ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು ನಂದಿಗ್ರಾಮದಿಂದ ಸ್ಪರ್ಧೆ: ಮಮತಾ

Last Updated 14 ಮಾರ್ಚ್ 2021, 7:42 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುವ ಸಲುವಾಗಿ ನಂದಿಗ್ರಾಮದಿಂದ ಸ್ಪರ್ಧಿಸುತ್ತಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

2007ರ ಮಾರ್ಚ್ 14ರಂದು ನಂದಿಗ್ರಾಮದಲ್ಲಿ ನಡೆದ ಗುಂಡಿನ ದಾಳಿಯನ್ನು ಸರಣಿ ಟ್ವೀಟ್‌ಗಳಲ್ಲಿ ನೆನಪಿಸಿರುವ ಮಮತಾ ಬ್ಯಾನರ್ಜಿ, ಈ ಘಟನೆಯು ರಾಜ್ಯದ ಇತಿಹಾಸದಲ್ಲೇ ಅತ್ಯಂತ 'ಕರಾಳ ಅಧ್ಯಾಯ' ಎಂದು ಹೇಳಿದ್ದಾರೆ.

'ನಂದಿಗ್ರಾಮದ ನನ್ನ ಸೋದರ, ಸೋದರಿಯರ ಪ್ರೇರಣೆ ಹಾಗೂ ಗೌರವದ ಸಂಕೇತವಾಗಿ, ನಾನು ಬಂಗಾಳ ವಿಧಾನಸಭೆ ಚುನಾವಣೆಯಲ್ಲಿಈ ಐತಿಹಾಸಿಕ ಸ್ಥಳದಿಂದ ಸ್ಪರ್ಧಿಸುತ್ತಿದ್ದೇನೆ. ಇಲ್ಲಿಗೆ ಬಂದು ಶಾಹೀದ್ಕುಟುಂಬಗಳ ಜೊತೆಗೆ ಬಂಗಾಳ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುವುದು ನನಗೆ ಸಿಕ್ಕ ದೊಡ್ಡ ಗೌರವ' ಎಂದು ಹೇಳಿದ್ದಾರೆ.

'ನಂದಿಗ್ರಾಮದಲ್ಲಿ ಪ್ರಾಣ ತ್ಯಾಗ ಮಾಡಿದವರ ಸ್ಮರಣೆಗಾಗಿ ಪ್ರತಿವರ್ಷ ಮಾರ್ಚ್ 14ರಂದು 'ಕೃಷಿಕ ದಿವಸ'ವಾಗಿ ಆಚರಿಸಲಾಗುತ್ತದೆ. ಈ ದಿನದಂದು 'ಕೃಷಿಕ ರತ್ನ' ಪ್ರಶಸ್ತಿ ಪ್ರದಾನ ಮಾಡುತ್ತೇವೆ. ರೈತರು ನಮ್ಮ ಹೆಮ್ಮೆ, ನಮ್ಮ ಸರ್ಕಾರ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ' ಎಂದು ಹೇಳಿದ್ದಾರೆ.

'2007ರಲ್ಲಿ ಈ ದಿನದಂದು ನಂದಿಗ್ರಾಮದಲ್ಲಿ ಮುಗ್ಧ ಗ್ರಾಮಸ್ಥರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅನೇಕ ಮೃತದೇಹಗಳ ಗುರುತು ಸಿಗಲಿಲ್ಲ. ಇದು ರಾಜ್ಯದ ಇತಿಹಾಸದಲ್ಲೇ ಕರಾಳ ಅಧ್ಯಾಯ. ನಂದಿಗ್ರಾಮ ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡರಿಗೆ ನನ್ನ ನಮನಗಳು' ಎಂದು ಮಮತಾ ಬ್ಯಾನರ್ಜಿ ಉಲ್ಲೇಖಿಸಿದ್ದಾರೆ.

2007ರಲ್ಲಿ ಪೂರ್ವ ಮಿಡ್ನಾಪುರ ಜಿಲ್ಲೆಯ ನಂದಿಗ್ರಾಮವನ್ನು ವಿಶೇಷ ಆರ್ಥಿಕ ವಲಯವಾಗಿ ಘೋಷಿಸಿ ಭೂಸ್ವಾಧೀನಮಾಡುವುದರ ವಿರುದ್ಧ ಗ್ರಾಮಸ್ಥರು ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಬಳಿಕ ನಡೆದ ಗುಂಡಿನ ದಾಳಿಯಲ್ಲಿ ಹಲವರು ಮೃತಪಟ್ಟಿದ್ದರು.

ಏತನ್ಮಧ್ಯೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವ ಮಮತಾ ಬ್ಯಾನರ್ಜಿ, ಭಾನುವಾರ ಗಾಲಿಕುರ್ಚಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ. ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಕೆಲವು ಅಪರಿಚಿತರು ತಳ್ಳಿದ ಪರಿಣಾಮ ಕಾಲಿಗೆ ಗಾಯವಾಗಿದ್ದರಿಂದ ಮಮತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಮಮತಾ ಬ್ಯಾನರ್ಜಿ ವಿರುದ್ಧ ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಸ್ಪರ್ಧಿಸಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಿಂದ ಏಪ್ರಿಲ್ 29ರ ವರೆಗೆ ಒಟ್ಟು ಎಂಟು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 2ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT