ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ರಿಯ ಪ್ರಕರಣಗಳು: ದೇಶದ ಮಹಾನಗರಗಳ ಪೈಕಿ ರಾಜಧಾನಿ ಬೆಂಗಳೂರಿಗೆ 2ನೇ ಸ್ಥಾನ

Last Updated 14 ಸೆಪ್ಟೆಂಬರ್ 2020, 4:00 IST
ಅಕ್ಷರ ಗಾತ್ರ

ನವದೆಹಲಿ: ರಾಜಧಾನಿ ಬೆಂಗಳೂರಿನಲ್ಲಿ 40 ಸಾವಿರಕ್ಕೂ ಹೆಚ್ಚಿನ ಸಕ್ರಿಯ ಪ್ರಕರಣಗಳಿದ್ದು,ಅತೀ ಹೆಚ್ಚಿನ ಸಕ್ರಿಯ ಪ್ರಕರಣಗಳನ್ನು ಹೊಂದಿದ ದೇಶದ ಮಹಾನಗರಗಳ ಪಟ್ಟಿಯಲ್ಲಿ ಮುಂಬೈ ನಗರವನ್ನು ಹಿಂದಿಕ್ಕಿರುವ ಬೆಂಗಳೂರು 2ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಇತ್ತೀಚಿನ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 3,552 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ 1,67,183 ಜನರಿಗೆ ಸೋಂಕು ತಗುಲಿದೆ. ಈ ಪೈಕಿ 40,929 ಸಕ್ರಿಯ ಪ್ರಕರಣಗಳು ನಗರದಲ್ಲಿವೆ.

ಪುಣೆ ಮತ್ತು ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, 2,32,840 ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದ ಪುಣೆಯಲ್ಲಿ, 77,624 ಸಕ್ರಿಯ ಪ್ರಕರಣಗಳೊಂದಿಗೆ ದೇಶದ ನಗರಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಎರಡನೇ ಸ್ಥಾನದಲ್ಲಿ ಬೆಂಗಳೂರು ನಗರವಿದ್ದು, 30,271 ಸಕ್ರಿಯ ಪ್ರಕರಣಗಳೊಂದಿಗೆ ಮುಂಬೈ ಮೂರನೇ ಸ್ಥಾನದಲ್ಲಿದೆ. 28,862 ಸಕ್ರಿಯ ಪ್ರಕರಣಗಳೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯು ನಾಲ್ಕನೇ ಸ್ಥಾನದಲ್ಲಿದೆ.

ಬೆಂಗಳೂರು: ಹೆಚ್ಚಿನ ಸೋಂಕಿತರ ಸಂಖ್ಯೆಯಲ್ಲಿ 4ನೇ ಸ್ಥಾನ

ದೇಶದ ಮಹಾನಗರಗಳ ಪೈಕಿ ಅತಿ ಹೆಚ್ಚು ಸೋಂಕಿತ ಪ್ರಕರಣಗಳನ್ನು ಹೊಂದಿದ ನಗರಗಳ ಪೈಕಿ ಪುಣೆಯೇ ಮೊದಲ ಸ್ಥಾನ ಪಡೆದಿದ್ದು, ಒಟ್ಟಾರೆ 2,32,840 ಪ್ರಕರಣಗಳು ದೃಢಪಟ್ಟಿವೆ. 2,18,304 ಪ್ರಕರಣಗಳೊಂದಿಗೆ ದೆಹಲಿಯು ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಮುಂಬೈ ನಗರವಿದ್ದು, ಸೋಮವಾರದ ವೇಳೆಗೆ 1,69,693 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 1,30,918 ಜನರು ಗುಣಮುಖರಾಗಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಒಟ್ಟಾರೆ 1,67,183 ಸೋಂಕು ಪ್ರಕರಣಗಳಿವೆ. ಮಹಾರಾಷ್ಟ್ರದ ಥಾಣೆಯೇ ಐದನೇ ಸ್ಥಾನದಲ್ಲಿದ್ದು, 1,56,916 ಸೋಂಕು ಪ್ರಕರಣಗಳು ವರದಿಯಾಗಿವೆ.

ಕೋವಿಡ್- 19 ಪರಿಸ್ಥಿತಿಯು ಒಮ್ಮೆ ಬೆಂಗಳೂರಿನಲ್ಲಿ ನಿಯಂತ್ರಣದಲ್ಲಿತ್ತು. ಆದರೆ ಆಗಸ್ಟ್‌ನಿಂದೀಚೆಗೆ ನಗರದಲ್ಲಿ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಅಧಿಕಾರಿಗಳು ಪ್ರಯತ್ನಿಸುತ್ತಿರುವಾಗಲೇ ಸೋಂಕು ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಏರಿಕೆಯಾಗಿವೆ. ಇತರ ಪ್ರಮುಖ ನಗರಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದರೆ ಬೆಂಗಳೂರು ಮಾತ್ರ ಕರ್ನಾಟಕದ ಹಾಟ್‌ಸ್ಪಾಟ್‌ ಆಗಿ ಹೊರಹೊಮ್ಮಿದೆ.

ಬೆಂಗಳೂರಿಗಿಂತ ಮುಂಬೈನಲ್ಲಿ ಹೆಚ್ಚಿನ ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮುಂಬೈನಲ್ಲಿ 1.30 ಲಕ್ಷ ಜನರು ಬಿಡುಗಡೆಯಾಗಿದ್ದರೆ, ಬೆಂಗಳೂರಿನಲ್ಲಿ 1.23 ಲಕ್ಷ ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಚೇತರಿಕೆ ಪ್ರಮಾಣ ಶೇ 74ರಷ್ಟಿದೆ. ಈ ಮಧ್ಯೆ ಮುಂಬೈಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಡಿಮೆ ಸಾವುಗಳು ದಾಖಲಾಗಿವೆ. ಮುಂಬೈನಲ್ಲಿ 8,150 ಜನರು ಸಾವಿಗೀಡಾಗಿದ್ದರೆ ಬೆಂಗಳೂರಿನಲ್ಲಿ ಈವರೆಗೆ ಕೇವಲ 2,391 ಜನರಷ್ಟೇ ಪ್ರಾಣ ಕಳೆದುಕೊಂಡಿದ್ದಾರೆ. ಚೆನ್ನೈನಲ್ಲಿ 2,900 ಜನರು ಮೃತಪಟ್ಟಿದ್ದಾರೆ.

ಪ್ರಮುಖ ನಗರಗಳ ಸಕ್ರಿಯ ಪ್ರಕರಣಗಳು ಮತ್ತು ಸೋಂಕು ಪ್ರಕರಣ

ನಗರ ಸಕ್ರಿಯ ಪ್ರಕರಣ ಒಟ್ಟು ಪ್ರಕರಣ
ಪುಣೆ 77,624 2,32,840
ಬೆಂಗಳೂರು 40,929 1,67,183
ಮುಂಬೈ 30,271 1,69,693
ದೆಹಲಿ 28,862 2,18,304
ಚೆನ್ನೈ 10,396 1,48,584

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT