ಭಾನುವಾರ, ಜೂನ್ 20, 2021
20 °C

ಕೋವಿಡ್‌–19: ದಕ್ಷಿಣ ರಾಜ್ಯಗಳಲ್ಲೇ ಹೆಚ್ಚು ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಳೆದ ಎರಡು ವಾರಗಳಿಂದ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲೇ ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ.

ಮೇ ತಿಂಗಳ ಆರಂಭದಲ್ಲಿ ಪ್ರತಿ ದಿನ ಪತ್ತೆಯಾಗುತ್ತಿದ್ದ ಕೋವಿಡ್‌–19 ಹೊಸ ಪ್ರಕರಣಗಳಲ್ಲಿ ಶೇಕಡ 30ರಷ್ಟು ದಕ್ಷಿಣ ರಾಜ್ಯಗಳಲ್ಲಿ ದೃಢಪಟ್ಟಿದ್ದವು. ಆದರೆ, ಕಳೆದ ಮೂರು ದಿನಗಳಿಂದ ಇದು ಶೇಕಡ 40ಕ್ಕೆ ಏರಿಕೆಯಾಗಿದೆ.

ಸೋಮವಾರ, ಶೇಕಡ 42ಕ್ಕೂ ಹೆಚ್ಚು ಪ್ರಕರಣಗಳು ಈ ನಾಲ್ಕು ರಾಜ್ಯಗಳಲ್ಲೇ ಪತ್ತೆಯಾಗಿವೆ. ತಮಿಳುನಾಡಿನಲ್ಲಿ ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ತಮಿಳುನಾಡಿನಲ್ಲಿ ಸೋಮವಾರ 33 ಸಾವಿರಕ್ಕೂ ಹೆಚ್ಚು ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ 34 ಸಾವಿರ ಪ್ರಕರಣಗಳು ದೃಢಪಟ್ಟಿವೆ.

ನಾಲ್ಕು ದಕ್ಷಿಣ ರಾಜ್ಯಗಳ ಸುಮಾರು 100 ಜಿಲ್ಲೆಗಳಲ್ಲಿ ಶೇಕಡ 10ಕ್ಕೂ ಹೆಚ್ಚು ಪಾಸಿಟಿವಿಟಿ ದರ ವರದಿಯಾಗಿದೆ. ಇವುಗಳ ಪೈಕಿ ಎಂಟು ಜಿಲ್ಲೆಗಳಲ್ಲಿ ಶೇಕಡ 40ಕ್ಕೂ ಹೆಚ್ಚು ಪಾಸಿಟಿವಿಟಿ ದರ ವರದಿಯಾಗಿದೆ. ಇವುಗ
ಳಲ್ಲಿ ಕರ್ನಾಟಕದ ಬಳ್ಳಾರಿ (ಶೇಕಡ 47.2), ಉತ್ತರ ಕನ್ನಡ (ಶೇಕಡ 46.1), ಮೈಸೂರು (ಶೇಕಡ 44.7), ಹಾಸನ (ಶೇಕಡ 42.6) ಮತ್ತು ಶಿವಮೊಗ್ಗ (ಶೇಕಡ 42.1) ಸೇರಿವೆ.

ಬಹುತೇಕ ರಾಜ್ಯಗಳಲ್ಲಿ ಪರೀಕ್ಷೆ ನಡೆಸುವುದನ್ನು ಕಡಿಮೆಗೊಳಿಸುತ್ತಿರುವುದಕ್ಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

‘ದಕ್ಷಿಣ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ತಡೆಯಬೇಕು. ಇದಕ್ಕಾಗಿ ಆರೋಗ್ಯ
ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಬೇಕು. ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಆಗ ಮಾತ್ರ ನಿಜವಾದ ಪರಿಸ್ಥಿತಿ ಗೊತ್ತಾಗುತ್ತದೆ’ ಎಂದು ಸಾರ್ವಜನಿಕ ನೀತಿ ಮತ್ತು ಆರೋಗ್ಯ ವ್ಯವಸ್ಥೆಯ ತಜ್ಞ ಚಂದ್ರಕಾಂತ್‌ ಲಹರಿಯಾ ಅಭಿಪ್ರಾಯಪಟ್ಟಿದ್ದಾರೆ.

‘ಯಾವ ರಾಜ್ಯವು ಸೋಂಕು ನಿಯಂತ್ರಿಸಿದೆ ಎನ್ನುವುದು ತಿಳಿಯುವುದು ಕಷ್ಟಸಾಧ್ಯ. ಬಹುತೇಕ ರಾಜ್ಯಗಳಲ್ಲಿ ಪರೀಕ್ಷೆ ನಡೆಸುವುದನ್ನು ಕಡಿಮೆಗೊಳಿಸಲಾಗಿದೆ’ ಎಂದು ತಜ್ಞರಾದ ಗಿರಿಧರ್‌ ಬಾಬು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು