ನವದೆಹಲಿ: ಅಗತ್ಯ ಇರುವ ನ್ಯಾಯಾಂಗ ಅಧಿಕಾರಿಗಳು ಮತ್ತು ತಾಂತ್ರಿಕ ಸದಸ್ಯರ ನೇಮಕಾತಿಯನ್ನು ಕೈಗೊಳ್ಳದೆ ನ್ಯಾಯಮಂಡಳಿಗಳನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ವಿಷಯದಲ್ಲಿ ಸರ್ಕಾರದ ಜತೆ ಸಂಘರ್ಷ ನಡೆಸಲು ನ್ಯಾಯಾಲಯ ಬಯಸುವುದಿಲ್ಲ. ಆದರೆ, ಅಪಾರ ಸಂಖ್ಯೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನೊಳಗೊಂಡ ವಿಶೇಷ ಪೀಠವು ನಿರ್ದೇಶನ ನೀಡಿದೆ.
ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ(ಎನ್‌ಸಿಎಲ್‌ಟಿ) ಸೇರಿದಂತೆ ಪ್ರಮುಖ ನ್ಯಾಯಮಂಡಳಿಗಳಲ್ಲಿ 250ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ.
‘ಈ ನ್ಯಾಯಾಲಯದ ತೀರ್ಪಿಗೆ ಗೌರವ ನೀಡಲು ಕೇಂದ್ರ ಸರ್ಕಾರ ಬಯಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ, ನ್ಯಾಯಮಂಡಳಿ ಸುಧಾರಣೆ ಕಾಯ್ದೆಗೆ ತಡೆ ನೀಡುವ ಆಯ್ಕೆ ನಮ್ಮದಾಗಲಿದೆ ಅಥವಾ ನ್ಯಾಯಮಂಡಳಿಗಳನ್ನು ಮುಚ್ಚುತ್ತೇವೆ ಅಥವಾ ನಾವೇ ನೇಮಿಸುತ್ತೇವೆ. ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದು ಪೀಠವು ಕಟುವಾಗಿ ಹೇಳಿದೆ.
‘ನ್ಯಾಯಾಂಗ ಅಧಿಕಾರಿಗಳು ಮತ್ತು ತಾಂತ್ರಿಕ ಸದಸ್ಯರು ಇಲ್ಲದೆಯೇ ನ್ಯಾಯಮಂಡಳಿಗಳು ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಪರಿಸ್ಥಿತಿ ಹೀಗಿರುವಾಗ ನಿಮ್ಮ ಪರ್ಯಾಯ ಯೋಜನೆಗಳು ಏನು’ ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದೆ.
ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಸರ್ಕಾರವೂ ಸಂಘರ್ಷವನ್ನು ಬಯಸುವುದಿಲ್ಲ’ ಎಂದು ವಿವರ ನೀಡಿದರು.
ನ್ಯಾಯಮಂಡಳಿಗಳಲ್ಲಿರುವ ಖಾಲಿ ಹುದ್ದೆಗಳು ಮತ್ತು ಹೊಸ ಕಾನೂನಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ ಮಂದೂಡಿದ ನ್ಯಾಯಾಲಯವು, ‘ಈ ಅವಧಿ ಒಳಗೆ ನೇಮಕಾತಿಗಳನ್ನು ಮಾಡುವ ಆಶಾಭಾವ ನಮಗಿದೆ’ ಎಂದು ಹೇಳಿದೆ.
ನ್ಯಾಯಮಂಡಳಿ ಸುಧಾರಣೆ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಹ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಕಾಯ್ದೆಗೆ ಇತ್ತೀಚೆಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅನುಮೋದನೆ ದೊರೆತಿತ್ತು. ರಾಷ್ಟ್ರಪತಿ ಅವರು ಆಗಸ್ಟ್ 13ರಂದು ಅಂಕಿತ ಹಾಕಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.