ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪಕ್ಷದ ಚಿಂತನ ಶಿಬಿರ ಸಮಾರೋಪ: ಭಾರತ ಜೋಡೋ ಯಾತ್ರೆಗೆ ‘ಕೈ’ ಸಜ್ಜು

ಕಾಂಗ್ರೆಸ್‌ ಪಕ್ಷದ ಚಿಂತನ ಶಿಬಿರ ಸಮಾರೋಪ: ಸುಧಾರಣೆಗಾಗಿ ಉದಯ‍ಪುರ ಘೋಷಣೆ
Last Updated 15 ಮೇ 2022, 21:16 IST
ಅಕ್ಷರ ಗಾತ್ರ

ಉದಯಪುರ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್‌ ಜೋಡೋ ಯಾತ್ರೆ’ಯನ್ನು (ಭಾರತವನ್ನು ಒಗ್ಗೂಡಿಸಿ ಯಾತ್ರೆ) ಅಕ್ಟೋಬರ್‌ 2ರಂದು ಆರಂಭಿಸುವುದಾಗಿ ರಾಜಸ್ಥಾನದಲ್ಲಿ ನಡೆದ ಚಿಂತನ ಶಿಬಿರದಲ್ಲಿ ಕಾಂಗ್ರೆಸ್‌ ಭಾನುವಾರ ಘೋಷಿಸಿದೆ.

ಚುನಾವಣೆಯಲ್ಲಿಸತತ ಸೋಲುಗಳನ್ನು ಎದುರಿಸಿರುವ ಪಕ್ಷದ ಪುನಶ್ಚೇತನಕ್ಕಾಗಿ ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ಚಿಂತನ ಶಿಬಿರ ನಡೆಯಿತು. ‘ಸೋಲಿನ ಸುಳಿಯಿಂದ ನಾವು ಹೊರಬರಲಿದ್ದೇವೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೇಳಿದ್ದಾರೆ.

ಉದಯಪುರ ಘೋಷಣೆಯಲ್ಲಿ, ಪಕ್ಷದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗುವುದು ಎಂದು ಹೇಳಲಾಗಿದೆ. ‘ಒಂದು ವ್ಯಕ್ತಿಗೆ ಒಂದು ಹುದ್ದೆ’, ‘ಒಂದು ಕುಟುಂಬಕ್ಕೆ ಒಂದು ಟಿಕೆಟ್‌’ ಮುಂತಾದ ಘೋಷಣೆಗಳು ಇದರಲ್ಲಿ ಸೇರಿವೆ. ಒಂದು ಕುಟುಂಬದ ಎರಡನೇ ವ್ಯಕ್ತಿಯು ಕನಿಷ್ಠ ಐದು ವರ್ಷ ಪಕ್ಷಕ್ಕಾಗಿ ಕೆಲಸ ಮಾಡಿದ್ದರೆ ಅಂಥವರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಇದೆ. ಒಂದು ವ್ಯಕ್ತಿಯು ಒಂದು ಹುದ್ದೆಯಲ್ಲಿ ಗರಿಷ್ಠ ಐದು ವರ್ಷ ಮಾತ್ರ ಉಳಿಯಬಹುದು.

ಸಂಸತ್ತು ಮತ್ತು ವಿಧಾನಸಭೆಗಳ ಶೇ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲು ಇರಿಸುವ ಮಹಿಳಾ ಮೀಸಲು ಮಸೂದೆಯ ಕುರಿತ ನಿಲುವನ್ನು ಕಾಂಗ್ರೆಸ್‌ ಬದಲಾಯಿಸಿಕೊಂಡಿದೆ. ಇತರ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಒಳಮೀಸಲು ನೀಡಬೇಕು ಎಂಬ ನಿಲುವು ತಳೆದಿದೆ.

ಪಕ್ಷದಲ್ಲಿ ಮತ್ತು ಚುನಾವಣೆಯಲ್ಲಿ ಯುವ ಜನರಿಗೆ ಶೇ 50ರಷ್ಟು ಪ್ರಾತಿನಿಧ್ಯಕ್ಕೆ ಒಪ್ಪಿಗೆ ಸಿಕ್ಕಿದೆ. ಆದರೆ, ಮುಖಂಡರಿಗೆ ನಿವೃತ್ತಿ ವಯಸ್ಸು ನಿಗದಿ ಮಾಡಬೇಕು ಎಂಬ ಸಲಹೆಗಳಿಗೆ ಮಾನ್ಯತೆ ಸಿಕ್ಕಿಲ್ಲ. ಹಾಗೆಯೇ, ಐದು ವರ್ಷಪಕ್ಷದ ಹುದ್ದೆಯಲ್ಲಿ ಇದ್ದ ವ್ಯಕ್ತಿಯು ಮುಂದಿನ ಮೂರು ವರ್ಷ ಯಾವುದೇ ಹುದ್ದೆಗೆ ಏರುವಂತಿಲ್ಲ ಎಂಬ ಸಲಹೆಯನ್ನೂ ಕೈಬಿಡಲಾಗಿದೆ. ಆದರೆ, ಪಕ್ಷದ ಸಂವಹನ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂಬುದನ್ನು ಒಪ್ಪಿಕೊಳ್ಳಲಾಗಿದೆ. ಸಂಸದ ರಾಹುಲ್‌ ಗಾಂಧಿ ಅವರು ತಮ್ಮ ಭಾಷಣದಲ್ಲಿ ಈ ವಿಚಾರ
ಪ್ರಸ್ತಾಪಿಸಿದ್ದರು.

ಖಾಸಗಿ ಕ್ಷೇತ್ರದಲ್ಲಿಯೂ ಮೀಸಲು ನಿಗದಿ, ಸಂಸತ್ತು ಮತ್ತು ವಿಧಾಸನಭೆಗಳಲ್ಲಿ ಒಬಿಸಿ ಮೀಸಲಾತಿ, ಪಕ್ಷದ ಹುದ್ದೆ
ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಬೇಕು ಎಂಬ ಸಲಹೆಗಳು ಕೂಡ ಘೋಷಣೆಯಲ್ಲಿ ಸ್ಥಾನ ಪಡೆದಿಲ್ಲ.

‘ಈಗಾಗಲೇ ಹಾಳುಗೆಡವಲಾಗಿರುವ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲು, ನಿರಂತರ ದಾಳಿಗೆ ಒಳಗಾಗುತ್ತಿರುವ ಸಂವಿಧಾನದ ಮೂಲ ಮೌಲ್ಯಗಳ ರಕ್ಷಣೆಗಾಗಿ ಮತ್ತು ಕೋಟ್ಯಂತರ ಜನರ ನಿತ್ಯದ ಕಳಕಳಿಗಳನ್ನು ಎತ್ತಿ ತೋರಿಸಲು ಭಾರತ್‌ ಜೋಡೋ ಯಾತ್ರೆ ಅಗತ್ಯ’ ಎಂದು ಸೋನಿಯಾ ಪ್ರತಿಪಾದಿಸಿದರು.

ಸುಧಾರಣಾ ಕ್ರಮಗಳು

* ಉದಯಪುರದಲ್ಲಿ ಚರ್ಚಿಸಲಾದ ಆಂತರಿಕ ಸುಧಾರಣೆಗಳನ್ನು ಜಾರಿಗೆ ತರಲು ಕಾರ್ಯಪಡೆಯನ್ನು ರಚಿಸಲಾಗುವುದು. 2–3 ದಿನಗಳಲ್ಲಿ ಈ ಕಾರ್ಯಪಡೆಯ ಸದಸ್ಯರ ಹೆಸರು ಪ್ರಕಟವಾಗಲಿದೆ

* ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಸುಧಾರಣೆಗಳನ್ನು ಮಾಡಲಾಗಿದೆ. ಪಕ್ಷ ಸಂಘಟನೆ, ಪಕ್ಷದ ಹುದ್ದೆಗಳಿಗೆ ನೇಮಕ, ಸಂವಹನ ಮತ್ತು ಪ್ರಚಾರ, ಜನ ಸಂಪರ್ಕ, ಹಣಕಾಸು ಮತ್ತು ಚುನಾವಣಾ ನಿರ್ವಹಣೆಗೆ ಒತ್ತು ನೀಡಲಾಗಿದೆ

* ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಿಂದ ಆಯ್ದ ವ್ಯಕ್ತಿಗಳಿರುವ ಸಲಹಾ ಗುಂಪನ್ನು ರಚಿಸಲಾಗುವುದು. ಈ ಗುಂಪು ನಿಯಮಿತವಾಗಿ ಸಭೆ ಸೇರಿ ಪಕ್ಷದ ಮುಂದಿರುವ ರಾಜಕೀಯ ಸವಾಲುಗಳ ಬಗ್ಗೆ ಚರ್ಚಿಸಲಿದೆ. ಇದು ನಿರ್ಧಾರ ಕೈಗೊಳ್ಳುವಿಕೆ ಸಮಿತಿ ಅಲ್ಲ. ಬದಲಿಗೆ ಪಕ್ಷದ ಹಿರಿಯರ ಅನುಭವವನ್ನು ಪಕ್ಷಕ್ಕಾಗಿ ಬಳಸಿಕೊಳ್ಳಲು ಈ ಸಮಿತಿ ರಚನೆ ಆಗಲಿದೆ

* ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಅದರ ಭಾಗವಾಗಿ, ಮೂರು ಘಟಕಗಳನ್ನು ರಚಿಸಲು ನಿರ್ಧರಿಸಲಾಗಿದೆ. ಅವುಗಳೆಂದರೆ, ಸಾರ್ವಜನಿಕ ಒಳನೋಟ ಘಟಕ, ರಾಷ್ಟ್ರೀಯ ತರಬೇತಿ ಸಂಸ್ಥೆ ಮತ್ತು ಚುನಾವಣಾ ನಿರ್ವಹಣೆ ಘಟಕ

* ಜಿಲ್ಲಾ ಮಟ್ಟದಲ್ಲಿ ಜೂನ್‌ 15ರಿಂದ ಜನ ಜಾಗರಣ ಅಭಿಯಾನ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT