ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರವು ಯಾವುದೇ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಬಹುದು: ಕೋರ್ಟ್‌

Last Updated 8 ಡಿಸೆಂಬರ್ 2020, 15:23 IST
ಅಕ್ಷರ ಗಾತ್ರ

ನವದೆಹಲಿ: ಪ್ರದೇಶವೊಂದರ ಜನರ ಏಳಿಗೆಗಾಗಿ ಯಾವುದೇ ಭೂಮಿಯನ್ನು ಹೆದ್ದಾರಿಯೆಂದು ಅಥವಾ ಹೊಸ ಹೆದ್ದಾರಿ ನಿರ್ಮಾಣ ಮಾಡುವ ಭೂಮಿಯೆಂದು ಅಧಿಸೂಚನೆ ಹೊರಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶಿಸಿದೆ.

ಈ ಮೂಲಕ ಭಾರತ್‌ಮಾಲಾ ಯೋಜನೆಯಡಿ ₹10 ಸಾವಿರ ಕೋಟಿ ವೆಚ್ಚದಲ್ಲಿ ಚೆನ್ನೈ–ಕೃಷ್ಣಗಿರಿ–ಸೇಲಂ ನಡುವೆ ನಿರ್ಮಾಣವಾಗಲಿರುವ ಎಂಟು ಪಥಗಳ ಎಕ್ಸ್‌ಪ್ರೆಸ್‌ವೇಗೆ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್‌ವಿಲ್ಕರ್‌, ಬಿ.ಆರ್‌.ಗವಾಯಿ ಹಾಗೂ ಕೃಷ್ಣ ಮುರಾರಿ ಅವರಿದ್ದ ಪೀಠವು ಹಸಿರು ನಿಶಾನೆ ನೀಡಿದೆ.

‘ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು ‘ಯಾವುದೇ ಭೂಮಿ’ಯನ್ನು(ಪ್ರಸ್ತುತ ಇರುವ ರಸ್ತೆ/ಹೆದ್ದಾರಿಯ ಹೊರತಾಗಿಯೂ) ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲು ಪೂರ್ಣ ಪ್ರಮಾಣದಲ್ಲಿ ಅರ್ಹವಾಗಿದೆ’ ಎಂದು ಪೀಠ ಉಲ್ಲೇಖಿಸಿದೆ. ಜೊತೆಗೆ, ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ರದ್ದುಪಡಿಸಿದ್ದ ಮದ್ರಾಸ್‌ ಹೈಕೋರ್ಟ್‌ನ 2019ರ ಆದೇಶವನ್ನು ಪೀಠ ರದ್ದುಗೊಳಿಸಿದೆ.

ಮದ್ರಾಸ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ಸಂದರ್ಭದಲ್ಲಿ ‘ಹೆದ್ದಾರಿ ಹಾದು ಹೋಗುವ ಆ ಪ್ರದೇಶದ ಜನರ ಏಳಿಗೆಗಾಗಿ ಹಾಗೂ ಹೊಸ ಆರ್ಥಿಕ ಅವಕಾಶವನ್ನು ರೂಪಿಸುವುದಕ್ಕಾಗಿ ಮತ್ತು ದೇಶದ ಆರ್ಥಿಕತೆ ದೃಷ್ಟಿಯಿಂದ ಹೊಸ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ. ರಾಜ್ಯವೊಂದರಲ್ಲಿ ಇರುವ ಹೆದ್ದಾರಿಯು, ಸುಸ್ಥಿರ ಅಭಿವೃದ್ಧಿಗೆ ಪಥವಾಗುತ್ತದೆ. ಇದರಿಂದ ಜನರಿಗೂ ಅನುಕೂಲವಿದೆ’ ಎಂದು ಪೀಠ ಹೇಳಿದೆ.

ಇದೇ ವೇಳೆ, ‘1956ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಅನ್ವಯ, ಯೋಜನೆ ಪೂರ್ವ ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿಲ್ಲ. ಹೀಗಿದ್ದರೂ, ಭೂಸ್ವಾಧೀನ ಪ್ರಕ್ರಿಯೆಯ ಜೊತೆಜೊತೆಗೇ ಪರಿಸರ ಇಲಾಖೆಗೆ ನಿರಾಕ್ಷೇಪಣಾ ಅರ್ಜಿ ಸಲ್ಲಿಸಿ’ ಎಂದು ಪೀಠವು ಎನ್‌ಎಚ್‌ಎಐಗೆ ಸಲಹೆ ನೀಡಿದೆ.

ಚೆನ್ನೈ–ಸೇಲಂ ನಡುವೆ ಪ್ರಯಾಣಾವಧಿಯನ್ನು ಕಡಿತಗೊಳಿಸುವ ಉದ್ದೇಶದಿಂದ 277.30 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ 2018ರಲ್ಲಿ ಒಪ್ಪಿಗೆ ನೀಡಲಾಗಿತ್ತು. ಯೋಜನೆಯಿಂದ ಕೃಷಿ ಭೂಮಿ ನಷ್ಟವಾಗುತ್ತದೆ ಹಾಗೂ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರು, ರೈತರು ಹಾಗೂ ಸ್ಥಳೀಯ ನಿವಾಸಿಗಳು ವಿರೋಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT