ಭಾರತ್ ಬಯೋಟೆಕ್, ಸೀರಂ ಹ್ಯಾಕ್ ಮಾಡಲು ಚೀನಾ ಹ್ಯಾಕರ್‌ಗಳ ಯತ್ನ: ವರದಿ

ನವದೆಹಲಿ: ದೇಶದ ಕೋವಿಡ್–19 ಲಸಿಕೆ ತಯಾರಕ ಸಂಸ್ಥೆಗಳಾದ ಭಾರತ್ ಬಯೋಟೆಕ್ ಮತ್ತು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಹ್ಯಾಕ್ ಮಾಡಲು ಚೀನಾದ ಸರ್ಕಾರಿ ಬೆಂಬಲಿತ ಹ್ಯಾಕರ್‌ಗಳ ತಂಡ ಯತ್ನಿಸಿದೆ ಎಂದು ಸೈಬರ್ ಗುಪ್ತಚರ ಸಂಸ್ಥೆ ‘ಸೈಫರ್ಮಾ’ ತಿಳಿಸಿದೆ.
ಭಾರತ ಹಾಗೂ ಚೀನಾ ಎರಡೂ ದೇಶಗಳು ಕೋವಿಡ್ ಲಸಿಕೆಗಳನ್ನು ಇತರ ರಾಷ್ಟ್ರಗಳಿಗೆ ಮಾರಾಟ ಹಾಗೂ ಕೊಡುಗೆಯಾಗಿ ನೀಡುತ್ತಿವೆ. ವಿಶ್ವದಾದ್ಯಂತ ಮಾರಾಟವಾಗುತ್ತಿರುವ ಎಲ್ಲ ಲಸಿಕೆಗಳಲ್ಲಿ ಶೇ 60ಕ್ಕಿಂತಲೂ ಹೆಚ್ಚು ಭಾರತದ ಪಾಲಿದೆ.
ನೋಡಿ: ದೇಶೀಯ ಕೋವಿಡ್ ಲಸಿಕೆ 'ಕೊವ್ಯಾಕ್ಸಿನ್' ಹಾಕಿಸಿಕೊಂಡ ಪ್ರಧಾನಿ ಮೋದಿ
ಚೀನಾದ ‘ಎಪಿಟಿ10’ ಎಂಬ ಹ್ಯಾಕರ್‌ಗಳ ತಂಡ ಹ್ಯಾಕ್ ಮಾಡಲು ಯತ್ನಿಸಿದೆ. ಭಾರತ್ ಬಯೋಟೆಕ್ ಮತ್ತು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಐಟಿ ಮೂಲಸೌಕರ್ಯ, ಪೂರೈಕೆ ಸರಪಳಿ ಮಾಹಿತಿ ಕದಿಯಲು ಯತ್ನಿಸಿದ್ದು, ಕೆಲವು ಅಂಶಗಳನ್ನು ತಿಳಿದುಕೊಂಡಿದೆ ಎಂದು ಸಿಂಗಾಪುರ ಮತ್ತು ಟೋಕಿಯೊ ಮೂಲದ, ಗೋಲ್ಡ್‌ಮನ ಸ್ಯಾಕ್ಸ್ ಬೆಂಬಲಿತ ‘ಸೈಫರ್ಮಾ’ ಹೇಳಿದೆ.
‘ಬೌದ್ಧಿಕ ಆಸ್ತಿಯನ್ನು ಕಳವು ಮಾಡುವುದು ಮತ್ತು ಭಾರತೀಯ ಔಷಧೀಯ ಕಂಪನಿಗಳ ವಿರುದ್ಧ ಸ್ಪರ್ಧಾತ್ಮಕ ಲಾಭ ಪಡೆಯುವ ನಿಟ್ಟಿನಲ್ಲಿ ಹ್ಯಾಕರ್‌ಗಳು ಕೃತ್ಯಕ್ಕೆ ಮುಂದಾಗಿದ್ದಾರೆ’ ಎಂದು ‘ಸೈಫರ್ಮಾ’ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ರಿತೇಶ್ ಹೇಳಿದ್ದಾರೆ. ಇವರು ಈ ಹಿಂದೆ ಬ್ರಿಟಿಷ್ ವಿದೇಶಿ ಗುಪ್ತಚರ ಸಂಸ್ಥೆ ‘ಎಂ16’ನಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಓದಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಾಗ ಪ್ರಧಾನಿ ಮೋದಿ ಪ್ರತಿಕ್ರಿಯೆ ಏನಾಗಿತ್ತು?
‘ಎಪಿಟಿ10’ಯು ನಿರಂತರವಾಗಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಗುರಿಯಾಗಿಸುತ್ತಿದೆ. ಸೀರಂ ಇನ್‌ಸ್ಟಿಟ್ಯೂಟ್ ಅನೇಕ ದೇಶಗಳಿಗಾಗಿ ಆಸ್ಟ್ರಾಜೆನೆಕಾ ಲಸಿಕೆ ತಯಾರಿಸುತ್ತಿದ್ದು ಸದ್ಯದಲ್ಲೇ ನೊವಾಕ್ಸ್ ಲಸಿಕೆ ತಯಾರಿಕೆ ಆರಂಭಿಸಲಿದೆ.
‘ಸೀರಂ ಇನ್‌ಸ್ಟಿಟ್ಯೂಟ್‌ನ ದುರ್ಬಲ ಪಬ್ಲಿಕ್ ವೆಬ್ ಸರ್ವರ್‌ಗಳ ಬಗ್ಗೆ ಅವರು ತಿಳಿದುಕೊಂಡಿದ್ದಾರೆ’ ಎಂದು ಹ್ಯಾಕರ್‌ಗಳನ್ನು ಉಲ್ಲೇಖಿಸಿ ರಿತೇಶ್ ಮಾಹಿತಿ ನೀಡಿದ್ದಾರೆ.
‘ಅವರು ದುರ್ಬಲ ವೆಬ್ ಅಪ್ಲಿಕೇಶನ್ ಬಗ್ಗೆ ಮಾತನಾಡಿದ್ದಾರೆ, ದುರ್ಬಲ ವಿಷಯ, ನಿರ್ವಹಣಾ ವ್ಯವಸ್ಥೆಯ ಬಗ್ಗೆಯೂ ಮಾತನಾಡುತ್ತಿದ್ದಾರೆ. ಇದು ಸಾಕಷ್ಟು ಆತಂಕಕಾರಿ’ ಎಂದೂ ರಿತೇಶ್ ಹೇಳಿದ್ದಾರೆ.
ಚೀನಾದ ವಿದೇಶಾಂಗ ಸಚಿವಾಲಯ ಈ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.
ಓದಿ: Explainer | ಕೋವಿಡ್ ಲಸಿಕೆ 2.0: ಹೆಸರು ನೋಂದಣಿ, ಲಸಿಕೆ ಪಡೆಯುವುದು ಹೇಗೆ?
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.