ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಲಕ್ಷ ದಾಟಿದ ಮೃತರ ಸಂಖ್ಯೆ

Last Updated 2 ಅಕ್ಟೋಬರ್ 2020, 19:37 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್‌–19ರಿಂದಾಗಿ ಸತ್ತವರ ಸಂಖ್ಯೆಯು ಒಂದು ಲಕ್ಷದ ಗಡಿಯನ್ನು ಶುಕ್ರವಾರ ದಾಟಿದೆ. ಕೋವಿಡ್‌ನಿಂದಾಗಿ ಅತಿ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಈಗ ಮೂರನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ ಮತ್ತು ಬ್ರೆಜಿಲ್‌ ಇವೆ.

ಒಟ್ಟಾರೆ ಸತ್ತವರ ಪ್ರಮಾಣದಲ್ಲಿ ಮೂರನೇ ಒಂದರಷ್ಟು ಮಂದಿ (33,000) ಸೆಪ್ಟೆಂಬರ್‌ ತಿಂಗಳೊಂದರಲ್ಲೇ ಸತ್ತಿದ್ದಾರೆ. ಈ ತಿಂಗಳಲ್ಲಿ ದೇಶದಲ್ಲಿ ಪ್ರತಿದಿನ ಸರಾಸರಿ ಒಂದು ಸಾವಿಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ 26 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ.

‘ಭಾರತವು ಸೆಪ್ಟೆಂಬರ್‌ 14–16ರ ವೇಳೆಗೆ ಕೋವಿಡ್‌ ಸೋಂಕಿನ ಗರಿಷ್ಠ ಮಟ್ಟವನ್ನು ತಲುಪಿರಬಹುದು. ಇದಾದ ನಂತರ ಸೋಂಕಿನ ಪ್ರಮಾಣ ಕಡಿಮೆಯಾಗಿದೆ’ ಎಂದು ತಜ್ಞರು ಹೇಳಿದ್ದಾರೆ. ಚೆನ್ನೈನ ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆಯ ಅಂಕಿ ಅಂಶಗಳು ಸಹ ಭಾರತದಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿರುವುದನ್ನು ಸೂಚಿಸಿವೆ.

ಪ್ರತಿ ದಿನದ ಸರಾಸರಿ ಸೋಂಕಿತರ ಸಂಖ್ಯೆಯು ಸೆಪ್ಟೆಂಬರ್‌ 16ರ ವೇಳೆಗೆ 93,199 ಇದ್ದರೆ, ಅಕ್ಟೋಬರ್‌ 1ರಂದು ಅದು 82,214 ಇತ್ತು. ಸೋಂಕು ಆರಂಭವಾದಂದಿನಿಂದ ಇದೇ ಮೊದಲ ಬಾರಿಗೆ ಸಂಖ್ಯೆ ಇಳಿಮುಖವಾಗಿರುವುದು ಕಾಣಿಸಿದೆ.

‘ಸೆಪ್ಟೆಂಬರ್‌ ಮೂರನೇ ವಾರದಲ್ಲಿ ರಾಷ್ಟ್ರದ ಒಟ್ಟಾರೆ ಸೋಂಕಿನ ಪ್ರಮಾಣವು ಗರಿಷ್ಠ ಮಟ್ಟಕ್ಕೆ ತಲುಪಿದೆ. ಆದರೂ, ದೇಶದೊಳಗೆ ಕೆಲವು ಪ್ರದೇಶಗಳಲ್ಲಿ ಸೋಂಕು ಇನ್ನೂ ಉತ್ತುಂಗಕ್ಕೆ ತಲುಪದಿರಬಹುದು’ ಎಂದು ವೆಲ್ಲೂರ್‌ನ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜಿನ ಸೋಂಕುರೋಗ ತಜ್ಞ ಟಿ. ಜಾಕೊಬ್‌ ಜಾನ್‌ ಹೇಳಿದ್ದಾರೆ.

‘ಸೋಂಕಿನ ಪ್ರಮಾಣ ಕಡಿಮೆಯಾಗಿರುವ ಮಾತ್ರಕ್ಕೆ ಕೋವಿಡ್‌ ಕೊನೆಗೊಂಡಿತು ಎಂದು ಭಾವಿಸುವಂತಿಲ್ಲ. ಸಾವಿನ ಪ್ರಮಾಣ ಹೆಚ್ಚುವ ಅಪಾಯ ಇನ್ನೂ ಇದ್ದೇ ಇದೆ. ಆದ್ದರಿಂದ ಸುರಕ್ಷಿತವಾಗಿರಲು ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಅಗತ್ಯ’ ಎಂದು ದೆಹಲಿಯ ಜಾರ್ಜ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಗ್ಲೋಬಲ್‌ ಹೆಲ್ತ್‌ ಸಂಸ್ಥೆಯ ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞ ಒಮನ್‌ ಜಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT