ಶುಕ್ರವಾರ, ಡಿಸೆಂಬರ್ 4, 2020
24 °C

ಕಾಳಿಯ ಸಂತೃಪ್ತಿ ಪಡಿಸುವ ಕಲ್ಲು ತೂರಾಟ ಉತ್ಸವ ಈ ಸಲ ರದ್ದಾಯಿತು: ಯಾಕೆ ಗೊತ್ತೇ?

ಎಎನ್‌ಐ‌ Updated:

ಅಕ್ಷರ ಗಾತ್ರ : | |

ಧಾಮಿ: ಹಿಮಾಚಲ ಪ್ರದೇಶದ ಧಾಮಿ ಎಂಬ ಗ್ರಾಮದಲ್ಲಿ ಕಾಳಿ ಮಾತೆಯನ್ನು ಸಂತೃಪ್ತಪಡಿಸಲೆಂದು ವಿವಿಧ ಗುಂಪುಗಳು ಪರಸ್ಪರ ಕಲ್ಲು ತೂರಿಕೊಳ್ಳುವ ಶತಮಾನಗಳಷ್ಟು ಹಳೆಯ ಸಂಪ್ರದಾಯಕ್ಕೆ ಈ ವರ್ಷ ಕೋವಿಡ್‌ ಕಾರಣದಿಂದಾಗಿ ತಡೆ ಬಿದ್ದಿದೆ.

ರಾಜ್ಯ ರಾಜಧಾನಿ ಶಿಮ್ಲಾದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಧಾಮಿ ಗ್ರಾಮದ ಜನರು ಈ ಬಾರಿ ಕಲ್ಲು ತೂರಾಟ ಮೇಳ ರದ್ದಾದ ಹಿನ್ನೆಲೆಯಲ್ಲಿ, ದೇವಾಲಯಕ್ಕೆ ಮೆರವಣಿಗೆಯನ್ನು ಮಾತ್ರ ನಡೆಸಿದ್ದಾರೆ.

ಗ್ರಾಮದ ಜತೋತಿ, ತುನ್ರು, ದಗೋಯ್‌ ಮತ್ತು ಕರೆದು ಎಂಬ ನಾಲ್ಕು ಕುಲಗಳು ಒಂದು ಕಡೆ, ಅದೇ ಗ್ರಾಮದ ಜಮೋಗಿ ಎಂಬ ಕುಟುಂಬ ಒಂದು ಕಡೆ ನಿಂತು ಪರಸ್ಪರ ಕಲ್ಲು ತೂರಾಟ ನಡೆಸಿಕೊಳ್ಳುತ್ತವೆ. ಇದು ಪ್ರತಿ ವರ್ಷದ ದೀಪಾವಳಿಯಂದು ಪರಂಪರಾನುಗತವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯ.

ಹೀಗೆ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಿಕೊಳ್ಳುವ ವೇಳೆ ಯಾರಾದರೂ ಗಾಯಗೊಂಡು ರಕ್ತ ಬಂದರೆ, ಅದನ್ನು ಕಾಳಿಗೆ ಅರ್ಪಿಸಲಾಗುತ್ತದೆ. ಈ ವರ್ಷ ಕೋವಿಡ್‌ ಕಾರಣದಿಂದ ಕಲ್ಲು ತೂರಾಟ ನಡೆಯುತ್ತಿಲ್ಲ. ಹೀಗಾಗಿ ಬೆರಳನ್ನು ಕತ್ತರಿಸಿಕೊಳ್ಳುವ ಮೂಲಕ ರಕ್ತ ಸಮರ್ಪಣೆ ಮಾಡಲಾಗುತ್ತಿದೆ.

ಕೋವಿಡ್‌ ನಿಯಮಾವಳಿಗಳಿಗೆ ಅನುಗುಣವಾಗಿ ಈ ಬಾರಿ ಆಚರಣೆ ನಡೆಸಬೇಕು ಎಂದು ನಮಗೆ ಅಧಿಕಾರಿಗಳು ಸೂಚಿಸಿದ್ದಾರೆ. ಅದನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಗುಂಪು ಸೇರುತ್ತಿಲ್ಲ. ಹೀಗಾಗಿ ಈ ಬಾರಿ ಕಲ್ಲು ತೂರಾಟದ ಆಚರಣೆ ಕೈಬಿಡಲಾಗಿದೆ. ಭಕ್ತರು ತಮ್ಮ ಬೆರಳನ್ನು ಕೊಯ್ದು ದೇವಿಗೆ ರಕ್ತ ಅರ್ಪಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯ ರಾಜಮನೆತನದ ಜಗದೀಪ್‌ ಸಿಂಗ್‌ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿದ್ದ ನರಬಲಿಯನ್ನು ತಪ್ಪಿಸಲು ಈ ಹಿಂದಿನ ರಾಣಿ ಧಾಮಿ ಎಂಬುವವರು ತಾವೇ ಬಲಿಯಾಗಿದ್ದರು ಎನ್ನಲಾಗಿದೆ. ನರಬಲಿಗೆ ಬದಲಾಗಿದೆ, ಕಲ್ಲು ತೂರುವ ಉತ್ಸವ ನಡೆಸಿ, ಅದರಲ್ಲಿ ಗಾಯಗೊಂಡವರ ರಕ್ತವನ್ನು ದೇವಿಗೆ ಸಮರ್ಪಿಸಬೇಕು ಎಂಬುದು ರಾಣಿ ಧಾಮಿಯ ಕೋರಿಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಈ ಉತ್ಸವ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು