ಮಳೆಗೆ ನಲುಗಿದ ತಮಿಳುನಾಡು, ಪುದುಚೇರಿ: ಚೆನ್ನೈನಲ್ಲಿ ದಾಖಲೆಯ ಮಳೆ

ಚೆನ್ನೈ (ಪಿಟಿಐ): ತಮಿಳುನಾಡಿನಲ್ಲಿ ಸೋಮವಾರವೂ ಮಳೆ ಮುಂದುವರಿದಿದೆ. ರಾಜಧಾನಿ ಚೆನ್ನೈ ವಲಯ ಹಾಗೂ ರಾಜ್ಯದ ಉತ್ತರ ಭಾಗದ ಜಿಲ್ಲೆಗಳಾದ ಚೆಂಗಲ್‌ಪೇಟ್, ಕಾಂಚಿಪುರಂ, ತಿರುವಳ್ಳೂರು ಮತ್ತು ವೆಲ್ಲೂರಿನಲ್ಲಿ ಮುಂಜಾನೆಯಿಂದ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.
ಈ ವರ್ಷ ಮುಗಿಯುವುದಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ ಚೆನ್ನೈನಲ್ಲಿ ವರ್ಷದ ಸರಾಸರಿ 140 ಸೆ.ಮೀ ಮಳೆ ಆಗಿದೆ. ನವೆಂಬರ್ 6ರಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರ ಸ್ತಬ್ಧವಾಗಿದೆ. ಮೊದಲ 8 ದಿನಗಳಲ್ಲೇ ತಿಂಗಳ ಸರಾಸರಿ ಮಳೆ ಕೂಡ ಆಗಿದೆ. ಚೆನ್ನೈನ ನವೆಂಬರ್ ತಿಂಗಳ ಸರಾಸರಿ ಮಳೆ 37.4 ಸೆ.ಮೀ ಆಗಿದ್ದು, ನ.1ರಿಂದ 8ರವರೆಗೆ 41.5 ಸೆ.ಮೀ ,ಳೆಯಾಗಿದೆ.
ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ, 24 ಗಂಟೆಗಳಲ್ಲಿ ಚೆನ್ನೈ ಉಪನಗರ ವ್ಯಾಪ್ತಿಯಲ್ಲಿ 14 ಸೆಂ.ಮೀಟರ್‌ವರೆಗೆ ಮಳೆ ಸುರಿದಿದೆ. ಉಳಿದ ಜಿಲ್ಲೆಗಳಲ್ಲಿ 1 ಸೆಂ.ಮೀಟರ್‌ವರೆಗೂ ಮಳೆಯಾಗಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭೇಟಿ ನೀಡಿ ಪರಿಶೀಲಿಸಿದರು.
ಚೆನ್ನೈನ ಬಹುತೇಕ ರಸ್ತೆಗಳು, ಅಂಡರ್‌ಪಾಸ್‌ಗಳು ಜಲಾವೃತಗೊಂಡಿವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಜಲಾವೃತ ಆಡಂಬಾಕಂ ಪೊಲೀಸ್ ಠಾಣೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಪರಿಹಾರ ಕಾರ್ಯಾಚರಣೆಗೆ ಚೆನ್ನೈ ಪಾಲಿಕೆಯು ಸುಮಾರು 23 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿದೆ. ಮಳೆಯಿಂದ ಸಂತ್ರಸ್ತರಾಗಿರುವ 2 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 3.36 ಲಕ್ಷ ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ. ಸೋಮವಾರ ಬೆಳಗಿನವರೆಗಿನ ಮಾಹಿತಿ ಪ್ರಕಾರ, ಜಲಾವೃತ ಪ್ರದೇಶಗಳ 889 ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.
ಚೆನ್ನೈನ 15 ವಲಯಗಳ ಮೇಲುಸ್ತುವಾರಿಗೆ 15 ಐಎಎಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ನಿಯೋಜಿಸಿದ್ದಾರೆ. 200 ವಿಶೇಷ ವೈದ್ಯಕೀಯ ಶಿಬಿರಗಳನ್ನು ತೆರೆಯಲಾಗಿದೆ. ತಗ್ಗು ಪ್ರದೇಶಗಳನ್ನು ಆವರಿಸಿರುವ ಕೆಸರು ಹಾಗೂ ಕಸವನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಭಾನುವಾರ ಮಳೆಯಿಂದ ತೊಂದರೆಗೆ ಈಡಾಗಿದ್ದ ನಗರ ರೈಲು ಸೇವೆಯನ್ನು ಮತ್ತೆ ಸರಿದಾರಿಗೆ ತರಲು ಯತ್ನಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ಟ್ವೀಟ್ ಮಾಡಿದೆ. ಅಂತರರಾಜ್ಯ ಬಸ್ ಸೇವೆ ವ್ಯತ್ಯಯಗೊಡಿದೆ. ಮಳೆಯಿಂದಾಗಿ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ₹30ಕ್ಕೆ ಸಿಗುತ್ತಿದ್ದ ಟೊಮೆಟೋ ₹100ಕ್ಕೆ ಮಾರಾಟವಾಗುತ್ತಿದೆ.
ಪುದುಚೇರಿ ಅಸ್ತವ್ಯಸ್ತ: ಸೋಮವಾರ ವ್ಯಾಪಕ ಮಳೆ ಸುರಿದ ಕಾರಣ ಪುದುಚೇರಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಂಗಳವಾರವೂ ರಜೆ ಪ್ರಕಟಿಸಲಾಗಿದೆ. ಪುದುಚೇರಿಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳಲ್ಲಿ 6.1 ಸೆಂ. ಮೀಟರ್ ಮಳೆ ಸುರಿದಿದೆ. ಪುದುಚೇರಿಯ ಎರಡು ಪ್ರಮುಖ ಜಲಮೂಲಗಳಾದ ಬಹೂರ್ ಮತ್ತು ಔಸುಡು ಜಲಾಶಯಗಳಲ್ಲಿ ನೀರಿನ ಮಟ್ಟ ಪೂರ್ಣಮಟ್ಟ ತಲುಪಿದೆ. ಶಂಕರಬರಣಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.\\
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.