ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ನೀತಿಗೆ ತರ್ಕ ಇದೆಯೇ: ಕೇಂದ್ರ ಸರ್ಕಾರಕ್ಕೆ 'ಸುಪ್ರೀಂ' ತರಾಟೆ

Last Updated 31 ಮೇ 2021, 22:12 IST
ಅಕ್ಷರ ಗಾತ್ರ

ನವದೆಹಲಿ : ಕೋವಿಡ್‌–19ರ ಲಸಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಸೋಮವಾರ ತರಾಟೆಗೆ ತೆಗೆದುಕೊಂಡಿದೆ. ಕೋವಿಡ್‌ ಲಸಿಕೆ ಹಾಕಿಸುವಿಕೆ, ಲಸಿಕೆ ಖರೀದಿ ನೀತಿ, ಕೇಂದ್ರ ಮತ್ತು ರಾಜ್ಯಗಳಿಗೆ ಭಿನ್ನ ದರ ನಿಗದಿ ಎಲ್ಲದಕ್ಕೆ ಸಂಬಂಧಿಸಿ ಕಠಿಣ ಪ್ರಶ್ನೆಗಳನ್ನು ಕೇಂದ್ರದ ಮುಂದಿಟ್ಟಿದೆ. ಹಿಂದೆಂದೂ ಕಂಡರಿಯದ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕಿದ್ದರೆ ನೀತಿ ನಿರೂಪಕರಿಗೆ ‘ತಳಮಟ್ಟದ ವಾಸ್ತವದ ಅರಿವಿರಬೇಕು’ ಎಂದಿದೆ.

ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ, ದೇಶದಾದ್ಯಂತ ಏಕರೂಪದ ದರದಲ್ಲಿ ಕೋವಿಡ್‌ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಿ. ಸಾಂಕ್ರಾಮಿಕದ ಸನ್ನಿವೇಶದಲ್ಲಿ ಹೊಂದಾಣಿಕೆ ಸಾಧ್ಯವಾಗುವಂತಹ ನೀತಿಯನ್ನು ರೂಪಿಸಿ ಎಂದು ಸರ್ಕಾರಕ್ಕೆ ಸಲಹೆ ಕೊಟ್ಟಿದೆ.

‘ನೀತಿ ನಿರೂಪಿಸುವವರು ನಾವಲ್ಲ. ಈ ಎಲ್ಲ ಸಮಸ್ಯೆಗಳು ಇವೆ ಎಂಬ ಆದೇಶವನ್ನು ಏಪ್ರಿಲ್‌ 30ರಂದು ನೀಡ
ಲಾಗಿದೆ. ನೀವು (ಸರ್ಕಾರ) ಹೊಂದಾಣಿಕೆ ಮನೋಭಾವ ತೋರಬೇಕು. ನಾವು ಕೇಂದ್ರ ಸರ್ಕಾರ, ನಾವು ಮಾಡಿದ್ದೇ ಸರಿ ಎಂಬ ಮನೋಭಾವ ಸಾಧ್ಯವಿಲ್ಲ. ಇದನ್ನು ನಿಭಾಯಿಸಲು ನಮ್ಮಲ್ಲಿ ಬಲವಾದ ವ್ಯವಸ್ಥೆ ಇದೆ’ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌, ಎಲ್‌.ಎನ್‌. ರಾವ್‌ ಮತ್ತು ಎಸ್‌. ರವೀಂದ್ರಭಟ್‌ ಅವರ ಪೀಠವು ಹೇಳಿದೆ.

‘ಯಾರನ್ನೇ ಟೀಕಿಸುವುದು ಅಥವಾ ಕಾಲೆಳೆಯುವುದು ನಮ್ಮ ಉದ್ದೇಶವಲ್ಲ. ವಿದೇಶಾಂಗ ಸಚಿವರು ಅಮೆರಿಕಕ್ಕೆ ಹೋಗಿ ಮಾತುಕತೆ ನಡೆಸಿದ್ದಾರೆ. ಪರಿಸ್ಥಿತಿಯು ಎಷ್ಟು ಕಷ್ಟಕರವಾಗಿದೆ ಎಂಬುದನ್ನು ಇದು ತೋರಿಸುತ್ತದೆ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರನ್ನು ಪೀಠವು ಶ್ಲಾಘಿಸಿದೆ.

ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಚಂದ್ರಚೂಡ್‌ ಅವರು ಕೇಂದ್ರದ ಲಸಿಕೆ ಖರೀದಿ ನೀತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು.

ಜಾಗತಿಕ ಟೆಂಡರ್‌ ಮೂಲಕ ಲಸಿಕೆ ಖರೀದಿಸಲು ಪಂಜಾಬ್‌ ಮತ್ತು ದೆಹಲಿ ಯತ್ನಿಸಿವೆ. ಬೃಹನ್‌ ಮುಂಬೈ ಮಹಾನಗರಪಾಲಿಕೆಗೂ ಬಿಡ್‌ಗಳು ಬಂದಿವೆ. ರಾಜ್ಯಗಳು ಅಥವಾ ನಗರಪಾಲಿಕೆಗಳು ನೇರವಾಗಿ ಲಸಿಕೆ ಖರೀದಿಸಬೇಕು ಎಂಬುದು ಸರ್ಕಾರದ ನೀತಿಯೇ? ಅಥವಾ ರಾಜ್ಯಗಳಿಗಾಗಿ ಕೇಂದ್ರ ಲಸಿಕೆ ಖರೀದಿ ಮಾಡಲಿದೆಯೇ? ಇದರ ಬಗ್ಗೆ ಸ್ಪಷ್ಟತೆ ಬೇಕು ಮತ್ತು ಅದರ ಹಿಂದಿನ ತರ್ಕ ಏನು ಎಂಬುದನ್ನು ಹೇಳಬೇಕು ಎಂದು ಪೀಠವು ಸೂಚಿಸಿದೆ.

‘ಇಂತಹ ವಿಚಾರಗಳಲ್ಲಿ ಸರ್ಕಾರದ ನೀತಿ ಏನು ಎಂಬುದರ ದಾಖಲೆಯನ್ನು ಈವರೆಗೆ ನಾವು ನೋಡಿಲ್ಲ. ಆ ಕಡತ
ಗಳನ್ನು ನಾವು ನೋಡಬೇಕಿದೆ. ನಮಗೆ ಇದರ ಹಿಂದಿನ ತರ್ಕ ಏನು ಎಂಬುದು ತಿಳಿಯಬೇಕು. ಕೇಂದ್ರವು ಕಡಿಮೆ ದರ
ದಲ್ಲಿ ಲಸಿಕೆ ಖರೀದಿಸುತ್ತಿದೆ. ಇತರರಿಗೆ ಬೇರೆ ದರಕ್ಕೆ ಲಸಿಕೆ ಮಾರಲು ತಯಾರಕರಿಗೆ ಸ್ವಾತಂತ್ರ್ಯ ಇದೆ. ಇದರ ಹಿಂದಿನ ತರ್ಕ ಏನು’ ಎಂದೂ ಪೀಠ ಪ್ರಶ್ನಿಸಿದೆ.

ಭಾರತವು ಒಕ್ಕೂಟ ವ್ಯವಸ್ಥೆ. ರಾಜ್ಯಗಳು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಬಿಡಲಾಗದು. ಕೇಂದ್ರವೇ ಲಸಿಕೆ ಖರೀದಿಸಿ ರಾಜ್ಯಗಳಿಗೆ ಹಂಚಬೇಕು ಎಂದು ಪೀಠ ಹೇಳಿದೆ.

ಈ ಎಲ್ಲ ವಿಚಾರಗಳ ಬಗ್ಗೆ ಎರಡು ವಾರಗಳಲ್ಲಿ‍ಪ್ರಮಾಣಪತ್ರ ಸಲ್ಲಿಸುವಂತೆ ಪೀಠವು ಸೂಚಿಸಿದೆ. ದೇಶದಲ್ಲಿ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಣೆಯಿಂದ ವಿಚಾರಣೆ ನಡೆಸುತ್ತಿದೆ.

ಆದೇಶ ಬೇಡ: ಕೋವಿಡ್‌ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದಕ್ಕಾಗಿ ವಿವಿಧ ದೇಶಗಳ ಮುಖ್ಯಸ್ಥರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯವು ಯಾವುದೇ ಆದೇಶ ನೀಡಬಾರದು. ಆದೇಶ ನೀಡಿದರೆ, ಲಸಿಕೆ ಖರೀದಿಗಾಗಿ ನಡೆಯುತ್ತಿರುವ ರಾಜತಾಂತ್ರಿಕ ಮತ್ತು ರಾಜಕೀಯ ಪ್ರಯತ್ನಗಳಿಗೆ ಹಿನ್ನಡೆ ಆಗಬಹುದು ಎಂದು ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

ಕೋವಿನ್‌ ನೋಂದಣಿ ಕಡ್ಡಾಯವೇಕೆ?

ಜನರು ಲಸಿಕೆ ಹಾಕಿಸಿಕೊಳ್ಳಬೇಕಿದ್ದರೆ ಕೋವಿನ್‌ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಿರುವುದು ಏಕೆ ಎಂದು ಕೇಂದ್ರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ‘ಡಿಜಿಟಲ್‌ ಇಂಡಿಯಾ’ದ ನಿಜವಾದ ಸ್ಥಿತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳದೆಯೇ ಈ ನಿಯಮ ಮಾಡಲಾಗಿದೆ. ನೀತಿ ನಿರೂಪಕರಿಗೆ ತಳಮಟ್ಟದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಅರಿವು ಇರಬೇಕು ಎಂದು ಪೀಠವು ಹೇಳಿದೆ.

‘ಡಿಜಿಟಲ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ ಎಂದು ಹೇಳುತ್ತಲೇ ಇದ್ದೀರಿ. ಆದರೆ, ಗ್ರಾಮೀಣ ಪ್ರದೇಶಗ
ಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಜಾರ್ಖಂಡ್‌ನ ಅನಕ್ಷರಸ್ಥ ಕಾರ್ಮಿಕನೊಬ್ಬ ರಾಜಸ್ಥಾನದಲ್ಲಿ ನೋಂದಣಿ ಮಾಡಿಕೊಳ್ಳು
ವುದು ಹೇಗೆ? ಈ ಡಿಜಿಟಲ್‌ ಅಂತರವನ್ನು ಹೇಗೆ ತುಂಬುವಿರಿ ಹೇಳಿ’ ಎಂದು ಸರ್ಕಾರವನ್ನು ಪೀಠವು ಪ್ರಶ್ನಿಸಿದೆ.

‘ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅದಕ್ಕೆ ಅನುಗುಣವಾಗಿ ನೀತಿಯನ್ನು ರೂಪಿಸಿ. ನಾವೇ ಮಾಡುವುದಾಗಿದ್ದರೆ 15–20 ದಿನ ಮೊದಲೇ ಇದನ್ನು ಸರಿ ಮಾಡುತ್ತಿದ್ದೆವು’ ಎಂದು ಪೀಠ ಹೇಳಿತು.

ಪ್ರತಿಯೊಬ್ಬರಿಗೂ ಎರಡನೇ ಡೋಸ್‌ ಲಸಿಕೆ ನೀಡಬೇಕಿರುವುದರಿಂದ ನೋಂದಣಿ ಕಡ್ಡಾಯ ಮಾಡುವುದು ಅನಿವಾರ್ಯವಾಗಿತ್ತು. ಗ್ರಾಮೀಣ ಪ್ರದೇಶದ ಸಮುದಾಯ ಕೇಂದ್ರಗಳಲ್ಲಿ ಲಸಿಕೆ ನೋಂದಣಿ ಮಾಡಲು ಸಿಬ್ಬಂದಿ ಇದ್ದಾರೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

ಇಂತಹ ಪ್ರಕ್ರಿಯೆ ಕಾರ್ಯಸಾಧ್ಯ ಎಂದು ಸರ್ಕಾರ ಭಾವಿಸಿದೆಯೇ ಎಂದು ಪ್ರಶ್ನಿಸಿದ ಪೀಠವು, ನೀತಿ ದಾಖಲಾತಿಯನ್ನು ಸಲ್ಲಿಸುವಂತೆ ಸೂಚಿಸಿತು.

ದೇಶದ್ರೋಹ ಕಾಯ್ದೆ ಪರಿಶೀಲನೆಗೆ ನಿರ್ಧಾರ: ಮಾಧ್ಯಮ ಹಕ್ಕುಗಳು ಮತ್ತು ವಾಕ್ ಸ್ವಾತಂತ್ರ್ಯವನ್ನು ಗಮನದಲ್ಲಿರಿಸಿಕೊಂಡು, ದೇಶದ್ರೋಹ ಕಾನೂನಿನ ವ್ಯಾಖ್ಯಾನವನ್ನು ಪರಿಶೀಲನೆಗೆ ಒಳಪಡಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ದೇಶದ್ರೋಹ: ಕೋರ್ಟ್‌ ವ್ಯಂಗ್ಯ

ಮಾಧ್ಯಮದ ವಿರುದ್ಧ ದೇಶದ್ರೋಹ ಪ್ರಕರಣಗಳನ್ನು ದಾಖಲಿಸುವ ಪ್ರವೃತ್ತಿ ಹೆಚ್ಚಳವಾಗಿರುವುದಕ್ಕೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಚಂದ್ರಚೂಡ್‌ ಅವರು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೋವಿಡ್‌ನಿಂದ ಸತ್ತವರ ಶವಗಳನ್ನು ನದಿಗಳಿಗೆ ಎಸೆಯುವ ದೃಶ್ಯಗಳನ್ನು ಪ್ರಸಾರ ಮಾಡಿದ ಸುದ್ದಿ ವಾಹಿನಿಗಳ ವಿರುದ್ಧ ‘ದೇಶದ್ರೋಹ’ ಕಾಯ್ದೆಯಡಿ ಪ್ರಕರಣ ದಾಖಲಾಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT