ಭಾನುವಾರ, ನವೆಂಬರ್ 1, 2020
19 °C

ನಾನು ಮೋದಿಯ ಹನುಮ ಎಂದ ಚಿರಾಗ್‌; ‘ಮತವಿಭಜಕ’ ಎಂದು ದೂರ ತಳ್ಳಿದ ಬಿಜೆಪಿ

ಪಿಟಿಐ Updated:

ಅಕ್ಷರ ಗಾತ್ರ : | |

ಪಟನಾ: ಮೋದಿ ಅವರು ನನ್ನ ಹೃದಯದಲ್ಲಿ ನೆಲೆಸಿದ್ದಾರೆ. ನಾನೇ ಅವರ ಹನುಮಂತ ಎಂದು ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ಶುಕ್ರವಾರ ಹೇಳಿದ್ದಾರೆ.

‘ತಮ್ಮ ರಾಜಕೀಯ ಸಮೀಕರಣವನ್ನು ಬಿಜೆಪಿಯ ಹಿರಿಯ ನಾಯಕರೊಂದಿಗೆ ಚರ್ಚಿಸುತ್ತಾ, ವಿನಾಕಾರಣ ಮೈತ್ರಿಯಲ್ಲಿ ಗೊಂದಲ ಸೃಷ್ಟಿಸುತ್ತಿರುವ ಎಲ್‌ಜೆಪಿ ನಾಯಕ ಚಿರಾಗ್‌ ಒಬ್ಬ ಮತ ವಿಭಜಕ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಚಿರಾಗ್‌ ಪ್ರಧಾನಿ ಮೋದಿ ಅವರನ್ನು ಹೊಗಳುವ ಪ್ರಯತ್ನ ನಡೆಸಿದ್ದಾರೆ.

‘ಪ್ರಧಾನಿ ನನ್ನ ಹೃದಯದಲ್ಲಿ ನೆಲೆಸಿದ್ದಾರೆ. ನಾನು ಅವರ ಹನುಮನಂತೆ ಇದ್ದೇನೆ. ವಿಮರ್ಶೆ ಮಾಡಬಯಸುವವರು ಬೇಕಿದ್ದರೆ ನನ್ನ ಹೃದಯವನ್ನು ತೆರೆದು ನೋಡಬಹುದು. ನಾನು ಪ್ರಧಾನ ಮಂತ್ರಿಯ ಭಾಯಾಚಿತ್ರವನ್ನು ಚುನಾವಣೆಯಲ್ಲಿ ಬಳಸಬೇಕಾಗಿಲ್ಲ’ ಎಂದು ಚಿರಾಗ್‌ ಹೇಳಿದ್ದಾರೆ.

ಚಿರಾಗ್‌ ಪಾಸ್ವಾನ್‌ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ಚುನಾವಣೆಯಲ್ಲಿ ಬಿಜೆಪಿ ಹೆಸರೆತ್ತದಂತೆಯೂ, ಮೋದಿ ಅವರ ಭಾವಚಿತ್ರವನ್ನು ಬಳಸದಂತೆಯೂ ಬಿಜೆಪಿಯ ಹಿರಿಯ ಮುಖಂಡರು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೇರಿದಂತೆ ಹಲವು ನಾಯಕರು ಚಿರಾಗ್‌ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.

‘ಹಲವು ವಿಚಾರಗಳಲ್ಲಿ ಮೋದಿ ಅವರನ್ನು ಟೀಕಿಸುತ್ತಾ ಬಂದಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಮೋದಿ ಅವರ ಭಾವಚಿತ್ರಗಳು ಹೆಚ್ಚಾಗಿ ಬೇಕಾಗಬಹುದು. ಆದರೆ ನನಗಲ್ಲ. ನಾನು ಹಿಂದೆಯೂ ಬಿಜೆಪಿಯೊಂದಿಗೆ ಇದ್ದೆ, ಈಗಲೂ ಇದ್ದೇನೆ, ಮುಂದೆಯೂ ಇರುತ್ತೇನೆ. ನ.10 ರಂದು ಬಿಹಾರದಲ್ಲಿ ಎಲ್‌ಜೆಪಿ–ಬಿಜೆಪಿ ಸರ್ಕಾರ ರಚನೆ ಮಾಡುವುದು ನನ್ನ ಸಂಕಲ್ಪವೂ ಆಗಿದೆ,’ ಎಂದು ಚಿರಾಗ್‌ ಹೇಳಿದ್ದಾರೆ.

ಆದರೆ, ಮತ್ತೊಂದು ಕಡೆ ಜೆಡಿಯುಗೆ ಹೆಚ್ಚು ಹತ್ತಿರವಿರುವ ಬಿಜೆಪಿಯು ಎಲ್‌ಜೆಪಿ ಮತ್ತು ಅದರ ವರಿಷ್ಠ ಚಿರಾಗ್‌ ಪಾಸ್ವಾನ್‌ ಅವರನ್ನು ದೂರವಿಟ್ಟಿದೆ.

ಎನ್‌ಡಿಎ ಮತ್ತು ನಿತೀಶ್‌ ಕುರಿತು ಚಿರಾಗ್ ಪಾಸ್ವಾನ್ ಅವರು ನೀಡುತ್ತಿರುವ ಹೇಳಿಕೆಗಳು ದುರದೃಷ್ಟಕರ. ಇದೇ ಮೈತ್ರಿಯಲ್ಲಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾದರು. ಫೆಬ್ರುವರಿಯಲ್ಲಿ ಅವರು ಬಿಹಾರ ಸರ್ಕಾರವನ್ನು ಹೊಗಳಲು ದೆಹಲಿಯಲ್ಲಿ ಸೇತುವೆಯಾಗಿದ್ದರು. 6 ತಿಂಗಳಲ್ಲಿ ಇದ್ದಕ್ಕಿದ್ದಂತೆ ಏನಾಯಿತು? ಈಗ ವೈಯಕ್ತಿಕ ಹಿತದೃಷ್ಟಿಯಿಂದ ಸುಳ್ಳಿನ ರಾಜಕೀಯ ಮಾಡುತ್ತಿದ್ದಾರೆ,’ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿರಾಗ್‌ ಪಾಸ್ವಾನ್‌ ಅವರ ತಂದೆ, ರಾಮ್‌ ವಿಲಾಸ್‌ ಪಾಸ್ವಾನ್‌ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಅವರು ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು