ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಪ್ರಯೋಗ: ಅಡ್ಡ ಪರಿಣಾಮದ ಗೊಂದಲ

Last Updated 29 ನವೆಂಬರ್ 2020, 19:34 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಲಸಿಕೆಯ ಮನುಷ್ಯನ ಮೇಲಿನ ಪ್ರಯೋಗದ ಸಂದರ್ಭದಲ್ಲಿ ಉಂಟಾದ ಅಡ್ಡ ಪರಿಣಾಮಗಳ ಎರಡು ಪ್ರಕರಣಗಳಲ್ಲಿ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರವು ಮೌನ ವಹಿಸಿದೆ. ಇದು ಭಾರತೀಯ ಔಷಧ ಮಹಾನಿಯಂತ್ರಕರ (ಡಿಸಿಜಿಐ) ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಲಸಿಕೆ ಪ್ರಾಯೋಗಿಕ ಪರೀಕ್ಷೆ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆಯೇ ಅನುಮಾನಗಳು ಮೂಡಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಚೆನ್ನೈನ ರಾಮಚಂದ್ರ ಇನ್ಸ್‌ಟಿಟ್ಯೂಟ್‌ ಆಫ್‌ ಹಯರ್‌ ಎಜುಕೇಷನ್‌ ಎಂಡ್‌ ರಿಸರ್ಚ್‌ನಲ್ಲಿ ಸೆರಂ ಇನ್ಸ್‌ಟಿಟ್ಯೂಟ್‌ ಪರವಾಗಿ ಕೋವಿಡ್‌ ಪ್ರಾಯೋಗಿಕ ಲಸಿಕೆ ಪಡೆದ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅಕ್ಟೋಬರ್‌ 1
ರಂದು ಅವರಿಗೆ ಲಸಿಕೆಯ ಮೊದಲ ಡೋಸ್‌ ನೀಡಲಾಗಿತ್ತು. ಹತ್ತು ದಿನಗಳ ಬಳಿಕ ಅವರಲ್ಲಿ ನರಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆ ವ್ಯಕ್ತಿಯಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಲು ಕೋವಿಡ್‌ ಲಸಿಕೆಯೇ ಕಾರಣ ಎಂದು ಚೆನ್ನೈನ ನರಶಾಸ್ತ್ರಜ್ಞರೊಬ್ಬರು ಹೇಳಿದ್ದಾರೆ. ಆ ವ್ಯಕ್ತಿಯು ಸೆರಂ ಇನ್ಸ್‌ಟಿಟ್ಯೂಟ್‌ಗೆ ನೋಟಿಸ್‌ ನೀಡಿದ್ದು, ₹5 ಕೋಟಿ ಪರಿಹಾರ ನೀಡಲು ಆಗ್ರಹಿಸಿದ್ದಾರೆ. ವ್ಯಕ್ತಿಯ ಅನಾರೋಗ್ಯಕ್ಕೆ ಲಸಿಕೆಯ ಜತೆ ಯಾವ ಸಂಬಂಧವೂ ಇಲ್ಲ ಎಂದು ಸೆರಂ ಸಂಸ್ಥೆಯು ಭಾನುವಾರ ಹೇಳಿದೆ. ಸಂಸ್ಥೆಗೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಕ್ಕಾಗಿ ₹100 ಕೋಟಿ ಪರಿಹಾರ ನೀಡಬೇಕು ಎಂದಿದೆ.

‘ಆರೋಪಗಳಲ್ಲಿ ಹುರುಳಿಲ್ಲ ಮತ್ತು ಅವು ದುರುದ್ದೇಶದಿಂದ ಕೂಡಿವೆ. ವ್ಯಕ್ತಿಯ ಅನಾರೋಗ್ಯದ ಬಗ್ಗೆ ಸಂಸ್ಥೆಗೆ ಸಹಾನುಭೂತಿ ಇದೆ. ಆದರೆ, ಅನಾರೋಗ್ಯಕ್ಕೆ ಕಾರಣ ಲಸಿಕೆ ಅಲ್ಲ’ ಎಂದು ಸೆರಂ ಸಂಸ್ಥೆಯು ಸ್ಪಷ್ಟಪಡಿಸಿದೆ.

‘ಈ ಆರೋಪದ ಸಂಬಂಧ ಪರಿಶೀಲನೆ ನಡೆಸಲಾಗಿದೆ.ಕ್ಲಿನಿಕಲ್ ಟ್ರಯಲ್‌ನಲ್ಲಿ ಪಡೆದ ಲಸಿಕೆಗೂ, ಆ ವ್ಯಕ್ತಿಯಲ್ಲಿ ಕಾಣಿಸಿಕೊಂಡ ನರಸಂಬಂಧಿ ಸಮಸ್ಯೆಯ ಮಧ್ಯೆ ಯಾವುದೇ ಸಂಬಂಧವಿಲ್ಲ’ ಎಂದು ಆರೋಗ್ಯ ಸಚಿವಾಲಯದ ಮೂಲಗಳು ಹೇಳಿವೆ.

ಆಸ್ಪತ್ರೆಯ ವೈದ್ಯಕೀಯ ತಂಡವು ಈ ಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ಏಳು ದಿನಗಳ ಒಳಗೇ ಡಿಸಿಜಿಐಗೆ ನೀಡಿದೆ. ‘ಆಸ್ಪತ್ರೆಯ ನೈತಿಕ ಸಮಿತಿಯು ನಡೆಸಿರುವ ಪ್ರಾಥಮಿಕ ತನಿಖೆಯ ವರದಿಯಲ್ಲಿ ಲಸಿಕೆ ಮತ್ತು ವ್ಯಕ್ತಿಯಲ್ಲಿ ಕಾಣಿಸಿಕೊಂಡಿರುವ ಸಮಸ್ಯೆ ಮಧ್ಯೆ ಯಾವುದೇ ಸಂಬಂಧ ಕಂಡುಬಂದಿಲ್ಲ. ಡಿಸಿಜಿಐ ಆ ತನಿಖೆಯ ವರದಿಯನ್ನು ಪರಿಶೀಲಿಸಿದೆ. ಶೀಘ್ರವೇ ತನ್ನ ವರದಿಯನ್ನು ನೀಡಲಿದೆ. ಅದನ್ನು ಐಸಿಎಂಆರ್ ಮತ್ತು ಸೆರಂ ಇನ್‌ಸ್ಟಿಟ್ಯೂಟ್‌ಗೆ ನೀಡಲಾಗುತ್ತದೆ’ ಎಂದು ಐಸಿಎಂಆರ್‌ ಹೇಳಿದೆ.

ಕೋವಿಡ್‌ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗಿದೆ ಎಂದು ಹೇಳಲಾದ ಎರಡನೇ ಪ್ರಕರಣ ಇದಾಗಿದೆ. ಭಾರತ್ ಬಯೋಟೆಕ್‌ನ ಲಸಿಕೆಯಿಂದ ಅಡ್ಡಪರಿಣಾಮ ಆಗಿದೆ ಎಂಬ ಬಗ್ಗೆ ಆಗಸ್ಟ್‌ನಲ್ಲಿ ವರದಿಯಾಗಿತ್ತು. ‘ಆಗಸ್ಟ್‌ನಲ್ಲಿ ಒಂದನೇ ಹಂತದ ಕ್ಲಿನಿಕಲ್ ಟ್ರಯಲ್‌ ನಡೆಸುತ್ತಿರುವಾಗ ಅಡ್ಡಪರಿಣಾಮ ಕಾಣಿಸಿಕೊಂಡಿತ್ತು. ಅದಾದ 24 ಗಂಟೆಗಳ ಒಳಗೇ ಅದನ್ನು, ಡಿಸಿಜಿಐ ಗಮನಕ್ಕೆ ತರಲಾಗಿತ್ತು. ತನಿಖೆಯೂ ನಡೆದಿತ್ತು. ಆದರೆ ಲಸಿಕೆ ಮತ್ತು ಅಡ್ಡಪರಿಣಾಮದ ಮಧ್ಯೆ ಯಾವುದೇ ಸಂಬಂಧವಿಲ್ಲ ಎಂಬುದು ಗೊತ್ತಾಯಿತು’ ಎಂದು ಭಾರತ್ ಬಯೋಟೆಕ್ ಹೇಳಿಕೆ ನೀಡಿತ್ತು.

ಆದರೆ ಡಿಸಿಜಿಐ ಈ ಬಗ್ಗೆ ಮೌನವಹಿಸಿತ್ತು. ಯಾವುದೇ ಹೇಳಿಕೆ ನೀಡಿರಲಿಲ್ಲ.

ಆಸ್ಟ್ರಾಜೆನಿಕಾ ಕಂಪನಿಯ ಲಸಿಕೆಯ ಕ್ಲಿನಿಕಲ್ ಟ್ರಯಲ್‌ ವೇಳೆ ಬ್ರಿಟನ್‌ನ ಸ್ವಯಂಸೇವಕರಲ್ಲಿ ಅಡ್ಡಪರಿಣಾಮ ಕಾಣಿಸಿಕೊಂಡಾಗ, ಭಾರತದಲ್ಲಿ ಈ ಲಸಿಕೆಯ ಕ್ಲಿನಿಕಲ್ ಟ್ರಯಲ್‌ ಅನ್ನು ಸ್ಥಗಿತಗೊಳಿಸಿ ಡಿಸಿಜಿಐ ಆದೇಶ ನೀಡಿತ್ತು. ಒಂದು ವಾರದ ನಂತರ ಕ್ಲಿನಿಕಲ್ ಟ್ರಯಲ್ ಮತ್ತೆ ಆರಂಭವಾಗಿತ್ತು. ಆದರೆ ಭಾರತದಲ್ಲೇ ಇಂತಹ ಪ್ರಕರಣಗಳು ವರದಿಯಾದಾಗ, ಡಿಸಿಜಿಐ ಮೌನವಹಿಸಿದೆ ಎಂದು ವಿಜ್ಞಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT