ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಸಿಕೆ ಪಡೆದರೂ ಭಾರತೀಯರಿಗೆ ವೀಸಾ ನಿರಾಕರಿಸುತ್ತಿರುವ ಚೀನಾ’

Last Updated 10 ಜೂನ್ 2021, 19:16 IST
ಅಕ್ಷರ ಗಾತ್ರ

ನವದೆಹಲಿ: ಕಮ್ಯುನಿಸ್ಟ್ ದೇಶದಲ್ಲಿ ತಯಾರಿಸಿದ ಕೋವಿಡ್ -19 ಲಸಿಕೆಗಳನ್ನು ಮೂರನೇ ದೇಶದಲ್ಲಿ ಪಡೆದುಕೊಂಡ ನಂತರವೂ ತನ್ನ ನಾಗರಿಕರಿಗೆ ಚೀನಾಕ್ಕೆ ಪ್ರಯಾಣಿಸಲು ಅವಕಾಶ ನೀಡುತ್ತಿಲ್ಲ ಎಂದು ಭಾರತ ಗುರುವಾರ ಆರೋಪಿಸಿದೆ.

ಭಾರತದ ನಾಗರಿಕರಿಗೆ ಚೀನಾಕ್ಕೆ ಭೇಟಿ ನೀಡಲು ಅವಕಾಶ ನೀಡುವುದನ್ನು ಪುನರಾರಂಭಿಸುವಂತೆ ಭಾರತ ಸರ್ಕಾರ, ಚೀನಾಕ್ಕೆ ಕೇಳಿಕೊಂಡಿದೆ. ಉಭಯ ರಾಷ್ಟ್ರಗಳ ನಡುವೆ ನೇರ ವಿಮಾನ ಸಂಪರ್ಕದ ಕೊರತೆಯ ನಡುವೆಯೂ ಚೀನಾದ ನಾಗರಿಕರಿಗೆ ಭಾರತಕ್ಕೆ ಪ್ರಯಾಣಿಸಲು ಇನ್ನೂ ಅವಕಾಶ ನೀಡಲಾಗುತ್ತಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಚೀನಾಕ್ಕೆ ನೆನಪಿಸಿದ್ದಾರೆ.

ಸುಮಾರು 300 ಭಾರತೀಯ ನಾಗರಿಕರು ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಸರ್ಕಾರಕ್ಕೆ ಪತ್ರ ಬರೆದು, ಚೀನಾದಲ್ಲಿ ತಮ್ಮ ಅಧ್ಯಯನ ಅಥವಾ ಕೆಲಸದ ಸ್ಥಳಗಳಿಗೆ ಮರಳಲು ಅವಕಾಶ ನೀಡುವಂತೆ ಕೋರಿದ್ದಾರೆ. ಅವರಲ್ಲಿ ಹಲವರು ಯುನೈಟೆಡ್ ಅರಬ್ ಎಮಿರೇಟ್ಸ್, ಮಲೇಷ್ಯಾ, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಇತರ ದೇಶಗಳಿಗೆ ಪ್ರಯಾಣಿಸಿ, ಕಮ್ಯುನಿಸ್ಟ್ ದೇಶಕ್ಕೆ ಮರಳಲು ಅರ್ಹತೆ ಪಡೆಯಲು ಕಳೆದ ಕೆಲವು ವಾರಗಳಲ್ಲಿ ಚೀನಾ ತಯಾರಿಕೆಯ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ. ಆದಾಗ್ಯೂ, ಬೀಜಿಂಗ್ ಅವರಿಗೆ ವೀಸಾಗಳನ್ನು ನಿರಾಕರಿಸುತ್ತಲೇ ಇತ್ತು. ಈ ವಿಷಯದ ಬಗ್ಗೆ ಚರ್ಚಿಸಿ, ಪರಸ್ಪರ ಸಂಬಂಧ ಸುಧಾರಿಸಲು ನವದೆಹಲಿಯಿಂದ ಬೀಜಿಂಗ್‌ಗೆ ವಿದೇಶಾಂಗ ಸಚಿವಾಲಯದ ವಕ್ತಾರರು ಕರೆ ಮಾಡಿದ್ದಾರೆ.

ನವೆಂಬರ್ 2020ರಿಂದ ಭಾರತದ ನಾಗರಿಕರು ಚೀನಾಕ್ಕೆ ಪ್ರಯಾಣಿಸಲು ಸಾಧ್ಯವಾಗಿಲ್ಲ. ಕೆಲವು ದೇಶಗಳಲ್ಲಿ ಕೋವಿಡ್‌ 19 ಸೋಂಕು ಮರುಕಳಿಸಿದ್ದನ್ನು ಉಲ್ಲೇಖಿಸಿ, ಬೀಜಿಂಗ್ ಈ ವರ್ಷ ಮಾರ್ಚ್ 15ರಂದು ಭಾರತದ ನಾಗರಿಕರು ಮತ್ತು ಇತರ 19 ರಾಷ್ಟ್ರಗಳ ಪ್ರಜೆಗಳು ಕಮ್ಯುನಿಸ್ಟ್ ದೇಶಕ್ಕೆ ಪ್ರಯಾಣಿಸಲು ವೀಸಾಗಳನ್ನು ಪಡೆಯಬೇಕೆಂದರೆ ಚೀನಾ ತಯಾರಿಸಿದ ಲಸಿಕೆಗಳನ್ನು ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.

ಚೀನಾ ತಯಾರಿಕೆಯ ಕೋವಿಡ್ -19 ಲಸಿಕೆ ಭಾರತದಲ್ಲಿ ನೀಡಲು ಅನುಮೋದಿಸಿಲ್ಲ. ಆದ್ದರಿಂದ ಭಾರತೀಯ ನಾಗರಿಕರು ತಮ್ಮ ಅಧ್ಯಯನ ಅಥವಾ ಕೆಲಸದ ಸ್ಥಳಕ್ಕೆ ಮರಳಲು ಚೀನಾ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಗ್ರೂಪ್ ಕಾರ್ಪೊರೇಷನ್ (ಎ.ಕೆ.ಎ. ಸಿನೊಫಾರ್ಮ್) ಮತ್ತು ಸಿನೋವಾಕ್ ಬಯೋಟೆಕ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ ಲಸಿಕೆ ಪಡೆಯಲು ಬೇರೆ ದೇಶಗಳಿಗೆ ಹೋಗಿ, ಅಲ್ಲಿ ಲಸಿಕೆ ಪಡೆದು, ವೀಸಾಗಳನ್ನು ಪಡೆಯುವ ಅವಶ್ಯಕತೆ ಪೂರೈಸಿದ್ದಾರೆ. ಆದರೆ ನವದೆಹಲಿಯ ಚೀನಾದ ರಾಯಭಾರ ಕಚೇರಿ ಮತ್ತು ಮುಂಬೈ ಹಾಗೂ ಕೋಲ್ಕತ್ತದಲ್ಲಿರುವ ಕಾನ್ಸುಲೇಟ್‌ಗಳಿಂದ ಭಾರತೀಯರಿಗೆ ಇನ್ನೂ ವೀಸಾ ಸಿಕ್ಕಿಲ್ಲ.

‘ಹಲವು ಭಾರತೀಯ ಪ್ರಜೆಗಳು ಚೀನಾ ಕಡ್ಡಾಯಗೊಳಿಸಿರುವ ಲಸಿಕೆಗಳನ್ನು ಹಾಕಿಸಿಕೊಂಡು ಚೀನಾದ ವೀಸಾಗಳಿಗೆ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ. ಆದರೆ ಇನ್ನೂ ಅವರಿಗೆ ವೀಸಾ ಸಿಕ್ಕಿಲ್ಲ. ಚೀನಾ ನಿಗದಿಪಡಿಸಿದ ಕಡ್ಡಾಯ ನಿಯಮಗಳನ್ನು ಪೂರೈಸಿರುವ ಭಾರತೀಯ ನಾಗರಿಕರಿಗೆ ಚೀನಾ ರಾಯಭಾರ ಕಚೇರಿಯು ಶೀಘ್ರದಲ್ಲೇ ವೀಸಾ ನೀಡಲಿದೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT