ಭಾನುವಾರ, ಡಿಸೆಂಬರ್ 6, 2020
22 °C

ಲಡಾಖ್‌ನಲ್ಲಿ ಚೀನಾ ಯೋಧನ ವಶಕ್ಕೆ ಪಡೆದ ಭದ್ರತಾ ಪಡೆಗಳು; ಮರಳಿ ಕಳಿಸಲು ನಿರ್ಧಾರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲಡಾಕ್‌ ಪ್ರದೇಶ–ಸಾಂದರ್ಭಿಕ ಚಿತ್ರ

ಲಡಾಖ್‌: ಭಾರತದ ಗಡಿಯೊಳಗೆ ಪ್ರವೇಶಿಸಿದ ಚೀನಾದ ಯೋಧರೊಬ್ಬರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಲಡಾಖ್‌ನ ಚುಮಾರ್‌–ಡೆಂಚೋಕ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಕಣ್ಣುತಪ್ಪಿನಿಂದ ಚೀನಾ ಯೋಧ ಭಾರತದ ಭೂ ಪ್ರದೇಶದೊಳಗೆ ಬಂದಿರಬಹುದು ಎಂದು ಮೂಲಗಳು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ. ಶಿಷ್ಟಾಚಾರದ ಪ್ರಕಾರ ಸೂಕ್ತ ಪ್ರಕ್ರಿಯೆಗಳು ಪೂರೈಸಿದ ಬಳಿಕ ಅವರನ್ನು ಚೀನಾ ಸೇನೆಗೆ ಒಪ್ಪಿಸಲಾಗುತ್ತದೆ ಎಂದು ಭಾರತೀಯ ಸೇನೆ ಹೇಳಿದೆ.

ಭಾರತ ಸೇನೆಯ ವಶದಲ್ಲಿರುವ ಯೋಧ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ (ಪಿಎಲ್‌ಎ) ಕಾರ್ಪೊರಲ್‌ ವಾಂಗ್‌ ಯಾ ಲಾಂಗ್‌ ಎಂದು ಗುರುತಿಸಲಾಗಿದೆ. ಪೂರ್ವ ಲಡಾಖ್‌ನಲ್ಲಿ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ದಾಟಿ ಓಡಾಡುತ್ತಿದ್ದಾಗ ಭಾರತೀಯ ಭದ್ರತಾ ಪಡೆಗಳು ಅವರನ್ನು ವಶಕ್ಕೆ ಪಡೆದಿವೆ.

ತೀವ್ರ ಶೀತಮಯ ವಾತಾವರಣ ಮತ್ತು ಎತ್ತರ ಪ್ರದೇಶದ ಹವಾಗುಣದಿಂದ ರಕ್ಷಣೆ ನೀಡಲು ಅವರಿಗೆ ಸೂಕ್ತ ವೈದ್ಯಕೀಯ ಸಹಕಾರ, ಆಹಾರ ಹಾಗೂ ಬೆಚ್ಚನೆಯ ಉಡುಪು ನೀಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ನಾಪತ್ತೆಯಾಗಿರುವ ಯೋಧನ ಸುಳಿವು ಪತ್ತೆಗಾಗಿ ಚೀನಾ ಸೇನೆಯಿಂದಲೂ ಮನವಿ ಬಂದಿದೆ. ಪ್ರಸ್ತುತ ಅನುಸರಿಸಲಾಗುತ್ತಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಚುಶೂಲ್‌–ಮೋಲ್ಡೊ ಪ್ರದೇಶದಲ್ಲಿ ಚೀನಾದ ಅಧಿಕಾರಿಗಳಿಗೆ ಅವರನ್ನು ಒಪ್ಪಿಸಲಾಗುತ್ತದೆ ಎಂದು ಹೇಳಿದೆ.

ಜೂನ್ 15ರಂದು ಗಾಲ್ವನ್ ಕಣಿವೆ ಪ್ರದೇಶದಲ್ಲಿ ನಡೆದಿದ್ದ ಸಂಘರ್ಷದಲ್ಲಿ ಭಾರತೀಯ ಸೇನೆಯ ಕಮಾಂಡಿಂಗ್‌ ಆಫೀಸರ್‌ ಶ್ರೇಣಿಯ ಅಧಿಕಾರಿ ಸೇರಿದಂತೆ 21 ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆಯಲ್ಲಿಯೂ ಸಾವು–ನೋವು ಸಂಭವಿಸಿತ್ತು. ಆದರೆ ಅದರ ವಿವರಗಳನ್ನು ಚೀನಾ ಬಹಿರಂಗಪಡಿಸಿಲ್ಲ.

ಉಭಯ ರಾಷ್ಟ್ರಗಳು ಸೇನೆ ಹಿಂಪಡೆಯುವ ಕುರಿತು ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿವೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು