ಎಎಪಿ ಸರ್ಕಾರದ ಬಹುದೊಡ್ಡ ಪಡಿತರ ಹಗರಣವನ್ನು ಕೇಂದ್ರ ತಡೆದಿದೆ: ಬಿಜೆಪಿ

ನವದೆಹಲಿ: ಸಬ್ಸಿಡಿಯುಕ್ತ ಆಹಾರ ಧಾನ್ಯಗಳನ್ನು ಬೇರೆಡೆ ಸಾಗಿಸುವ ಮೂಲಕ ದೆಹಲಿಯ ಎಎಪಿ ಸರ್ಕಾರವು ಮಾಡಬಹುದಾಗಿದ್ದ ಅತಿದೊಡ್ಡ ಹಗರಣವನ್ನು ಕೇಂದ್ರ ಸರ್ಕಾರ ತಡೆದಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.
ಮನೆ ಬಾಗಿಲಿಗೆ ಪಡಿತರ ವಿತರಣೆ ತಲುಪಿಸುವ ಯೋಜನೆಗೆ ಕೇಂದ್ರ ತಡೆಯೊಡ್ಡುತ್ತಿರುವುದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದರು. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.
ಓದಿ: ಪಿಜ್ಜಾ, ಬರ್ಗರ್ ನೀಡಬಹುದಾದರೆ ಪಡಿತರ ಯಾಕಾಗಬಾರದು? - ಕೇಜ್ರಿವಾಲ್ ಗರಂ
ನಿಗದಿತ ದರದಲ್ಲಿ ಆಹಾರಧಾನ್ಯಗಳನ್ನು ಖರೀದಿಸುವ ಮೂಲಕ ಮನೆ ಬಾಗಿಲಿಗೆ ಪಡಿತರದಂಥ ಯೋಜನೆಯನ್ನು ಹಮ್ಮಿಕೊಳ್ಳಲು ದೆಹಲಿ ಸರ್ಕಾರ ಮುಕ್ತವಾಗಿದೆ. ಆದರೆ, ಈ ಯೋಜನೆಗಾಗಿ ಆಹಾರ ಭದ್ರತಾ ಕಾಯ್ದೆಯಡಿ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಪಡಿತರ ಕಾರ್ಯಕ್ರಮವನ್ನು ಬದಲಾಯಿಸಲು ಅಥವಾ ನಿಲ್ಲಿಸಲು ಅದಕ್ಕೆ ಯಾವುದೇ ಹಕ್ಕಿಲ್ಲ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.
ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಆಧಾರ್ ದೃಢೀಕರಣ ಪ್ರಮಾಣ ಶೇ 80ರಷ್ಟಿದ್ದರೆ ದೆಹಲಿಯಲ್ಲಿ ಅದು ಶೂನ್ಯ ಆಗಿದೆ. ಬಯೋಮೆಟ್ರಿಕ್ ಪರಿಶೀಲನೆಗೆ ಅನುವು ಮಾಡಿಕೊಡುವ ಪಿಒಎಸ್ ಯಂತ್ರಗಳ ಕಾರ್ಯಾಚರಣೆಯನ್ನು ಕೇಜ್ರಿವಾಲ್ ಸರ್ಕಾರ ಇತ್ತೀಚೆಗೆ ಸ್ಥಗಿತಗೊಳಿಸಿದೆ. ಇದರಿಂದ ಆಹಾರ ಧಾನ್ಯಗಳನ್ನು ನಿರ್ಗತಿಕರಿಗೆ ತಲುಪಿಸಲಾಗಿದೆಯೇ ಅಥವಾ ಬೇರೆಡೆಗೆ ಸಾಗಿಸಲಾಗಿದೆಯೆ ಎಂಬುದನ್ನು ಕಂಡುಹಿಡಿಯಲು ಯಾವುದೇ ಮಾರ್ಗಗಳಿಲ್ಲ ಎಂದು ಹೇಳಿದ್ದಾರೆ.
ಓದಿ: ಮಲಯಾಳಂ ಮಾತಾಡಬಾರದೆಂಬ ಸುತ್ತೋಲೆ ರದ್ದು ಮಾಡಿದ ದೆಹಲಿ ಆಸ್ಪತ್ರೆ
‘ಅರವಿಂದ ಕೇಜ್ರಿವಾಲ್ ಯಾರಿಗೆ ಪಡಿತರ ನೀಡುತ್ತಿದ್ದಾರೆಂದು ನಮಗೆ ಗೊತ್ತಿಲ್ಲ. ಪಡಿತರವನ್ನು ಬೇರೆಡೆ ಸಾಗಿಸುವ ವ್ಯವಸ್ಥೆಯನ್ನು ಪ್ರಾರಂಭಿಸಲು ಅವರು ಬಯಸಿದ್ದರು. ಪಡಿತರವು ಫಲಾನುಭವಿಯನ್ನು ತಲುಪದಂತೆ ಮಾಡಲು ಮತ್ತು ಅದು ಯಾರಿಗೆ ಹೋಗುತ್ತದೆ ಎಂಬುದು ತಿಳಿಯದಂತೆ ಮಾಡಿ ದೊಡ್ಡ ಹಗರಣ ನಡೆಸಲು ಅವರು ಬಯಸಿದ್ದರು’ ಎಂದು ಪಾತ್ರಾ ಆರೋಪಿಸಿದ್ದಾರೆ.
ಅದೇ ಧಾನ್ಯಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಿರಬಹುದು ಎಂದೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಜನರ ಮನೆ ಬಾಗಿಲಿಗೆ ಪಡಿತರ ವಿತರಣೆ ತಲುಪಿಸುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಕೆ ತಡೆಯೊಡ್ಡುತ್ತಿದೆ ಎಂದು ಪ್ರಶ್ನಿಸಿದ್ದ ಕೇಜ್ರಿವಾಲ್, ದೇಶದ ಹಿತಾಸಕ್ತಿಯ ದೃಷ್ಟಿಕೋನದಲ್ಲಿ ಆದಷ್ಟು ಬೇಗನೇ ಯೋಜನೆ ಅನುಷ್ಠಾನಗೊಳಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.