ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡಬ್ಲ್ಯೂಎಸ್ ತೀರ್ಪು: ಬಿಜೆಪಿ, ಕಾಂಗ್ರೆಸ್ ಸ್ವಾಗತ, ಪ್ರತಿಪಕ್ಷಗಳ ಭಿನ್ನ ನಿಲುವು

ಸಾಮಾಜಿಕ ನ್ಯಾಯ ಹೋರಾಟಕ್ಕೆ ಹಿನ್ನಡೆ ಎಂದ ಸ್ಟಾಲಿನ್
Last Updated 7 ನವೆಂಬರ್ 2022, 19:35 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್) ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರೋಧ ಪಕ್ಷಗಳು ಭಿನ್ನ ನಿಲುವು ವ್ಯಕ್ತಪಡಿಸಿವೆ.

ತಮಿಳುನಾಡಿನಲ್ಲಿ ಡಿಎಂಕೆ ಸೇರಿದಂತೆ ಬಹುತೇಕ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ತೀರ್ಪು ಸರಿ ಎಂದು ಕಾಂಗ್ರೆಸ್ ಹೇಳಿದ್ದರೂ, ಪಕ್ಷದ ಮುಖಂಡ ಉದಿತ್ ರಾಜ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.ನಿರೀಕ್ಷೆಯಂತೆ ಆಡಳಿತಾರೂಢ ಬಿಜೆಪಿಯು ತೀರ್ಪು ಸ್ವಾಗತಿಸಿದೆ.

ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಕಾಂಗ್ರೆಸ್, ತಮ್ಮ ಸರ್ಕಾರದ ಅವಧಿಯಲ್ಲಿ ಮೀಸಲಾತಿ ನೀಡಿಕೆ ಪ್ರಕ್ರಿಯೆ ಶುರುವಾಗಿತ್ತು ಎಂದು ಹೇಳಿಕೊಂಡಿದೆ. ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಮೀಸ ಲಾತಿ ನೀಡುವ ಕುರಿತಂತೆ 2005–06ರಲ್ಲಿ ಸಿನ್ಹಾ ಆಯೋಗವನ್ನು ನೇಮಿಸಿತ್ತು. 2010ರ ಜುಲೈನಲ್ಲಿ ಅದು ವರದಿ ಸಲ್ಲಿಸಿತ್ತು. ಇಂದಿನ ತೀರ್ಪು ಮನಮೋಹನ್ ಸಿಂಗ್ ಅವರು ಆರಂಭಿಸಿದ್ದ ಪ್ರಕ್ರಿಯೆಯ ಫಲ ಎಂದು ಕಾಂಗ್ರೆಸ್ ಹೇಳಿದೆ.

ಬಿಜೆಪಿ ಸಂತಸ:ಈ ತೀರ್ಪು ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವು ಎಂದು ಬಿಜೆಪಿ ಬಣ್ಣಿಸಿದೆ. ದೇಶದ ಬಡವರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಪ್ರಧಾನಿಯವರ ಕಾರ್ಯಕ್ರಮಕ್ಕೆ ಸಿಕ್ಕಿರುವ ಜಯ ಎಂದಿದೆ.

ಹೆಮ್ಮೆ ಎಂದ ಹಾರ್ದಿಕ್:2015ರಲ್ಲಿ ಗುಜರಾತ್‌ನಲ್ಲಿ ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಪ್ರತಿಭಟನೆ ನಡೆಸಿದ್ದ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರು ತೀರ್ಪು ಸ್ವಾಗತಿಸಿದ್ದಾರೆ. ‘ಕೋರ್ಟ್ ತೀರ್ಪಿನಿಂದ 68 ಸಮುದಾಯಗಳು ಮೀಸಲಾತಿಯ ಲಾಭ ಪಡೆಯಲಿವೆ. ನಾವು ಮಾಡಿದ್ದ ಪ್ರತಿಭಟನೆಯಿಂದಾಗಿ ಜನರು ಅನುಕೂಲ ಪಡೆಯುವಂತಾಗಿದೆ ಎಂಬುದು ಹೆಮ್ಮೆಯ ವಿಚಾರ’ ಎಂದು ಪಾಟೀದಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಾರ್ದಿಕ್ ಪಟೇಲ್ ಅವರು ಹೇಳಿದ್ದಾರೆ.

‘ಸುಪ್ರೀಂ ಕೋರ್ಟ್ ಜಾತಿವಾದಿ’
ಕಾಂಗ್ರೆಸ್‌ನ ಎಸ್‌ಸಿ, ಎಸ್‌ಟಿ ವಿಭಾಗದ ಮುಖ್ಯಸ್ಥ ಉದಿತ್ ರಾಜ್ ಅವರು ತೀರ್ಪಿನ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತವಾಗಿದೆ. ‘ನಾನು ಇಡಬ್ಲ್ಯೂಎಸ್‌ ವಿರೋಧಿಯಲ್ಲ. ಆದರೆ, ಸುಪ್ರೀಂ ಕೋರ್ಟ್ ಜಾತಿವಾದಿಯಾಗಿ ವರ್ತಿಸುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ. ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿ ವಿಚಾರದಲ್ಲಿ ಇಂದಿರಾ ಸಹಾನಿ ಪ್ರಕರಣ ಉಲ್ಲೇಖಿಸಿ ಶೇ 50ರ ಮಿತಿಯನ್ನು ಅಡ್ಡ ತರಲಾಗುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದ ವರಿಗೆ ಮೀಸಲಾತಿ ನೀಡುವಾಗ ಸುಪ್ರೀಂ ಕೋರ್ಟ್ ತಿರುವು ತೆಗೆದುಕೊಂಡಿದೆ’ ಎಂದು ಉದಿತ್ ಟ್ವೀಟ್ ಮಾಡಿದ್ದಾರೆ.

ಉದಿತ್ ರಾಜ್ ಹೇಳಿಕೆಗೆ ಬಿಜೆಪಿ ವಕ್ತಾರ ಗೌರವ ಭಾಟಿಯಾ ಕಿಡಿಕಾರಿದ್ದಾರೆ. ‘ಸುಪ್ರೀಂಕೋರ್ಟ್‌ ಅನ್ನು ಜಾತಿವಾದಿ ಎಂದು ಕರೆಯುವ ಮೂಲಕ ಉದಿತ್ ರಾಜ್ ಅವರು ತಮ್ಮ ಬಡವರ ವಿರೋಧಿ ಮನಸ್ಥಿತಿಯನ್ನು ಹೊರಹಾಕಿದ್ದಾರೆ’ ಎಂದು ಆರೋಪಿಸಿದ್ದಾರೆ. ರಾಜ್ ಅವರ ಹೇಳಿಕೆ ನ್ಯಾಯಾಂಗ ನಿಂದನೆಯಾಗಿದ್ದು, ಕೋರ್ಟ್ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಉದಿತ್ ರಾಜ್ ಅವರ ನಿಲುವು ಕಾಂಗ್ರೆಸ್ ನಿಲುವೇ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಮಿಳುನಾಡಿನಲ್ಲಿ ಭಾರಿ ವಿರೋಧ
ಡಿಎಂಕೆ ವರಿಷ್ಠ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಹಿನ್ನಡೆ ಎಂದು ಕರೆದಿದ್ದಾರೆ.ಡಿಎಂಕೆ ವಿರೋಧಕ್ಕೆ ವಿಸಿಕೆ, ಪಿಎಂಕೆ, ಎಎಂಎಂಕೆ ಪಕ್ಷಗಳೂ ದನಿಗೂಡಿಸಿವೆ. ಆರ್ಥಿಕ ಸ್ಥಿತಿಗತಿಯನ್ನು ಸಾಮಾಜಿಕ ನ್ಯಾಯದ ಸೂಚಕವಾಗಿ ಪರಿಗಣಿಸಲು ಬರುವುದಿಲ್ಲ ಎಂದು ಪಕ್ಷಗಳು ಪ್ರತಿಪಾದಿಸಿವೆ. ಆದರೆ ತಮಿಳುನಾಡಿನ ಪ್ರತಿಪಕ್ಷ ಎಐಎಡಿಎಂಕೆ ಪ್ರತಿಕ್ರಿಯಿಸಿಲ್ಲ.

ದೇಶದ ಸುದೀರ್ಘ ಸಾಮಾಜಿಕ ನ್ಯಾಯ ಹೋರಾಟಕ್ಕೆ ಈ ತೀರ್ಪಿನಿಂದ ಹಿನ್ನಡೆಯಾಗಿದೆ ಎಂದು ಸ್ಟಾಲಿನ್ ಹೇಳಿದ್ದು, ಸಮಾನ ಮನಸ್ಕ ಪಕ್ಷಗಳು ಈ ಬಗ್ಗೆ ಒಕ್ಕೊರಲ ದನಿ ಎತ್ತಬೇಕು ಎಂದು ಕರೆ ನೀಡಿದ್ದಾರೆ.ತೀರ್ಪಿನ ವಿಸ್ತೃತ ಅಧ್ಯಯನ ಹಾಗೂ ಕಾನೂನು ತಜ್ಞರ ಸಲಹೆ ಬಳಿಕ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ವಿಸಿಕೆ ಪಕ್ಷದ ತೊಲ್ ತಿರುಮಾವಳವನ್ ಅವರು ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.ರಾಜ್ಯದಲ್ಲಿ ಜಾರಿಯಲ್ಲಿರುವ ಶೇ 69ರಷ್ಟು ಮೀಸಲಾತಿಗೆ ಈ ತೀರ್ಪಿನಿಂದ ಧಕ್ಕೆಯಾಗುವುದಿಲ್ಲ ಎಂಬುದನ್ನು ಮುಖ್ಯಮಂತ್ರಿ ಸ್ಟಾಲಿನ್ ಅವರು ಖಚಿತಪಡಿಸಬೇಕು ಎಂದು ಎಎಂಎಂಕೆ ಮುಖಂಡ ಟಿ.ಟಿ.ವಿ ದಿನಕರನ್ ಆಗ್ರಹಿಸಿದ್ದಾರೆ.

‘ನೋ ಕಮೆಂಟ್ಸ್’ ಎಂದ ಟಿಎಂಸಿ
ಸುಪ್ರೀಂ ತೀರ್ಪಿನ ಬಗ್ಗೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರಲು ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ನಿರ್ಧರಿಸಿದೆ. ‘ನೋ ಕಮೆಂಟ್ಸ್’ ಎಂದು ವಕ್ತಾರ ಸುಖೇಂದು ಶೇಖರ್ ರಾಯ್ ಹೇಳಿದ್ದಾರೆ. ಆದರೆ ಪಕ್ಷದ ಮತ್ತೊಬ್ಬ ಮುಖಂಡ, ಸಂಸದ ಸೌಗತಾ ರಾಯ್ ಅವರು ‘ಆರ್ಥಿಕ ಸಮಾನತೆ ಸಾಧಿಸುವ ಮಾರ್ಗದಲ್ಲಿ ದೊಡ್ಡ ಹೆಜ್ಜೆ’ ಎಂದು ಕೋರ್ಟ್ ತೀರ್ಪನ್ನು ಬಣ್ಣಿಸಿದ್ದಾರೆ.

ಇಡಬ್ಲ್ಯೂಎಸ್ ಹಾದಿ

2019

* ಜ.8;ಸಂವಿಧಾನದ 103ನೇ ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ

* ಜ.9; ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅನುಮೋದನೆ

* ಜ.12; ಮಸೂದೆಗೆ ಸಹಿ ಹಾಕಿದ ರಾಷ್ಟ್ರಪತಿ ಕೋವಿಂದ್; ಪ್ರಕಟಣೆ ಹೊರಡಿಸಿದ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ

* ಫೆಬ್ರುವರಿ: ಹೊಸ ಕಾನೂನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

* ಫೆ.6;ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಆಧರಿಸಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

* ಫೆ.8;ಮೀಸಲಾತಿಗೆ ತಡೆ ನೀಡಲು ಸುಪ್ರೀಂ ನಕಾರ

2022

* ಸೆ.8;ಅರ್ಜಿಗಳ ವಿಚಾರಣೆ ನಡೆಸಲು ನ್ಯಾಯಪೀಠ ರಚಿಸಿದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಯು.ಯು. ಲಲಿತ್

* ಸೆ.13;ವಾದ–ಪ್ರತಿವಾದ ಆರಂಭಿಸಿದ ಕೋರ್ಟ್

* ಸೆ.27;ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

* ನ.7;ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ 103ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು 3:2 ಬಹುಮತದೊಂದಿಗೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT