ಸೋಮವಾರ, ಜೂನ್ 21, 2021
29 °C
ಸಮಸ್ಯೆ ಹಂಚಿಕೊಂಡವರ ಮೇಲೆ ಕ್ರಮ ಕೈಗೊಂಡರೆ ಹುಷಾರ್‌

ಜನರ ದನಿ ದಮನ ಮಾಡಬೇಡಿ: ಸರ್ಕಾರಕ್ಕೆ ‘ಸುಪ್ರೀಂ’ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನೆರವಿಗೆ ಸಂಬಂಧಿಸಿ ಜನರು ಕೋರಿಕೆ ಮುಂದಿಟ್ಟಾಗ ಆ ದನಿಯನ್ನು ಸರ್ಕಾರವು ದಮನಿಸಬಾರದು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ. ಅಂತರ್ಜಾಲ ದಲ್ಲಿ ನೆರವು ಕೇಳಿದಾಗ ಅದು ವದಂತಿ ಹರಡುವಿಕೆ ಎಂದು ಜನರನ್ನು ಸುಮ್ಮನಾಗಿಸಬಾರದು ಎಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ರಾಜ್ಯಗಳ ಪೊಲೀಸ್‌ ಮುಖ್ಯಸ್ಥರಿಗೆ ಕೋರ್ಟ್‌ ಹೇಳಿದೆ. 

‘ನಾವು ಇದನ್ನು ಸ್ಪಷ್ಟವಾಗಿ ಹೇಳಲು ಬಯಸುತ್ತೇವೆ. ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಅಂತಹ ಮಾಹಿತಿಯ ಹರಿವನ್ನು ತಡೆಯುವ ಕೆಲಸಮಾಡಬೇಡಿ. ಹಾಸಿಗೆ ಅಥವಾ ಆಮ್ಲಜನಕ ಕೊರತೆಯನ್ನು ಹೇಳಿಕೊಂಡವರಿಗೆ ಪೊಲೀಸರು ಕಿರುಕುಳ ನೀಡಿದರೆ ಅವರ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ’ ಎಂದು ಪೀಠ ಎಚ್ಚರಿಸಿದೆ. 

‘ಈ ಮಾಹಿತಿಯು ಎಲ್ಲ ಪೊಲೀಸ್‌ ಸಿಬ್ಬಂದಿಗೂ ತಲುಪಲಿ. ಮಾಹಿತಿಯು ಮುಕ್ತವಾಗಿ ಹರಿಯಲಿ. ನಮ್ಮ ಪೌರರ ಧ್ವನಿಯನ್ನು ಆಲಿಸೋಣ. ಅವರ ಧ್ವನಿಯನ್ನು ಅದುಮಿಡುವ ಕೆಲಸ ಬೇಡ’ ಎಂದು ಪೀಠವು ಸ್ಪಷ್ಟಪಡಿಸಿದೆ. 

ಸಾಮಾಜಿಕ ಜಾಲತಾ‌ಣಗಳಲ್ಲಿ ನೆರವಿನ ಕೋರಿಕೆಯನ್ನು ತಡೆಯುವುದು ಸೇರಿದಂತೆ ಮಾಹಿತಿಯ ಮುಕ್ತ ಹರಿವಿಗೆ ಅಡ್ಡಿ ಪಡಿಸುವ ಯಾವುದೇ ಕ್ರಮವನ್ನು ನ್ಯಾಯಾಂಗನಿಂದನೆಯಾಗಿ ಪರಿಗಣಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠವು ರವಾನಿಸಿದೆ. 

ಸಾಮಾಜಿಕ ಜಾಲತಾಣದಲ್ಲಿ ಹುಸಿ ಸಂದೇಶ ಹರಿಬಿಟ್ಟವರ ಮೇಲೆ ರಾಷ್ಟ್ರೀಯ ಭದ್ರತೆ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನವು ಮಹತ್ವ ಪಡೆದಿದೆ. 

ಕೋವಿಡ್‌–19 ನಿರ್ವಹಣೆಗೆ ರಾಷ್ಟ್ರೀಯ ನೀತಿ ರೂಪಿಸಬೇಕು ಎಂಬ ವಿಚಾರವನ್ನು ಪೀಠವು ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡು ವಿಚಾರಣೆ ನಡೆಸುತ್ತಿದೆ. ವೈದ್ಯಕೀಯ ಆಮ್ಲಜನಕಕ್ಕೆ ಹೆಚ್ಚಿದ ಬೇಡಿಕೆ, ಅತಿ ಹೆಚ್ಚು ಬಾಧಿತ ರಾಜ್ಯಗಳಿಗೆ ಹೆಚ್ಚಿನ ಹಂಚಿಕೆ, ಪೂರೈಕೆ ವ್ಯವಸ್ಥೆ ಮೇಲೆ ನಿಗಾದಂತಹ ವಿಷಯಗಳು ವಿಚಾರಣೆಗೆ ಒಳಪಟ್ಟಿವೆ. ಇಂತಹ ವಿಚಾರಗಳಲ್ಲಿ ಸರ್ಕಾರಕ್ಕೆ ಕಠಿಣವಾದ ಹಲವು ಪ್ರಶ್ನೆಗಳನ್ನು ಪೀಠವು ಕೇಳಿದೆ.

ವೈದ್ಯರು ಮತ್ತು ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಕೂಡ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದ ಪರಿಸ್ಥಿತಿ ಇದೆ. 70 ವರ್ಷಗಳಿಂದ ಕಟ್ಟಿರುವ ಆರೋಗ್ಯ ರಕ್ಷಣಾ ವ್ಯವಸ್ಥೆ ಈಗ ಸಾಲದಾಗಿದೆ, ಪರಿಸ್ಥಿತಿ ಕರಾಳವಾಗಿದೆ ಎಂದೂ ಪೀಠವು ಅಭಿಪ್ರಾಯಪಟ್ಟಿದೆ. 

ರಾಷ್ಟ್ರ ರಾಜಧಾನಿಯ ಕೋವಿಡ್‌ ಸ್ಥಿತಿಗೆ ಸಂಬಂಧಿಸಿ ದೆಹಲಿ ಸರ್ಕಾರವನ್ನು ಪೀಠವು ತರಾಟೆಗೆ ತೆಗೆದುಕೊಂಡಿದೆ. ರಾಜಕೀಯ ಕಚ್ಚಾಟ ಬಿಟ್ಟು ಕೇಂದ್ರದಜತೆಗೆ ಸಹಕರಿಸಿ ಎಂದು ಹೇಳಿದೆ. ‘ರಾಜಕೀಯವು ಚುನಾವಣೆಗೆ ಸೀಮಿತವಾಗಲಿ. ಈಗಿನದ್ದು ಮಾನವೀಯ ಬಿಕ್ಕಟ್ಟು. ಪ್ರತಿಯೊಬ್ಬರ ಜೀವದ ಬಗ್ಗೆಯೂ ಗಮನ ಹರಿಸಬೇಕಿದೆ. ನಮ್ಮ ಈ ಸಂದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಇರುವವರಿಗೆ ತಲುಪಿಸಿ, ಅವರು ರಾಜಕೀಯ ಬಿಟ್ಟು ಕೇಂದ್ರದ ಜತೆಗೆ ಮಾತಾಡಲಿ’ ಎಂದು ಪೀಠ ತಿಳಿಸಿತು. 

ಪೀಠ ಹೇಳಿದ್ದೇನು?
* ಹಾಸ್ಟೆಲ್‌ಗಳು, ದೇವಾಲಯಗಳು, ಚರ್ಚ್‌ ಮತ್ತು ಇಂತಹ ಇತರ ಪ್ರದೇಶಗಳನ್ನು ಕೋವಿಡ್‌ ಆರೈಕೆ ಕೇಂದ್ರಗಳಾಗಿಸಿ
*ಆರೋಗ್ಯ ಕ್ಷೇತ್ರವು ಕುಸಿಯುವ ಹಂತಕ್ಕೆ ಬಂದಿದೆ. ನಿವೃತ್ತ  ವೈದ್ಯರು ಮತ್ತು ಅಧಿಕಾರಿಗಳನ್ನು ಮತ್ತೆ ಕರ್ತವ್ಯಕ್ಕೆ ಬಳಸಿಕೊಳ್ಳಿ
*ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ವಿಷಯದಲ್ಲಿ ಮಾರ್ಗಸೂಚಿಯನ್ನು ರೂಪಿಸಲಾಗಿದೆಯೇ?
*ರೆಮ್‌ಡಿಸಿವಿರ್‌ ಸೇರಿದಂತೆ ಅಗತ್ಯ ಔಷಧಗಳ ತಯಾರಿಕೆಗೆ ಹಲವು ತಯಾರಕರಿಗೆ ಪರವಾನಗಿ ನೀಡಿ
*ವಿವರವಾದ ಆದೇಶ ಶನಿವಾರ ಪ್ರಕಟವಾಗಲಿದೆ

‘ಎಲ್ಲರಿಗೂ ಉಚಿತ ಲಸಿಕೆ ಕೊಡಿ’
ಶೇಕಡ ನೂರರಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರವೇ ಖರೀದಿಸಿ, ರಾಜ್ಯಗಳಿಗೆ ಸಮಾನವಾಗಿ ಹಂಚಿಲ್ಲ ಏಕೆ ಎಂದು ಪೀಠವು ಪ್ರಶ್ನಿಸಿದೆ. ಬಡ ಜನರು ಹಣ ಕೊಟ್ಟು ಲಸಿಕೆ ಖರೀದಿಸಲು ಕಷ್ಟವಾಗಬಹುದು. ಹಾಗಾಗಿ, ಕೇಂದ್ರ ಸರ್ಕಾರವು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಮಾದರಿಯಲ್ಲಿ ಲಸಿಕೆ ಅಭಿಯಾನ ನಡೆಸಬೇಕು ಎಂದು ಪೀಠವು ಹೇಳಿದೆ.  ಪರಿಶಿಷ್ಟ ಜಾತಿ, ಪಂಗಡಗಳ ಜನರು, ಬಡವರು ಏನು ಮಾಡಬೇಕು? ಅವರು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕೇ ಎಂದು ಪ್ರಶ್ನಿಸಿದೆ. ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡುವ ದಿಸೆಯಲ್ಲಿ ಸರ್ಕಾರ ಯೋಚಿಸಬೇಕು ಎಂಬ ಸಲಹೆಯನ್ನೂ ಕೊಟ್ಟಿದೆ. 

‘ಲಸಿಕೆಗೆ ಭಿನ್ನ ದರವೇಕೆ?’
ಕೇಂದ್ರ ಮತ್ತು ರಾಜ್ಯಗಳಿಗೆ ಲಸಿಕೆಗೆ ಪ್ರತ್ಯೇಕ ದರ ನಿಗದಿ ಮಾಡಿರುವುದು ಏಕೆ ಎಂದು ಪೀಠವು ಪ್ರಶ್ನಿಸಿದೆ. ಲಸಿಕೆ ತಯಾರಿಸುವ ಕಂಪನಿಗಳಿಗೆ ಕೇಂದ್ರವು ನೀಡಿದ ಹಣ ಎಷ್ಟು ಎಂಬುದನ್ನು ತಿಳಿಸುವಂತೆಯೂ ಪೀಠ ಹೇಳಿದೆ. ‘ಎಲ್ಲ ವಿಚಾರಗಳನ್ನೂ ತಯಾರಕರಿಗೆ ಬಿಟ್ಟುಬಿಡಬೇಡಿ. ನಿಮ್ಮ ಅಧಿಕಾರ ಬಳಸಿ. ಲಸಿಕೆ ತಯಾರಿಕೆಗೆ ಹೆಚ್ಚುವರಿ ಸೌಲಭ್ಯ ಸೃಷ್ಟಿಸಿ’ ಎಂದು ಪೀಠವು ಸೂಚನೆ ನೀಡಿದೆ. 

ಮೌಖಿಕ ಅಭಿಪ್ರಾಯ ಪ್ರಸಾರಕ್ಕೆ ತಡೆ ಸಾಧ್ಯವಿಲ್ಲ: ಮದ್ರಾಸ್‌ ಹೈಕೋರ್ಟ್‌
ಚೆನ್ನೈ:
ನ್ಯಾಯಮೂರ್ತಿಗಳು ವಿಚಾರಣೆ ಸಂದರ್ಭದಲ್ಲಿ ತನ್ನ ವಿರುದ್ಧ ವ್ಯಕ್ತಪಡಿಸುವ ಮೌಖಿಕ ಅಭಿಪ್ರಾಯಗಳು ಮಾಧ್ಯಮದಲ್ಲಿ ವರದಿ ಆಗುವುದಕ್ಕೆ ತಡೆ ಕೊಡಬೇಕು ಎಂಬ ಚುನಾವಣಾ ಆಯೋಗದ ಕೋರಿಕೆಯನ್ನು ಮದ್ರಾಸ್‌ ಹೈಕೋರ್ಟ್‌ ತಳ್ಳಿ ಹಾಕಿದೆ. 

ದೇಶದಲ್ಲಿ ಕೋವಿಡ್‌–19ರ ಎರಡನೇ ಅಲೆಯು ಈ ಪ್ರಮಾಣದಲ್ಲಿ ಹರಡಲು ಚುನಾವಣಾ ಆಯೋಗವೇ ಕಾರಣ. ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬಹುದು ಎಂದು ಮದ್ರಾಸ್‌ ಹೈಕೋರ್ಟ್‌ ಕೆಲ ದಿನಗಳ ಹಿಂದೆ ಹೇಳಿತ್ತು. ಈ ಅಭಿಪ್ರಾಯಕ್ಕೆ ಮಾಧ್ಯಮದ ಮೂಲಕ ವ್ಯಾಪಕ ಪ್ರಚಾರ ಸಿಕ್ಕಿದೆ. ಅದು ಆಯೋಗದ ವರ್ಚಸ್ಸು ಕುಂದಿಸಿದೆ ಎಂದು ಆಯೋಗದ ಪ‍ರವಾಗಿ ವಾದಿಸಿದ ವಕೀಲರು ಹೇಳಿದರು. 

ಮುದ್ರಣ ಮಾಧ್ಯಮ ಮತ್ತು ಸುದ್ದಿ ವಾಹಿನಿಗಳು ಮೌಖಿಕ ಅಭಿಪ್ರಾಯಗಳನ್ನು ಪ್ರಸಾರ ಮಾಡುವುದಕ್ಕೆ ತಡೆ ಕೊಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್‌ ರಾಮಮೂರ್ತಿ ಅವರ ಪೀಠವು ಹೇಳಿತು.

ಕೋವಿಡ್‌–19 ತಡೆ ಲಸಿಕೆ, ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್‌ ಲಭ್ಯತೆ ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಿದ ವಿಷಯದ ವಿಚಾರಣೆ ಸಂದರ್ಭದಲ್ಲಿ ಆಯೋಗದ ವಕೀಲರು ವಿಷಯ ಪ್ರಸ್ತಾಪಿಸಿದರು. 

‘ಈ ವಿಷಯದ (ಮೌಖಿಕ ಅಭಿಪ್ರಾಯ ಪ್ರಸಾರಕ್ಕೆ ತಡೆ) ಬಗ್ಗೆ ಮುಂದೆ ಯೋಚನೆ ಮಾಡಬಹುದು. ಈಗ, ತುರ್ತಾಗಿ ಗಮನಿಸಬೇಕಾದ ವಿಷಯಗಳಿವೆ’ ಎಂದು ಪೀಠವು ಹೇಳಿತು. 

ನ್ಯಾಯಾಲಯದ ಅಭಿಪ್ರಾಯದ ಆಧಾರದಲ್ಲಿ ಆಯೋಗದ ವಿರುದ್ಧ ದೂರು ದಾಖಲಿಸಲು ಹಲವು ಮಂದಿ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದ್ದಾರೆ. ಎಫ್‌ಐಆರ್‌ ಕೂಡ ದಾಖಲಾಗಿದೆ ಎಂದು ವಕೀಲರು ಹೇಳಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು