ರಿಷಿಗೆ ಪ್ರಶಂಸೆ: ಕಾಂಗ್ರೆಸ್, ಬಿಜೆಪಿಯಲ್ಲಿ ಜಟಾಪಟಿ

ನವದೆಹಲಿ: ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಸಂಬಂಧ ಬಿಜೆಪಿಯನ್ನು ಗುರಿಯಾಗಿಸಿಕೊಂಡು ‘ಉನ್ನತ ಸ್ಥಾನಕ್ಕೆ ಅಲ್ಪಸಂಖ್ಯಾತರನ್ನು ಆಯ್ಕೆ ಮಾಡಿರುವ ಬ್ರಿಟನ್‌ನಿಂದ ಭಾರತ ಪಾಠ ಕಲಿಯಬೇಕು’ ಎಂದು ಕಾಂಗ್ರೆಸ್ ಹಿರಿಯ ನಾಯಕರಾದ ಪಿ.ಚಿದಂಬರಂ ಮತ್ತು ಶಶಿ ತರೂರ್ ನೀಡಿರುವ ಹೇಳಿಕೆಗಳಿಗೆ ಸ್ವತಃ ಅವರ ಪಕ್ಷದಲ್ಲೇ ಆಕ್ಷೇಪ ವ್ಯಕ್ತವಾಗಿದೆ. ಜತೆಗೆ ಬಿಜೆಪಿ ಕೂಡ ಈ ಇಬ್ಬರ ಟ್ವಿಟರ್ ಹೇಳಿಕೆಗೆ ಮಂಗಳವಾರ ತಿರುಗೇಟು ನೀಡಿದೆ.
ಚಿದಂಬರಂ ಮತ್ತು ತರೂರ್ ಅವರ ಟ್ವಿಟರ್ ಹೇಳಿಕೆಗಳನ್ನು ಉಲ್ಲೇಖಿಸಿ ಬಿಜೆಪಿ, ಭಾರತವು ಮೂವರು ಮುಸ್ಲಿಂ ಮತ್ತು ಒಬ್ಬ ಸಿಖ್ ಸಮುದಾಯದವರನ್ನು ರಾಷ್ಟ್ರಪತಿಗಳನ್ನಾಗಿಸಿದೆ. ಅಲ್ಲದೇ ಸಿಖ್ ಸಮುದಾಯದ ಒಬ್ಬರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಿದೆ. ಅಲ್ಲದೆ ನ್ಯಾಯಾಂಗ ಮತ್ತು ಸಶಸ್ತ್ರ ಪಡೆಗಳ ಉನ್ನತ ಸ್ಥಾನಗಳನ್ನು ಅಲ್ಪಸಂಖ್ಯಾತರು ಅಲಂಕರಿಸಿದ್ದಾರೆ ಎಂದು ತಿರುಗೇಟು ನೀಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ತಮ್ಮ ಪಕ್ಷದ ಇಬ್ಬರು ಹಿರಿಯ ನಾಯಕರ ಹೇಳಿಕೆಗಳನ್ನು ತಳ್ಳಿಹಾಕಿದ್ದು, ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹಲವರು ಈಗಾಗಲೇ ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ವಿಚಾರದಲ್ಲಿ ಭಾರತವು ಇತರ ಯಾವುದೇ ರಾಷ್ಟ್ರಗಳಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
‘ನಮ್ಮ ದೇಶದಲ್ಲಿ ಡಾ.ಝಾಕೀರ್ ಹುಸೇನ್ ಅವರು ಮೊದಲು 1967ರಲ್ಲಿ ರಾಷ್ಟ್ರಪತಿ ಸ್ಥಾನ ಅಲಂಕರಿಸಿದರು. ನಂತರ ಫಖ್ರುದ್ದೀನ್ ಅಲಿ ಅಹ್ಮದ್, ಡಾ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿದ್ದಾರೆ. ಅಲ್ಲದೇ, ಬರ್ಕತ್‌ಉಲ್ಲಾ ಖಾನ್, ಎ.ಆರ್. ಅಂತುಲೆ ಅವರೂ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ನಾಯಕರ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ‘ಅವರು ಏನು ಹೇಳಿದ್ದಾರೆ ಎಂಬುದರ ಕುರಿತು ನೀವು ಅವರನ್ನೇ ಕೇಳಬೇಕು, ನಾನು ಬೇರೆ ಯಾವುದೇ ನಾಯಕರ ಟೀಕೆಗಳ ಬಗ್ಗೆ ಮಾತನಾಡುವುದಿಲ್ಲ. ನಾನು ಭಾರತ್ ಜೋಡೊ ಯಾತ್ರೆ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಇತರ ನಾಯಕರು ಏನು ಹೇಳಿದ್ದಾರೆ ಎಂಬುದರ ಬಗ್ಗೆ ಮಾತನಾಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಜೈರಾಮ್ ರಮೇಶ್ ಇದೇ ವೇಳೆ ‘ಅಟಲ್ ಬಿಹಾರಿ ವಾಜಪೇಯಿ ಅವರ ಕಾಲಕ್ಕೂ ಮತ್ತು ನರೇಂದ್ರ ಮೋದಿಯವರ ಕಾಲಕ್ಕೂ ವ್ಯತ್ಯಾಸವಿದೆ. ಕಲಾಂ ರಾಷ್ಟ್ರಪತಿಯಾದದ್ದು ವಾಜಪೇಯಿ ಆಡಳಿತದಲ್ಲಿ. ವಾಜಪೇಯಿ ಅವರು ರೂಪುಗೊಂಡದ್ದು ನೆಹರೂ ಅಧಿಕಾರವಧಿಯಲ್ಲಿ. ವಾಜಪೇಯಿ ಅವರು ನೆಹರೂ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಆದರೆ, ನರೇಂದ್ರ ಮೋದಿ ಅವರು ಮಾತ್ರ ಒಂದು ವಿಷಯದಲ್ಲಿ ಮಾತ್ರ ನಿರತರಾಗಿದ್ದಾರೆ, ಅದೂ ನೆಹರೂ ಪರಂಪರೆ ಹೇಗೆ ಅಳಿಸುವುದೆಂದು’ ಹೇಳಿದರು.
ಪಿಡಿಪಿ ಅಧ್ಯಕ್ಷೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ‘ಭಾರತದಲ್ಲಿ ಎನ್‌ಆರ್‌ಸಿ ಮತ್ತು ಸಿಎಎನಂತಹ ವಿಭಜನೆಯ ಮತ್ತು ತಾರತಮ್ಯದಿಂದ ಕೂಡಿದ ಕಾನೂನುಗಳು ಜಾರಿಗೆ ಬರುವ ಆತಂಕ ಈಗಲೂ ದಟ್ಟವಾಗಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿರುವುದು ಹೆಮ್ಮೆಯ ಕ್ಷಣ. ಬ್ರಿಟನ್‌ನಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಿಷಿ ಅವರು ರಕ್ಷಿಸಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಅವರು, ‘ದೇಶದ ಕೆಲವು ರಾಜಕಾರಣಿಗಳು ದುರದೃಷ್ಟವಶಾತ್ ಹುಳುಕು ಹುಡುಕಲಾರಂಭಿಸಿವೆ. ಇದು ದುರಂತ’ ಎಂದು ತಿರುಗೇಟು ನೀಡಿದ್ದಾರೆ.
ಮೆಹಬೂಬಾ ಮುಫ್ತಿ ಅವರ ಹೇಳಿಕೆ ಪ್ರಸ್ತಾಪಿಸಿ, ‘ಜಮ್ಮು ಮತ್ತು ಕಾಶ್ಮೀರದ ಮುಖ್ಯ ಮಂತ್ರಿಯಾಗಿ ಅಲ್ಲಿನ ಅಲ್ಪಸಂಖ್ಯಾತರನ್ನು ಸ್ವೀಕರಿಸಲು ಮುಫ್ತಿ ಸಿದ್ಧರಿದ್ದಾರೆಯೇ ಎನ್ನುವುದನ್ನು ಉತ್ತರಿಸಲಿ’ ಎಂದು ಹೇಳಿದ್ದಾರೆ.
ರಿಷಿ ಸುನಕ್ ಆಯ್ಕೆ ಗುರುತಿಸಿ ಪಿ.ಚಿದಂಬರಂ ‘ಮೊದಲು ಕಮಲಾ ಹ್ಯಾರಿಸ್, ಈಗ ರಿಷಿ ಸುನಕ್. ಅಮೆರಿಕ ಮತ್ತು ಬ್ರಿಟನ್ ದೇಶಗಳ ಬಹುಸಂಖ್ಯಾತ ಜನರು ತಮ್ಮ ನಾಯಕರನ್ನಾಗಿ ಅಲ್ಪಸಂಖ್ಯಾತರನ್ನು ಸ್ವೀಕರಿಸಿದ್ದಾರೆ. ಸರ್ಕಾರದ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಭಾರತ ಮತ್ತು ಬಹುಸಂಖ್ಯಾತವಾದದ ರಾಜಕಾರಣದಲ್ಲಿ ನಂಬಿಕೆ ಇರಿಸಿರುವ ಪಕ್ಷಗಳು ಕಲಿಯಬೇಕಾದ ಪಾಠವಿದೆಂದು ನಾನು ಭಾವಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದರು.
ಶಶಿ ತರೂರ್ ಅವರು ‘ಬ್ರಿಟಿಷರು ವಿಶ್ವದಲ್ಲೇ ಅತ್ಯಂತ ಅಪರೂಪದ ಕೆಲಸವೊಂದನ್ನು ಮಾಡಿದ್ದಾರೆ. ಅಲ್ಪಸಂಖ್ಯಾತರೊಬ್ಬರನ್ನು ಅತ್ಯಂತ ಪ್ರಭಾವಿ ಕಚೇರಿಯಲ್ಲಿ ಕೂರಿಸುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕೆಂದು ಭಾವಿಸುತ್ತೇನೆ. ಉನ್ನತ ಹುದ್ದೆಗೆ ರಿಷಿ ಸುನಕ್ ಅವರ ಆಯ್ಕೆಯನ್ನು ನಾವು ಸಂಭ್ರಮಿಸುತ್ತಿರುವಾಗ, ಇದು ನಮ್ಮಲ್ಲಿ ಸಂಭವಿಸಬಹುದೇ ಎಂದು ಪ್ರಾಮಾಣಿಕವಾಗಿ ಕೇಳಿಕೊಳ್ಳೋಣ’ ಎಂದು ಟ್ವೀಟ್‌ನಲ್ಲಿ ಹೇಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.