಸ್ಥೆಯನ್ನೊಳಗೊಂಡ ತ್ವರಿತ ಆಂಬುಲೆನ್ಸ್‌ ಸೇವೆ ಒದಗಿಸುವುದಕ್ಕೆ ಎಲ್ಲರೂ ಒತ್ತು ನೀಡಬೇಕು’ ಎಂದೂ ಅವರು ತಿಳಿಸಿದ್ದಾರೆ.

‘ಕೈಗಾರಿಕಾ ಪ್ರದೇಶಗಳು, ಕೊಳೆಗೇರಿಗಳು, ಕಾರಾಗೃಹ ಹಾಗೂ ವೃದ್ಧಾಶ್ರಮಗಳಲ್ಲಿ ಕೋವಿಡ್‌ ವೇಗವಾಗಿ ಹರಡುವ ಅಪಾಯವಿದೆ. ಹೀಗಾಗಿ ಇಲ್ಲಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕು.ಕಿರಾಣಿ ಅಂಗಡಿಯವರು, ತರಕಾರಿ ಹಾಗೂ ಇತರೆ ವ್ಯಾಪಾರಿಗಳಿಂದಲೂ ಸೋಂಕು ವೇಗವಾಗಿ ಪಸರಿಸುವ ಸಾಧ್ಯತೆ ಇದೆ. ಅವರನ್ನೂ ಪರೀಕ್ಷೆಗೆ ಒಳಪಡಿಸಬೇಕು’ ಎಂದು ವಿವರಿಸಿದ್ದಾರೆ.

‘ನಿಯಮಿತವಾಗಿ ಮನೆ ಮನೆ ಭೇಟಿ ನಡೆಸಬೇಕು. ಇದರಿಂದ ಕೋವಿಡ್‌ನಿಂದ ಹೆಚ್ಚು ತೊಂದರೆಗೊಳಗಾಗಬಹುದಾದ ವಯಸ್ಕರು ಹಾಗೂ ಗರ್ಭಿಣಿಯರನ್ನು ಪತ್ತೆಹಚ್ಚಬಹುದು. ಕಂಟೈನ್‌ಮೆಂಟ್‌ ಹಾಗೂ ಬಫರ್‌ ವಲಯಗಳನ್ನೂ ಬೇಗನೆ ಗುರುತಿಸಬೇಕು. ಇದರಿಂದ ಸೋಂಕು ಇತರ ಭಾಗಗಳಿಗೆ ಹರಡುವುದನ್ನು ತಡೆಯಬಹುದು’ ಎಂದೂ ಪತ್ರದಲ್ಲಿ ಹೇಳಿದ್ದಾರೆ.

‘ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಕುರಿತಾದ ಮಾಹಿತಿಯು ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ತುರ್ತು ಅಗತ್ಯವಿದ್ದವರಿಗೆ ಆಸ್ಪತ್ರೆಗಳಿಗೆ ದಾಖಲಾಗಲು ಅವಕಾಶ ಮಾಡಿಕೊಡಬೇಕು. ಈ ಕಾರ್ಯವು ಪಾರದರ್ಶಕವಾಗಿರಬೇಕು’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT