ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ಗೆ ಚರಣ್‌ಜೀತ್ ಸಿಂಗ್ ಚನ್ನಿ ಹೊಸ ಮುಖ್ಯಮಂತ್ರಿ

Last Updated 19 ಸೆಪ್ಟೆಂಬರ್ 2021, 18:47 IST
ಅಕ್ಷರ ಗಾತ್ರ

ಚಂಡೀಗಡ: ಚರಣ್‌ಜೀತ್ ಸಿಂಗ್ ಚನ್ನಿ ಅವರು ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಚರಣ್‌ಜೀತ್ ಸಿಂಗ್ ಚನ್ನಿ ಅವರು ಪಂಜಾಬ್ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲು ಹರ್ಷಪಡುತ್ತೇನೆ ಎಂದು ಪಕ್ಷದ ನಾಯಕ ಹರೀಶ್ ರಾವತ್ ಟ್ವೀಟ್ ಮಾಡಿದ್ದಾರೆ.

ಶಾಸಕಾಂಗ ಪಕ್ಷಕ್ಕೆ ಚನ್ನಿ ಆಯ್ಕೆಯೊಂದಿಗೆ ಯಾರೂ ಊಹಿಸದಂತಹ ಅಚ್ಚರಿಯ ನಾಯಕತ್ವಕ್ಕೆ ಪಂಜಾಬ್‌ ಕಾಂಗ್ರೆಸ್‌ ತೆರೆದುಕೊಂಡಿದೆ. ಇದುವರೆಗೆ ಸುಖ್‌ಜಿಂದರ್‌ ಸಿಂಗ್‌ ರಂಧಾವಾ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿತ್ತು. ನೂತನ ಸಿಎಂ ಆಯ್ಕೆ ವಿಚಾರವಾಗಿ ಭಾನುವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಸಭೆಗೂ ಮುನ್ನ ಹೆಚ್ಚಿನ ಶಾಸಕರು ರಂಧಾವಾ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

ದಲಿತ ಮುಖಂಡನಾಗಿ ಗುರುತಿಸಿಕೊಂಡಿರುವ ಚನ್ನಿ ಅವರನ್ನು ಪಂಜಾಬ್‌ ನೂತನ ಸಿಎಂ ಆಗಿ ಘೋಷಣೆ ಮಾಡಿದ ನಂತರ ಪ್ರತಿಕ್ರಿಯಿಸಿದ ರಂಧಾವಾ, 'ಹೈಕಮಾಂಡ್‌ ನಿರ್ಧಾರ ಸಂತೋಷವನ್ನು ನೀಡಿದೆ. ನನ್ನನ್ನು ಬೆಂಬಲಿಸಿದ ಎಲ್ಲ ಶಾಸಕರಿಗೆ ಧನ್ಯವಾದ. ಚನ್ನಿ ನನಗೆ ಸಹೋದರ' ಎಂದು ತಿಳಿಸಿದ್ದಾರೆ.

ಅಮರಿಂದರ್‌ ಸಿಂಗ್‌ ಮತ್ತು ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ನಡುವಣ ತಿಂಗಳುಗಳ ಕಾಲ ನಡೆದ ಭಿನ್ನಾಭಿಪ್ರಾಯದ ಫಲಿತಾಂಶವಾಗಿ ಪಂಜಾಬ್‌ಗೆ ಹೊಸ ಮುಖ್ಯಮಂತ್ರಿಯ ಪರಿಚಯವಾಗಿದೆ.

ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆಕ್ಯಾಪ್ಟನ್‌ ಅಮರಿಂದರ್ ಸಿಂಗ್ ಶನಿವಾರ ರಾಜೀನಾಮೆ ನೀಡಿದ್ದರು.ಬಳಿಕ ಪಂಜಾಬ್‌ನಲ್ಲಿ ರಾಜಕೀಯ ಬೆಳವಣಿಗೆ ಕುತೂಹಲ ಮೂಡಿಸಿತ್ತು.ನವಜೋತ್‌ ಸಿಂಗ್‌ ಸಿಧು ಅವರ ಹೆಸರೂ ಮುಂದಿನ ಸಿಎಂ ಪಟ್ಟಿಯಲ್ಲಿತ್ತು.

ದಲಿತರ ಓಲೈಕೆ?
ಪಂಜಾಬ್‌ನ ಜನಸಂಖ್ಯೆಯಲ್ಲಿ ಶೇ 32ರಷ್ಟು ದಲಿತರಿದ್ದಾರೆ. ಹಾಗಾಗಿ, ಚನ್ನಿ ಅವರಆಯ್ಕೆಯು ಚುನಾವಣೆಯ ದೃಷ್ಟಿಯಿಂದ ಮಹತ್ವದ ನಿರ್ಧಾರವಾಗಿದೆ. ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದರೆ ದಲಿತ ಸಮುದಾಯದವರನ್ನೇ ಮುಖ್ಯಮಂತ್ರಿ ಮಾಡಲಾಗುವುದು ಎಂದು ಬಿಜೆಪಿ ಈಗಾಗಲೇ ಪ್ರಕಟಿಸಿದೆ. ವಿರೋಧ ಪಕ್ಷ ಶಿರೋಮಣಿ ಅಕಾಲಿ ದಳವು ಬಿಎಸ್‌ಪಿ ಜತೆಗೆ ಮೈತ್ರಿ ಮಾಡಿಕೊಂಡಿದೆ. ಜತೆಗೆ, ದಲಿತ ಸಮುದಾಯದವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT