ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 66 ವಯಸ್ಕರಿಗೆ 2 ಡೋಸ್ ಲಸಿಕೆ: ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮುಂದು

Last Updated 5 ಡಿಸೆಂಬರ್ 2021, 15:43 IST
ಅಕ್ಷರ ಗಾತ್ರ

ನವದೆಹಲಿ: ಅರ್ಹ ವಯಸ್ಕರಿಗೆ ಕೋವಿಡ್‌ನ ಎರಡೂ ಡೋಸ್‌ ಲಸಿಕೆ ನೀಡಿರುವುದರಲ್ಲಿ ಕರ್ನಾಟಕ ತನ್ನ ನೆರೆಯ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ರಾಜ್ಯದ 4.72 ಕೋಟಿ ವಯಸ್ಕರಲ್ಲಿ ಶೇ 66ರಷ್ಟು ಜನರಿಗೆ ಎರಡೂ ಡೋಸ್‌ ಲಸಿಕೆಯನ್ನು ನೀಡಲಾಗಿದೆ.

ಇದಕ್ಕೆ ಹೋಲಿಸಿದರೆ ಕೇರಳದಲ್ಲಿ ಶೇ 63ರಷ್ಟು ಹಾಗೂ ತೆಲಂಗಾಣದಲ್ಲಿ ಶೇ 60ರಷ್ಟು ವಯಸ್ಕರಿಗೆ ಲಸಿಕೆ ನೀಡಲಾಗಿದೆ. ಆದರೆ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಶೇ 50ಕ್ಕಿಂತಲೂ ಕಡಿಮೆ ವಯಸ್ಕರಿಗೆ ಲಸಿಕೆ ನೀಡಲಾಗಿದೆ.

ಒಟ್ಟಾರೆ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ 50ಕ್ಕೂ ಅಧಿಕ ವಯಸ್ಕರಿಗೆ ಲಸಿಕೆ ನೀಡಿದ್ದರೆ, 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ 75ಕ್ಕೂ ಅಧಿಕ ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ ನೀಡುವಲ್ಲಿ ಯಶಸ್ಸು ಸಾಧಿಸಿವೆ.

ಚಿಕ್ಕ ರಾಜ್ಯವಾಗಿರುವ ಗೋವಾದಲ್ಲಿ ಶೇ 66ರಷ್ಟು ವಯಸ್ಕರಿಗೆ ಲಸಿಕೆಯನ್ನು ನೀಡಿದ್ದು, ಗಮನಾರ್ಹ ಸಾಧನೆ ಮಾಡಿದೆ.ದೇಶದಲ್ಲಿ ಕೋವಿಡ್ ರೂಪಾಂತರ ತಳಿ ಓಮೈಕ್ರಾನ್‌ನ ಭೀತಿ ಹೆಚ್ಚುತ್ತಿರುವಂತೆ ಲಸಿಕೆಯ ಪ್ರಗತಿಯ ಈ ಅಂಕಿ ಅಂಶಗಳು ಹೊರಬಿದ್ದಿವೆ.

‘ಈಗ ಲಭ್ಯವಿರುವ ಲಸಿಕೆ ರೋಗ ತಡೆಯುವುದಿಲ್ಲ ಎಂದು ಗಮನದಲ್ಲಿಟ್ಟುಕೊಳ್ಳಬೇಕು. ಅಂದರೆ ಲಸಿಕೆ ಪಡೆದಿದ್ದರೂ ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಕಟ್ಟುನಿಟ್ಟಾಗಿಮಾರ್ಗಸೂಚಿಗಳನ್ನು ಪಾಲಿಸಬೇಕು. ಗುಂಪು ಸೇರುವಿಕೆಯನ್ನು ಆದಷ್ಟು ತಪ್ಪಿಸಬೇಕು’ ಎಂದು ಜಾರ್ಜ್‌ ಇನ್‌ಸ್ಟಿಟ್ಯೂಟ್‌ ಫಾರ್ ಗ್ಲೋಬಲ್‌ ಹೆಲ್ತ್‌ನ ಹಿರಿಯ ಸಂಶೋಧಕ ಒಮೆನ್‌ ಜಾನ್‌ ಹೇಳಿದರು.

ಲಸಿಕೆ ಮೈಲುಗಲ್ಲು: ಈ ಮಧ್ಯೆ, ಭಾರತವು ತನ್ನ ವಯಸ್ಕ ಜನಸಂಖ್ಯೆಯ ಶೇ 50ರಷ್ಟು ಜನರಿಗೆ ಪೂರ್ಣವಾಗಿ ಎರಡೂ ಡೋಸ್ ಲಸಿಕೆ ನೀಡಿದ ಗುರಿಯನ್ನು ಭಾನುವಾರ ಸಾಧಿಸಿತು. ಅಲ್ಲದೆ, ಶೇ 85ರಷ್ಟು ಜನಸಂಖ್ಯೆಗೆ ಒಂದು ಡೋಸ್‌ ಲಸಿಕೆ ನೀಡಲಾಗಿದೆ.

‘ಇದೊಂದು ಹೆಮ್ಮೆಯ ಸಂಗತಿ. ಅರ್ಹ ಜನಸಂಖ್ಯೆಯ ಶೇ 50ರಷ್ಟು ಜನರಿಗೆ ಪೂರ್ಣ ಲಸಿಕೆ ನೀಡಲಾಗಿದೆ. ನಾವು ಎಲ್ಲರೂ ಒಟ್ಟುಗೂಡಿ ಕೋವಿಡ್‌ ವಿರುದ್ಧ ಜಯಗಳಿಸಬಹುದು’ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಹೇಳಿದರು.

ವರ್ಷಾಂತ್ಯಕ್ಕೆ ಕೆಲವೇ ವಾರ ಉಳಿದಿದೆ. ಹೀಗಾಗಿ, ದೇಶದ ಎಲ್ಲ 94.47 ಕೋಟಿ ವಯಸ್ಕರಿಗೆ ವರ್ಷಾಂತ್ಯದ ವೇಳೆಗೆ ಲಸಿಕೆ ನೀಡುವುದು ಅಸಾಧ್ಯ. ಆದರೆ, ಶೇ 85ರಷ್ಟು ಜನರಿಗೆ ಸಿಂಗಲ್‌ ಡೋಸ್‌ ನೀಡಿರುವ ಕಾರಣ ಇಲ್ಲಿ ಗುರಿ ಸಾಧಿಸಲು ಅವಕಾಶಗಳಿವೆ. ಆದರೆ, ಶೇ 100ಗುರಿ ಸಾಧನೆಗೆ ಲಸಿಕೆ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸುವುದು ಅಗತ್ಯವಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ನಿತ್ಯ 78.69 ಲಕ್ಷ ಜನರಿಗೆ ಲಸಿಕೆ ನೀಡಿದ್ದರೆ, ಈ ಸಂಖ್ಯೆ ಅಕ್ಟೋಬರ್ ತಿಂಗಳಲ್ಲಿ 55.77 ಲಕ್ಷ ಮತ್ತು ನವೆಂಬರ್ ತಿಂಗಳಲ್ಲಿ 59.32 ಲಕ್ಷಕ್ಕೆ ಕುಸಿದಿದೆ. ಸುದೀರ್ಘ ಅಂತರದ ನಂತರ ಶನಿವಾರವಷ್ಟೇ ಭಾರತದಲ್ಲಿ ಒಂದೇ ದಿನ ಒಂದು ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT