ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮತ್ತೊಂದು ಲಸಿಕೆಗೆ ಒಪ್ಪಿಗೆ

ಮೊಡೆರ್ನಾಗೆ ಅನುಮೋದನೆ: ಫೈಝರ್‌, ಜಾನ್ಸನ್‌ ಎಂಡ್‌ ಜಾನ್ಸನ್‌ ಸಂಸ್ಥೆ ಜೊತೆಗೂ ಚರ್ಚೆ
Last Updated 29 ಜೂನ್ 2021, 21:46 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ತಡೆ ಲಸಿಕೆಯ ತೀವ್ರ ಕೊರತೆಯ ನಡುವೆಯೇ ಮತ್ತೊಂದು ಲಸಿಕೆಭಾರತದಲ್ಲಿ ಬಳಕೆಗೆ ಲಭ್ಯವಾಗಲಿದೆ. ಕೋವಿಡ್‌-19 ವಿರುದ್ಧದ ಲಸಿಕೆ ‘ಮೊಡೆರ್ನಾ’ದ ತುರ್ತು ಬಳಕೆಗೆ ಕೇಂದ್ರ ಸರ್ಕಾರವು ಮಂಗಳವಾರ ಅನುಮತಿ ನೀಡಿದೆ. ಲಸಿಕೆ ಲಭ್ಯತೆಯನ್ನು ಹೆಚ್ಚಿಸುವುದಕ್ಕಾಗಿ, ಫೈಝರ್ ಮತ್ತು ಜಾನ್ಸನ್‌ ಎಂಡ್ ಜಾನ್ಸನ್‌ ಕಂಪನಿಗಳ ಜತೆಗೂ ಸರ್ಕಾರ ಮಾತುಕತೆ ನಡೆಸುತ್ತಿದೆ.

ಮೊಡೆರ್ನಾ ಲಸಿಕೆಯನ್ನು ಸಿಪ್ಲಾ ಕಂಪನಿಯು ಭಾರತಕ್ಕೆ ಆಮದು ಮಾಡಿಕೊಳ್ಳಲು ಭಾರತದ ಔಷಧ ನಿಯಂತ್ರಕರು ಒಪ್ಪಿಗೆ ಕೊಟ್ಟಿದ್ದಾರೆ. ಭಾರತದಲ್ಲಿಯೇ ತಯಾರಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ ಜತೆಗೆ ರಷ್ಯಾದ ಸ್ಪುಟ್ನಿಕ್‌–ವಿ ಈಗ ಲಭ್ಯ ಇವೆ. ಮೊಡೆರ್ನಾ ಈ ಸಾಲಿಗೆ ಸೇರ್ಪಡೆಯಾದ ನಾಲ್ಕನೆಯ ಲಸಿಕೆಯಾಗಿದೆ.

‘ಈ ಸೇರ್ಪಡೆಯೊಂದಿಗೆ ನಮ್ಮ ಲಸಿಕೆ ಬುಟ್ಟಿಯು ಇನ್ನಷ್ಟು ಸಮೃದ್ಧವಾಗಿದೆ’ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್‌ ಹೇಳಿದ್ಧಾರೆ.

ಮೊಡೆರ್ನಾ ಲಸಿಕೆಯ ಬಳಕೆಗೆ ಔಷಧ ನಿಯಂತ್ರಕರ ಅನುಮೋದನೆಯು ದೊರೆತಿದೆ. ಆದರೆ, ಆಮದು ಮಾಡಿಕೊಳ್ಳಲು ಅಗತ್ಯವಾದ ಇತರ ಪ್ರಕ್ರಿಯೆಗಳನ್ನು ಪೂರೈಸಬೇಕು ಎಂದು ಪಾಲ್‌ ತಿಳಿಸಿದ್ದಾರೆ.

ಕೋವ್ಯಾಕ್ಸ್‌ ಕಾರ್ಯಕ್ರಮದ ಭಾಗವಾಗಿ, ಮೊಡೆರ್ನಾ ಲಸಿಕೆಯ ನಿರ್ದಿಷ್ಟ ಸಂಖ್ಯೆಯ ಡೋಸ್‌ಗಳನ್ನು ಭಾರತಕ್ಕೆ ನೀಡಲು ಅಮೆರಿಕ ಸರ್ಕಾರ ನಿರ್ಧರಿಸಿದೆ.

ಹಾಗಾಗಿ, ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಕೊಡಬೇಕು ಎಂದು ಮೊಡೆರ್ನಾ ಸಂಸ್ಥೆಯು ಔಷಧ ನಿಯಂತ್ರಕರಿಗೆ ಅರ್ಜಿ ಸಲ್ಲಿಸಿತ್ತು.

ಅಮೆರಿಕ, ಬ್ರಿಟನ್‌, ಐರೋಪ್ಯ ಒಕ್ಕೂಟ ಅಥವಾ ಜಪಾನ್‌ ಈ ಯಾವುದಾದರೂ ಒಂದು ದೇಶದ ಅನುಮೋದನೆ ಪಡೆದಿರುವ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆಗೆ ಪರಿಗಣಿಸಬಹುದು ಎಂದು ಸರ್ಕಾರವು ನಿಯಮವನ್ನು ಇತ್ತೀಚೆಗೆ ಸಡಿಲಿಸಿದೆ.

– (ಮೈನಸ್‌) 25 ಡಿಗ್ರಿಯಿಂದ – (ಮೈನಸ್‌) 15 ಡಿಗ್ರಿ ಸೆಲ್ಸಿಯಸ್‌ ತಾಪದಲ್ಲಿ ಮೊಡೆರ್ನಾ ಲಸಿಕೆಯನ್ನು ಇರಿಸಬೇಕಾಗುತ್ತದೆ. ಈ ರೀತಿ ಇದನ್ನು ಏಳು ತಿಂಗಳವರೆಗೆ ಇರಿಸಬಹುದು. 30 ದಿನಗಳ ಒಳಗಿನ ಬಳಕೆಗಾದರೆ, ತೆರೆದಿಲ್ಲದ ಸೀಸೆಯನ್ನು 2–8 ಡಿಗ್ರಿ ಸೆಲ್ಸಿಯಸ್‌ ತಾಪದಲ್ಲಿ ಇರಿಸಬಹುದು.

ಶೇ 50ರಷ್ಟು ಹಿರಿಯ ನಾಗರಿಕರಿಗೆ ಇನ್ನೂ ಸಿಗದ ಲಸಿಕೆ
ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾಗಿ ಐದು ತಿಂಗಳೇ ಕಳೆದಿದ್ದರೂ ಈವರೆಗೆ ಹಿರಿಯ ನಾಗರಿಕರಲ್ಲಿ ಶೇ 50ಕ್ಕಿಂತ ಕಡಿಮೆ ಜನರಿಗೆ ಒಂದು ಡೋಸ್‌ ಲಸಿಕೆಯಷ್ಟೇ ಲಭ್ಯವಾಗಿದೆ. ಇದು, ಅವರಿಗೆ ಸೋಂಕಿನ ವಿರುದ್ಧ ಭಾಗಶಃ ರಕ್ಷಣೆಯನ್ನಷ್ಟೇ ನೀಡಬಲ್ಲದಾಗಿದೆ.

ದೇಶದಲ್ಲಿ 60 ವರ್ಷ ಮೀರಿದ ನಾಗರಿಕರ ಜನಸಂಖ್ಯೆ ಸುಮಾರು 13.8 ಕೋಟಿ. ಇವರಲ್ಲಿ ಶೇ 49ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ದೊರೆತಿದೆ. ಅಪಾಯಕ್ಕೆ ಒಳಗಾಗಬಹುದಾ ಸಾಧ್ಯತೆ ಹೆಚ್ಚಿರುವ ಈ ವರ್ಗದವರಿಗೆ ಲಸಿಕೆ ನೀಡುವ ಕಾರ್ಯ ಫೆಬ್ರುವರಿಯಲ್ಲಿ ಆರಂಭವಾಗಿತ್ತು.

‘ಸದ್ಯ, ಶೇ 49ರಷ್ಟು ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗಿದೆ. ಈ ವಯೋಮಾನದವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಿದ್ದು, ಹಿರಿಯ ನಾಗರಿಕರ ರಕ್ಷಣೆ ದೃಷ್ಟಿಯಿಂದ ಇದು ಕಡಿಮೆ ಸಾಧನೆಯಲ್ಲ’ ಎಂದು ನೀತಿ ಆಯೋಗದ ಸದಸ್ಯ, ಕೋವಿಡ್ ಕುರಿತು ಸರ್ಕಾರದ ಪ್ರಧಾನ ಸಲಹೆಗಾರರೂ ಆದ ವಿ.ಕೆ.ಪಾಲ್‌ ಬಣ್ಣಿಸಿದರು.

ಅಂತೆಯೇ 4‌5–59 ವರ್ಷದವರಲ್ಲಿ ಶೇ 42 ಜನರಿಗೆ, 18ರಿಂದ 44 ವರ್ಷದವರಲ್ಲಿ ಶೇ 15ರಷ್ಟು ಜನರಿಗೆ ಲಸಿಕೆಯ ಒಂದು ಡೋಸ್ ನೀಡಲಾಗಿದೆ. ಈ ವಯೋಮಾನದವರ ಜನಸಂಖ್ಯೆ ಕ್ರಮವಾಗಿ 20.9 ಕೋಟಿ ಮತ್ತು 59.7 ಕೋಟಿ ಇದೆ ಎಂದು ಪಾಲ್ ವಿವರಿಸಿದರು.

ಹಿರಿಯ ನಾಗರಿಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ಕೇಂದ್ರ ಸರ್ಕಾರವು ಕಳೆದ ತಿಂಗಳು ಮನೆಯ ಸಮೀಪದಲ್ಲಿಯೇ ಲಸಿಕೆ ಲಭ್ಯವಾಗುವಂತೆ ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲು ಅನುಮತಿ ನೀಡಿತ್ತು.

‘ನಿರ್ದಿಷ್ಟ ವಯೋಮಾನದವರನ್ನುಸೋಂಕು ಗುರುತಿಸಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಡೆಲ್ಟಾ ಪ್ಲಸ್‌ ರೂಪಾಂತರಿ ಸೋಂಕನ್ನೇ ಆಧರಿಸಿ ಹೇಳುವುದಾದರೆ ಲಸಿಕೆಯನ್ನೇ ಪಡೆಯದಿರುವ ಸಮೂಹದಿಂದ ಸೋಂಕು ಹಬ್ಬುವ ಆತಂಕ ಇದ್ದೇ ಇದೆ’ ಎಂದು ಜಾರ್ಜ್‌ ಇನ್‌ಸ್ಟಿಟ್ಯೂಟ್‌ ಫಾರ್ ಗ್ಲೋಬಲ್‌ ಹೆಲ್ತ್‌ನ ಆರೋಗ್ಯ ಸಂಶೋಧಕ ಓಮನ್‌ ಜಾನ್‌ ಪ್ರತಿಕ್ರಿಯಿಸಿದರು.

ಗರ್ಭಿಣಿಯರಿಗೆ ಲಸಿಕೆ ಮಾರ್ಗಸೂಚಿ
ಗರ್ಭಿಣಿಯರು ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳುವುದರ ಮಹತ್ವ ಮತ್ತು ಅವರ ಆಪ‍್ತಸಮಾಲೋಚನೆಗಾಗಿ ಮುಂಚೂಣಿ ಕಾರ್ಯಕರ್ತರು ಹಾಗೂ ಲಸಿಕೆ ಹಾಕುವವರಿಗೆ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ಪ್ರಕಟಿಸಿದೆ. ಆಪ್ತಸಮಾಲೋಚನೆ ಮತ್ತು ಜಾಗೃತಿಯಿಂದಾಗಿ ಗರ್ಭಿಣಿಯರು ಮಾಹಿತಿಯುಕ್ತ ನಿರ್ಧಾರ ಕೈಗೊಳ್ಳುವುದು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಕೊರೊನಾ ಸೋಂಕಿಗೆ ಒಳಗಾದ ಶೇ 90ಕ್ಕೂ ಹೆಚ್ಚು ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗದೆಯೇ ಗುಣಮುಖರಾಗಿದ್ದಾರೆ. ಕೆಲವು ಪ್ರಕರಣಗಳಲ್ಲಿ ಮಾತ್ರ ಆರೋಗ್ಯ ದಿಢೀರ್‌ ಹದಗೆಟ್ಟಿದೆ. ಭ್ರೂಣವನ್ನು ಕೂಡ ಬಾಧಿಸಿದ ಉದಾಹರಣೆ ಇದೆ. ಹಾಗಾಗಿ ಗರ್ಭಿಣಿಯರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT