ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪಕ್ಷ ಒಗ್ಗಟ್ಟು: ಕಾಂಗ್ರೆಸ್ ಮಹಾಧಿವೇಶನದಲ್ಲಿ ಸಂಕಲ್ಪ

Last Updated 27 ಫೆಬ್ರುವರಿ 2023, 2:20 IST
ಅಕ್ಷರ ಗಾತ್ರ

ರಾಯಪುರ: ಬಿಜೆಪಿಯ ‘ಸರ್ವಾಧಿಕಾರಿ, ಕೋಮುವಾದಿ ಮತ್ತು ಸ್ವಜನ ಪಕ್ಷಪಾತ’ದ ವಿರುದ್ಧ ಸಮಾನಮನಸ್ಕ ಪಕ್ಷಗಳೆಲ್ಲವೂ ‘ಸಾಮಾನ್ಯ, ರಚನಾತ್ಮಕ ಕಾರ್ಯಕ್ರಮ’ದ ಮೂಲಕ ಒಂದಾಗಬೇಕು ಎಂಬ ಪ್ರಸ್ತಾವವನ್ನು ಕಾಂಗ್ರೆಸ್‌ ಪಕ್ಷವು ಭಾನುವಾರ ಮುಂದಿಟ್ಟಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಪಕ್ಷದ ನಾಯಕರು ‘ಶಿಸ್ತು ಮತ್ತು ಪೂರ್ಣ ಒಗ್ಗಟ್ಟಿನಿಂದ ಇರಬೇಕು ಎಂದೂ ಕರೆ ಕೊಡಲಾಗಿದೆ.

ಕಾಂಗ್ರೆಸ್ ಮಹಾಧಿವೇಶನದ ಕೊನೆಯ ದಿನವಾದ ಭಾನುವಾರ ಅಂಗೀಕರಿಸಲಾದ ಐದು ಅಂಶಗಳ ‘ರಾಯಪುರ ಘೋಷಣೆ’ಯು ಈ ವಿಚಾರ ಗಳನ್ನು ಒಳಗೊಂಡಿದೆ. ಈ ಹಿಂದೆ ಜಾರಿ ಮಾಡಲಾಗಿದ್ದ ಉದಾರೀಕರಣ ನೀತಿಯು ದೇಶದ ಆಡಳಿತಕ್ಕೆ ನೀಲನಕ್ಷೆಯನ್ನು ಒದಗಿಸಿತ್ತು. ಈಗ ಅದರ ಅವಧಿಯು ಮುಗಿದಿದೆ. ದೇಶದ ತಯಾರಿಕಾ ವಲಯವನ್ನು ಸಶಕ್ತಗೊಳಿಸಿ ಅರ್ಥ ವ್ಯವಸ್ಥೆಗೆ ಪುನಶ್ಚೇತನ ನೀಡಲು ಹೊಸ ಮುನ್ನೋಟವೊಂದನ್ನು ರೂಪಿಸಲು ಕಾಲ ಪ‍ಕ್ವವಾಗಿದೆ ಎಂಬುದನ್ನೂ ‘ಘೋಷಣೆ’ಯು ಸೂಕ್ಷ್ಮವಾಗಿ ಹೇಳಿದೆ.

ಸಾಮಾಜಿಕ ಭದ್ರತೆ ಕಾರ್ಯಕ್ರಮ ಗಳಿಗೂ ಒತ್ತು ನೀಡಬೇಕಾಗಿದೆ. ಸಾಮಾಜಿಕ ನ್ಯಾಯದ ತಳಹದಿಯನ್ನು ಬಲಪಡಿಸಲು ಜಾತಿ ಸಮೀಕ್ಷೆಯನ್ನು ತಕ್ಷಣವೇ ಮಾಡಬೇಕಾದುದು ಅತ್ಯಗತ್ಯವಾಗಿದೆ. ಮಹಿಳಾ ಕೇಂದ್ರಿತ ‘ನ್ಯಾಯ್‌’ (ಕನಿಷ್ಠ ಆದಾಯ ಖಾತರಿ ಯೋಜನೆ, ಲೋಕಸಭೆಗೆ 2019ರಲ್ಲಿ ನಡೆದ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಈ ಭರವಸೆ ಇತ್ತು) ಮೂಲಕ ಸಂಪೂರ್ಣ ಸಾಮಾಜಿಕ ಸುರಕ್ಷೆಯನ್ನು ಖಾತರಿಪಡಿಸಬೇಕಿದೆ. ಸಾರ್ವತ್ರಿಕ ಆರೋಗ್ಯ ಹಕ್ಕು ಕಾಯ್ದೆಯನ್ನೂ ಜಾರಿಗೆ ತರಬೇಕಾಗಿದೆ ಎಂದು ಘೋಷಣೆಗಳಲ್ಲಿ ಹೇಳಲಾಗಿದೆ.

ಪಕ್ಷವನ್ನು ಬಲಪಡಿಸಬೇಕಾದ ಅಗತ್ಯ ಇದೆ ಮತ್ತು ಬಿಜೆಪಿ ವಿರೋಧಿ ಪಕ್ಷಗಳು ಒಗ್ಗಟ್ಟಾಗುವ ಮೂಲಕ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಎಂದು ಹೇಳಲಾಗಿದೆ. ಪಕ್ಷದಲ್ಲಿ ಗುಂಪುಗಾರಿಕೆ ಇದೆ ಎಂಬುದನ್ನು ಸೂಕ್ಷ್ಮವಾಗಿ ಒಪ್ಪಿಕೊಳ್ಳಲಾಗಿದ್ದು, ಅದು ಚುನಾವಣಾ ಗೆಲುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಕಳವಳ ವ್ಯಕ್ತಪಡಿಸಲಾಗಿದೆ.

ಬಿಜೆಪಿ ವಿರೋಧಿ ಪಕ್ಷಗಳು ಒಟ್ಟಾದರೆ ಅದರ ನೇತೃತ್ವ ವಹಿಸಿಕೊಳ್ಳುವುದರ ಕುರಿತು ಖಚಿತವಾಗಿ ಏನನ್ನೂ ಹೇಳಿಲ್ಲ. ಆದರೆ, ಬಿಜೆಪಿ–ಆರ್‌ಎಸ್‌ಎಸ್‌ ಹಾಗೂ ಅವುಗಳ ತುಚ್ಛ ರಾಜಕಾರಣದ ಜೊತೆಗೆ ಯಾವತ್ತೂ ರಾಜಿ ಮಾಡಿಕೊಳ್ಳದ ಏಕೈಕ ಪಕ್ಷ ಕಾಂಗ್ರೆಸ್‌ ಮಾತ್ರ ಎಂಬುದನ್ನು ಒತ್ತು ನೀಡಿ ಹೇಳಲಾಗಿದೆ. ಬಿಜೆಪಿಯ ಸರ್ವಾಧಿಕಾರಿ, ಕೋಮುವಾದಿ ಮತ್ತು ಸ್ವಜನಪಕ್ಷಪಾತದ ವಿರುದ್ಧ ಸದಾ ಹೋರಾಡಿ ರಾಜಕೀಯ ಮೌಲ್ಯ ಗಳನ್ನು ಸಂರಕ್ಷಿಸುವ ಭರವಸೆಯನ್ನೂ ನೀಡಿದೆ.

‘ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ತೀವ್ರಗೊಳ್ಳುತ್ತಿರುವ ಸಾಮಾಜಿಕ ಧ್ರುವೀಕರಣ ಮತ್ತು ದಟ್ಟವಾಗುತ್ತಿರುವ ರಾಜಕೀಯ ನಿರಂಕುಶತ್ವವು ದೇಶ ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ’ ಎಂದು ಗುರುತಿಸಿರುವ ಕಾಂಗ್ರೆಸ್‌, ಸಂವಿಧಾನದ ರಕ್ಷಣೆಗೆ ಕಟಿಬದ್ಧ ಎಂದಿದೆ.

ಕರ್ನಾಟಕ, ಛತ್ತೀಸಗಢ, ಮಧ್ಯ ಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆಗಳಿಗೆ ‘ಮಹತ್ವ’ದ ಚುನಾವಣೆ ನಡೆಯಲಿದೆ. ಹಾಗಾಗಿ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ‘ಶಿಸ್ತು ಮತ್ತು ಸಂಪೂರ್ಣ ಒಗ್ಗಟ್ಟಾಗಿ ಇರಬೇಕು’. ಈ ಚುನಾವಣೆಗಳು ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದೂ ಘೋಷಣೆಯು ಹೇಳಿದೆ.

ವಯನಾಡ್‌ ಸಂಸದ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ‘ಭಾರತ್ ಜೋಡೊ ಯಾತ್ರೆ’ಗೆ ರಾಯಪುರ ಘೋಷಣೆಯಲ್ಲಿ ಹೆಚ್ಚಿನ ಮಹತ್ವ ಸಿಕ್ಕಿದೆ. ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರಗತಿ ಪರವಾದ ದೃಷ್ಟಿಕೋನವನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಯಾತ್ರೆಯು ಮುನ್ನೆಲೆಗೆ ತಂದಿದೆ ಎಂದು ಘೋಷಣೆಯು ಹೇಳಿದೆ.

ಸ್ವಜನ ಪಕ್ಷಪಾತದ ಅತ್ಯಂತ ಕೆಟ್ಟ ಉದಾಹರಣೆಯನ್ನು ಇಡೀ ದೇಶ ಮತ್ತು ಜಗತ್ತು ನೋಡುತ್ತಿದೆ. ಅದರ ವಿರುದ್ಧ ಜನಜಾಗೃತಿ ಅಭಿಯಾನವನ್ನು ನಡೆಸುವುದಾಗಿ ಪಕ್ಷವು ಘೋಷಿಸಿದೆ. ಅದಾನಿ ಸಮೂಹಕ್ಕೆ ಸಂಬಂಧಿಸಿದ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿ ಈ ಘೋಷಣೆ ಮಾಡಲಾಗಿದೆ.

‘ಪುನಶ್ಚೇತನಗೊಂಡ ಕಾಂಗ್ರೆಸ್‌ನ ನಿರೀಕ್ಷೆಯಲ್ಲಿ ಭಾರತವು ಇದೆ. ಜನರ ನಿರೀಕ್ಷೆಗಳನ್ನು ಪೂರೈಸುವ ಹೊಣೆಗಾರಿಕೆ ನಮ್ಮದಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ವಿಭಜಕ ರಾಜಕಾರಣವನ್ನು, ‘ಭಾರತ್‌ ಜೋಡೊ ಯಾತ್ರೆ’ಯು ಸೃಷ್ಟಿಸಿರುವ ಆಶಾಭಾವನೆಯ ಮೂಲಕ ಸೋಲಿಸಬೇಕು. ಹೆಚ್ಚು ಬಲವಾದ ಮತ್ತು ಒಗ್ಗಟ್ಟಿನಿಂದ ಕೂಡಿದ ದೇಶ ನಿರ್ಮಾಣದ ಸಾಮಾನ್ಯ ಗುರಿ ಮತ್ತು ದೃಢ ನಿಶ್ಚಯದೊಂದಿಗೆ ರಾಯಪುರ ಮಹಾಧಿವೇಶನ ಸಮಾರೋಪಗೊಳ್ಳುತ್ತಿದೆ’ ಎಂದು ಘೋಷಣೆಯಲ್ಲಿ ಹೇಳಲಾಗಿದೆ. ‌ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್‌ ವಾಸ್ನಿಕ್‌ ಅವರು ಘೋಷಣೆಯನ್ನು ಓದಿದರು.

ಆಡಳಿತದ ಕುರಿತು...
ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಕ್ಷೇತ್ರವು ಪುನಶ್ಚೇತನಗೊಳ್ಳುವ ಅಗತ್ಯ ಇದೆ. ಆ ಮೂಲಕ ಆರ್ಥಿಕತೆಯು ತ್ವರಿತವಾಗಿ ಬೆಳೆಯುವಂತೆ ಮಾಡಿ, ಉದ್ಯೋಗ ಸೃಷ್ಟಿಸಬೇಕಿದೆ. ಯುವ ಜನರಿಗೆ ಕ್ಲಸ್ಟರ್‌ ಆಧಾರಿತ ಕೌಶಲ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕಿದೆ. ಹೆಚ್ಚು ಕಾರ್ಮಿಕರ ಅಗತ್ಯ ಇರುವ ತಯಾರಿಕಾ ವಲಯಕ್ಕೆ ಸೀಮಿತವಾದ ಹಣಕಾಸು ನೆರವು ಮತ್ತು ತಾಂತ್ರಿಕ ಬೆಂಬಲ ರೂಪಿಸಬೇಕಿದೆ ಎಂದು ಘೋಷಣೆಯಲ್ಲಿ ವಿವರಿಸಲಾಗಿದೆ.

ಸಣ್ಣ ವರ್ತಕರಿಗೆ ಅನುಕೂಲವಾಗುವಂತೆ ಜಿಎಸ್‌ಟಿಯಲ್ಲಿ ಆಮೂಲಾಗ್ರ ಸುಧಾರಣೆ ತರಬೇಕು. ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಇನ್ನೂ ಐದು ವರ್ಷ ವಿಸ್ತರಿಸಬೇಕು. ಉತ್ಪಾದನಾ ಗುರಿಗಳ ಜೊತೆಗೆ, ರೈತರು ಮತ್ತು ಕೃಷಿ ಕಾರ್ಮಿಕರನ್ನು ಕೇಂದ್ರ ಸ್ಥಾನದಲ್ಲಿ ಇರಿಸಿ ಕೃಷಿ ನೀತಿ ಮತ್ತು ಸುಧಾರಣೆಗಳನ್ನು ಜಾರಿಗೊಳಿಸಬೇಕು. ಸಾಲ ಪರಿಹಾರ, ಕನಿಷ್ಠ ಬೆಂಬಲ ಬೆಲೆ ಖಾತರಿಯಂತಹ ಕ್ರಮಗಳ ಮೂಲಕ ರೈತರ ಹಿತರಕ್ಷಣೆ ಮಾಡಬೇಕು. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಗೆ ಕೃಷಿ ಉತ್ಪ‍ನ್ನ ಖರೀದಿಯನ್ನು ಶಿಕ್ಷಾರ್ಹ ಅಪರಾಧವಾಗಿಸಬೇಕು. ಬೆಂಬಲ ಬೆಲೆಯು ರೈತರ ಕಾನೂನುಬದ್ಧವಾದ ಹಕ್ಕಾಗಬೇಕು ಎಂದು ಘೋಷಣೆಯು ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT