ಬುಧವಾರ, ಏಪ್ರಿಲ್ 14, 2021
29 °C

ವಾಟ್ಸ್‌ಆ್ಯಪ್‌ ಹೊಸ ಗೋಪ್ಯತಾ ನೀತಿಗೆ ತಡೆ ನೀಡಿ: ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮೇ 15ರಿಂದ ಜಾರಿಗೆ ಬರಲಿರುವ ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್‌ನ ಹೊಸ ಗೌಪ್ಯತಾ ನೀತಿ ಹಾಗೂ ಸೇವಾನಿಯಮಗಳನ್ನು ತಡೆಯಬೇಕೆಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ಕೋರಿದೆ.

ಸಾಮಾಜಿಕ ಜಾಲತಾಣ ವೇದಿಕೆ ವಾಟ್ಸ್‌ಆ್ಯಪ್‌ನ ಹೊಸ ಗೌಪ್ಯತಾ ನೀತಿಯನ್ನು ಪ್ರಶ್ನಿಸಿ ಅರ್ಜಿದಾರರಾದ ಸೀಮಾ ಸಿಂಗ್, ಮೇಘನ್ ಹಾಗೂ ವಿಕ್ರಮ್ ಸಿಂಗ್ ಎಂಬುವರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತನ್ನ ಅಫಿಡವಿಟ್‌ನಲ್ಲಿ ಈ ಮಾಹಿತಿಯನ್ನು ನೀಡಿದೆ.

ವಾಟ್ಸ್‌ಆ್ಯಪ್‌ನ ಹೊಸ ಗೌಪ್ಯತಾ ನೀತಿಯು ಭಾರತೀಯ ದತ್ತಾಂಶ ಸಂರಕ್ಷಣೆ ಹಾಗೂ ಗೌಪ್ಯತಾ ಕಾನೂನುಗಳಲ್ಲಿನ ಬಿರುಕುಗಳನ್ನು ಸೂಚಿಸುತ್ತದೆ ಎಂದು ಅರ್ಜಿದಾರರರು ವಾದಿಸಿದ್ದಾರೆ.

ವಾಟ್ಸ್‌ಆ್ಯಪ್‌ನ ಹೊಸ ನೀತಿಯ ಪ್ರಕಾರ, ಬಳಕೆದಾರರು ಹೊಸ ನೀತಿಯನ್ನು ಒಪ್ಪಿಕೊಳ್ಳಬಹುದು ಇಲ್ಲವೇ ಆಪ್ಲಿಕೇಷನ್‌ನಿಂದ ನಿರ್ಗಮಿಸಬಹುದು. ಆದರೆ, ಬಳಕೆದಾರರು ತಮ್ಮ ಡೇಟಾವನ್ನು (ದತ್ತಾಂಶ) ಇತರ ಫೇಸ್‌ಬುಕ್ ಒಡೆತನ ಅಥವಾ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ನೊಂದಿಗೆ ಹಂಚಿಕೊಳ್ಳದಂತೆ ಇರಲು ಯಾವುದೇ ಆಯ್ಕೆಯ ಅವಕಾಶವನ್ನು ಹೊಂದಿರುವುದಿಲ್ಲ.

‘ಜನವರಿ 4ರಂದು ಪ್ರಕಟಿಸಿದ್ದ ಹೊಸ ಗೌಪ್ಯತಾ ನೀತಿಯನ್ನು ವಾಟ್ಸ್ಆ್ಯಪ್ ಭಾರತೀಯರಿಗೆ ಕಡ್ಡಾಯಗೊಳಿಸಿತ್ತು. ಹೊಸ ನಿಯಮ, ಷರತ್ತುಗಳಿಗೆ ಒಪ್ಪದಿದ್ದರೆ ಅವರಿಗೆ ಅಪ್ಲಿಕೇಷನ್ ಪ್ರವೇಶ ನಿರಾಕರಿಸಲಾಗುವುದು ಎಂದು ಹೇಳಿದೆ. ಆದರೆ, ಮತ್ತೊಂದೆಡೆ ಯುರೋಪಿಯನ್ ಬಳಕೆದಾರರಿಗೆ ಹೊಸ ನೀತಿಯಿಂದ ಹೊರಗುಳಿಯುವ ಆಯ್ಕೆಯನ್ನು ವಾಟ್ಸ್ ಆ್ಯಪ್ ನೀಡಿದೆ’ ಎಂದು ಅರ್ಜಿದಾರರು ವಾದಿಸಿದ್ದಾರೆ.

ಕೇಂದ್ರದ ಪರ ಅಫಿಡವಿಟ್ ಸಲ್ಲಿಸಿದ ವಕೀಲರಾದ ಕೀರ್ತಿಮನ್ ಸಿಂಗ್ ಅವರು, ‘ವಾಟ್ಸ್ಆ್ಯಪ್ ಕಂಪನಿಯು ತನ್ನ ವ್ಯವಹಾರದ ಅವಧಿಯಲ್ಲಿ ಸಂಗ್ರಹಿಸಿದ ಡೇಟಾದ ಸುರಕ್ಷತೆಗೆ ಸಂಬಂಧಿಸಿದಂತೆ ಹಲವಾರು ಕಟ್ಟುಪಾಡುಗಳನ್ನೂ ವಿಧಿಸುತ್ತದೆ. ಆದರೆ, ಹೊಸ ನೀತಿಯು 2011ರ ನಿಯಮಗಳನ್ನು ಉಲ್ಲಂಘಿಸುತ್ತದೆ. ದತ್ತಾಂಶ ಸಂರಕ್ಷಣೆ ಮತ್ತು ಗೌಪ್ಯತಾ ಕುರಿತು ಆಡಳಿತದ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಮೇಲೆ ವಹಿಸಿದೆ. 2019ರಲ್ಲಿ ಲೋಕಸಭೆಯಲ್ಲಿ ವೈಯಕ್ತಿಕ ದತ್ತಾಂಶ (ಡೇಟಾ) ಸಂರಕ್ಷಣಾ ಮಸೂದೆಯನ್ನು ಪರಿಚಯಿಸಲಾಗಿದೆ. ಈ ಮಸೂದೆ ಜಾರಿಯಾದ ನಂತರ ದತ್ತಾಂಶ ಸಂರಕ್ಷಣೆಯ ಬಗ್ಗೆ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ವಾಟ್ಯ್ಆ್ಯಪ್‌ನ ನಿಯಮಗಳು ಸುರಕ್ಷತೆ ಮತ್ತು ದತ್ತಾಂಶ ಸಂರಕ್ಷಣೆಯ ಸೂಕ್ತ ಮಾನದಂಡಗಳೊಂದಿಗೆ ಹೊಂದಾಣಿಕೆ ಆಗುವುದಿಲ್ಲ. ಅಲ್ಲದೇ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಅದರ ನಿಯಮಗಳ ಅಂಗೀಕಾರ ಇನ್ನೂ ಬಾಕಿ ಉಳಿದಿದೆ’ ಎಂದೂ ತಿಳಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿಗಳಾದ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಏಪ್ರಿಲ್ 20ಕ್ಕೆ ದಿನಾಂಕ ನಿಗದಿಪಡಿಸಿದರು.

ಹೊಸ ಗೌಪ್ಯತಾ ನೀತಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಫೆ. 3ರಂದು ಕೇಂದ್ರ ಸರ್ಕಾರ ಮತ್ತು ವಾಟ್ಸ್ ಆ್ಯಪ್‌ಗೆ ಉತ್ತರಿಸುವಂತೆ ಸೂಚಿಸಿ ನೋಟಿಸ್ ನೀಡಿತ್ತು.

ಹೊಸನೀತಿ ಜಾರಿ ಮುಂದೂಡಿದ್ದು ಏಕೆ?

ಖಾಸಗಿತನಕ್ಕೆ ಸಂಬಂಧಿಸಿದ ತನ್ನ ಹೊಸ ನಿಯಮವನ್ನು ಬಳಕೆದಾರರು ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ವಾಟ್ಸ್‌ಆ್ಯಪ್‌ ಗಮನಕ್ಕೆ ಬಂದಿತ್ತು. ಈ ಬಗ್ಗೆ ವಾಟ್ಸ್‌ಆ್ಯಪ್ ಜಾಹೀರಾತು ಮತ್ತು ತನ್ನ ಇನ್ ಆ್ಯಪ್ ಸ್ಟೇಟಸ್‌ಗಳಲ್ಲೂ ಪದೇಪದೇ ಸ್ಪಷ್ಟನೆ ನೀಡಿತ್ತು.

ಖಾಸಗಿತನಕ್ಕೆ ಧಕ್ಕೆ ಒದಗುವ ಕುರಿತು ಬಳಕೆದಾರರು, ಪ್ರಮುಖ ಉದ್ಯಮಿಗಳಿಂದ ತೀವ್ರ ಆಕ್ರೋಶ ಎದುರಾದ ಬೆನ್ನಲ್ಲೇ, ವಾಟ್ಸ್ ಆ್ಯಪ್ ಫೆ. 8ರಿಂದ ಜಾರಿಗೊಳಿಸಲು ಹೊರಡಿಸಿದ್ದ ತನ್ನ ಹೊಸ ನಿಯಮವನ್ನು ಮೇ 15ಕ್ಕೆ ಮುಂದೂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು